ರಿಷಬ್‌ಗೆ ಹುಷಾರ್ ಎಂದ ವಾಟಾಳ್ ನಾಗರಾಜ್: ಯಾಕೆ?
ಬೆಂಗಳೂರು, ಮಾರ್ಚ್ 18: ಬೆಳಗಾವಿಯಲ್ಲಿ ಮರಾಠಿ ಪುಂಡರ ದಬ್ಬಾಳಿಕೆ ಖಂಡಿಸಿ ಕನ್ನಡ ಪರ ಸಂಘಟನೆಗಳು ಇದೇ ಶನಿವಾರ ಅಂದರೆ ಮಾರ್ಚ್ 22ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಮರಾಠಿಗರ ದಬ್ಬಾಳಿಕೆ ವಿರುದ್ಧ ಕಠಿಣ ಕ್ರಮ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ಬಂದ್ ಯಶಸ್ವಿಗೊಳಿಸಲು ಎಲ್ಲರೂ ಕೈ ಜೋಡಿಸುವಂತೆ ಕನ್ನಡ ಪರ ಹೋರಾಟಗಾರರಿಗೆ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.
ಇಂದು ಬೆಂಗಳೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಾಟಾಳ್ ನಾಗರಾಜ್, ಮಾರ್ಚ್ 22ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆ ತನಕ ಕರ್ನಾಟಕ ಬಂದ್ ನಿಶ್ಚಿತ. ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ ತನಕ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದರು.

ಇದೇ ಶನಿವಾರ ಬೆಳಗ್ಗೆ 10:30ಕ್ಕೆ ನಡೆಯುವ ಪ್ರತಿಭಟನಾ ಮೆರವಣಿಗೆಯಲ್ಲಿ ಕನ್ನಡ ಪರ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ ವಾಟಾಳ್ ನಾಗರಾಜ್, ಮಾರ್ಚ್ 22ರಂದು ನಿಮ್ಮ ಸ್ವಾಭಿಮಾನಕ್ಕಾಗಿ ಯಾರು ವಾಹನ ಹತ್ತಬೇಡಿ ಎಂದು ಕರೆ ನೀಡಿದ್ದಾರೆ.
ಮಾರ್ಚ್ 22ರಂದು ಯಾರು ನಮ್ಮ ಮೆಟ್ರೋ ಹತ್ತಬೇಡಿ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜೊತೆ ಮಾತಾನಾಡಿದ್ದೇವೆ. ಅವತ್ತು ಬಸ್ ಓಡಿಸಬಾರದು ಎಂದು ಹೇಳಿದ್ದೇವೆ. ಇನ್ನೂ ಒಂದು ಸಲ ಹೇಳುತ್ತೇವೆ ಅವತ್ತು ಬಸ್ ಓಡಿಸಬಾರದು. ಚಾಲಕರು ಯಾರೇ ಇರಲಿ, ಬಸ್, ಆಟೋ, ಕಾರು ಚಾಲಕರಿಗೆ ಇದು ಸ್ವಾಭಿಮಾನ, ಮರ್ಯಾದೆ ಪ್ರಶ್ನೆಯಾಗಿದೆ ಎಂದು ಹೇಳಿದರು.
ಇನ್ನು ಕನ್ನಡ ಚಿತ್ರನಟರು ಛತ್ರಪತಿ ಶಿವಾಜಿ ಸಿನಿಮಾ ಮಾಡಿದರೆ ಕರ್ನಾಟಕದಲ್ಲಿ ಬಹಿಷ್ಕರಿಸುತ್ತೇವೆ. ಕನ್ನಡಿಗರ ಮೇಲಿನ ದೌರ್ಜನ್ಯವನ್ನು ಸಹಿಸಿಕೊಂಡಿರಬೇಕಾ ಎಂದ ವಾಟಾಳ್ ನಾಗರಾಜ್ ಈ ಮೂಲಕ ಪರೋಕ್ಷವಾಗಿ ಛತ್ರಪತಿ ಶಿವಾಜಿ ಸಿನಿಮಾ ಮಾಡಲು ಸಿದ್ಧರಾಗಿರುವ ನಟ ರಿಷಬ್ ಶೆಟ್ಟಿಗೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ಖ್ಯಾತ ನಿರ್ದೇಶಕ ಸಂದೀಪ್ ಸಿಂಗ್ ಅವರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ನಟಿಸಲಿದ್ದಾರೆ. ಖಡ್ಗ ಹಿಡಿದು ಛತ್ರಪತಿ ಶಿವಾಜಿ ಮಹಾರಾಜ್ ಲುಕ್‌ನಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿರುವ ಪೋಸ್ಟರ್ ವೈರಲ್ ಆಗುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸಿನಿಮಾ ಘೋಷಣೆ ಮಾಡಿದ ದಿನದಿಂದ ರಿಷಬ್ ಶೆಟ್ಟಿ ಈ ಪಾತ್ರದಲ್ಲಿ ನಟಿಸುವ ಬಗ್ಗೆ ವಿರೋಧ ವ್ಯಕ್ತವಾಗುತ್ತಿದ್ದು, ಕನ್ನಡದ ನಟ ರಿಷಬ್ ಶೆಟ್ಟಿ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.












Click it and Unblock the Notifications