ಜುಲೈ 12 ರಿಂದ 21ರವರೆಗೆ ವಿಧಾನಮಂಡಲ ಅಧಿವೇಶನ
ಬೆಂಗಳೂರು, ಜೂನ್ 28: ಜುಲೈ 12 ರಿಂದ 21 ರವರೆಗೆ ವಿಧಾನಮಂಡಲದ ಅಧಿವೇಶನವು ವಿಧಾನಸೌಧದಲ್ಲಿ ನಡೆಯಲಿದೆ. ವಿಧಾನಮಂಡಲ ಮುಂಗಾರು ಅಧಿವೇಶನ ಇದಾಗಲಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯಿಸಲಾಗಿದ್ದು, ಸಂಪುಟ ಸಭೆಯ ಬಳಿಕ ಸಚಿವ ಕೃಷ್ಣಬೈರೇಗೌಡ ಅವರು ಈ ಮಾಹಿತಿಯನ್ನು ಸುದ್ದಿಗಾರರಿಗೆ ನೀಡಿದರು.
ವಿರೋಧ ಪಕ್ಷವಾದ ಬಿಜೆಪಿಯು ಶಕ್ತಿಶಾಲಿಯಾಗಿದ್ದು, ಗೊಂದಲಗಳಿಂದ ಕೂಡಿರುವ ಮೈತ್ರಿ ಸರ್ಕಾರವನ್ನು ಕುಟ್ಟಿ ಕೆಡವಲು, ಜನರ ಎದುರು ಸರ್ಕಾರದ ಕೊರತೆಗಳನ್ನು ತೆರೆದಿಡಲು ಮತ್ತೊಂದು ಅವಕಾಶ ದೊರೆತಿದೆ.

ಮೈತ್ರಿ ಸರ್ಕಾರಕ್ಕೆ ಸರ್ಕಾರದ ಸಾಧನೆಗಳನ್ನು, ರಾಜ್ಯದ ಜನರ ಪರವಾಗಿ ಹೊಸ ಮಸೂದೆಗಳನ್ನು ಮಂಡಿಸುವ, ಅಭಿವೃದ್ಧಿ ಕಾರ್ಯಕ್ಕೆ ಇನ್ನಷ್ಟು ಇಂಬು ನೀಡುವ ಅವಕಾಶವೂ ಇದಾಗಿರಲಿದೆ.
ಗ್ರಾಮ ವಾಸ್ತವ್ಯ, ಜಿಂದಾಲ್ ವಿವಾದ, ವಾಲ್ಮಿಕಿ ಜನಾಂಗಕ್ಕೆ ಮೀಸಲಾತಿ, ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ, ಬರ, ಕುಡಿಯುವ ನೀರಿನ ಸಮಸ್ಯೆ, ಶರಾವತಿ ನೀರು ಬೆಂಗಳೂರಿಗೆ ತರುವ ಯೋಜನೆ, ಉತ್ತರ ಕನ್ನಡ ಜಿಲ್ಲೆಗೆ ಜಿಲ್ಲಾ ಆಸ್ಪತ್ರೆ, ಕಬ್ಬು ಬೆಳೆಗಾರರ ಸಮಸ್ಯೆ, ಮಧ್ಯಂತರ ಚುನಾವಣೆ ಚರ್ಚೆ, ಆಪರೇಷನ್ ಕಮಲ, ಬಿಬಿಎಂಪಿ ಸಮಸ್ಯೆಗಳು, ಕಳೆದ ಲೋಕಸಭೆ ಚುನಾವಣೆ ಫಲಿತಾಂಶ, ಇನ್ನೂ ಹಲವು ವಿಷಯಗಳು ಈ ಅಧಿವೇಶನದಲ್ಲಿ ಚರ್ಚೆ ಆಗಲಿದೆ.












Click it and Unblock the Notifications