ಶುಕ್ರವಾರದ ವಿಧಾನಸಭೆ ಕಲಾಪದ ಹೈಲೈಟ್ಸ್

ಬೆಂಗಳೂರು, ಜ.24 : ವಿಧಾನಸಭೆ ಅಧಿವೇಶನದ ಮೂರನೇ ದಿನದ ಕಲಾಪ ಆರಂಭವಾಗಿದೆ, ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಗುಲ್ಬರ್ಗದಲ್ಲಿ ನಡೆದ ಶೂಟೌಟ್ ಪ್ರಕರಣದ ಬಗ್ಗೆ ಗೃಹ ಇಲಾಖೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು. ಮಲ್ಲಿಕಾರ್ಜುನ ಬಂಡೆ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಮಲ್ಲಿಕಾರ್ಜುನ ಬಂಡೆ ಸಾವಿನ ಬಗ್ಗೆ ಹಲವಾರು ಅನುಮಾನಗಳಿವೆ. ಬಂಡೆ ಅವರ ಪತ್ನಿ ಸಹ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದಾರೆ. ಗುಲ್ಬರ್ಗದಲ್ಲಿ ಶೂಟೌಟ್ ನಡೆದಾಗ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಇರಲಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದರು. ಗೃಹ ಇಲಾಖೆ ಪ್ರಕರಣದ ಕುರಿತು ಸದನಕ್ಕೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು. [ಮಣ್ಣಲ್ಲಿ ಮಣ್ಣಾದ ಮಲ್ಲಿಕಾರ್ಜುನ ಬಂಡೆ]

Vidhana Soudha

ಶೂಟೌಟ್ ಪ್ರಕರಣದ ನಡೆದ ನಂತರ ಐಜಿಪಿ ವಜೀರ್ ಅಹ್ಮದ್ ನೀಡುರುವ ಹೇಳಿಕೆಗಳು ಅನುಮಾನವನ್ನು ಹುಟ್ಟು ಹಾಕಿವೆ. ಆದ್ದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದರು. ಶಾಸಕರಾದ ಬಸವರಾಜ ಬೊಮ್ಮಾಯಿ ಮುಂತಾದವರು ಗೃಹ ಸಚಿವರು ಈ ಕುರಿತು ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದರು.

ಸಿಎಂ ಉತ್ತರ : ಪ್ರತಿಪಕ್ಷಗಳ ಒತ್ತಾಯಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಮಲ್ಲಿಕಾರ್ಜು ಬಂಡೆ ಪ್ರಕರಣದಲ್ಲಿ ಮುಚ್ಚಿಡುವಂ ಅಂಶಗಳು ಏನು ಇಲ್ಲ. ಈಗಾಗಲೇ ಸರ್ಕಾರ ಪ್ರಕರಣದ ತನಿಖೆಯನ್ನು ಸಿಇಡಿಗೆ ವಹಿಸಿದ್ದು, ತನಿಖೆ ಪ್ರಗತಿಯಲ್ಲಿದೆ. ಆದ್ದರಿಂದ ಪ್ರಕರಣವನ್ನು ಸಿಬಿಐಗೆ ತನಿಖೆಗೆ ವಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕಟ್ಟಡ ಒಡೆದರೆ ಕಾದಿದೆ ಶಿಕ್ಷೆ : ವಿಧಾನಸೌಧ, ವಿಕಾಸಸೌಧ ಸೇರಿದಂತೆ ಇತರೆ ಸರ್ಕಾರಿ ಬಂಗಲೆಗಳನ್ನು ವಾಸ್ತು ನೆಪದಲ್ಲಿ ಒಡೆಯುವುದು, ಮೂಲ ವಿನ್ಯಾಸಕ್ಕೆ ಧಕ್ಕೆ ತರುವುದನ್ನು ನಿಯಂತ್ರಿಸಲು ಸರ್ಕಾರ ಸಮಗ್ರ ಮಸೂದೆಯೊಂದನ್ನು ಜಾರಿಗೆ ತರಲಿದೆ ಎಂದು ವಿಧಾನಪರಿಷತ್ ಸಭಾನಾಯಕ ಎಸ್.ಆರ್.ಪಾಟೀಲ್ ಹೇಳಿದ್ದಾರೆ. ಜೆಡಿಎಸ್ ನಾಯಕ ಎಂ.ಸಿ.ನಾಣಯ್ಯ ಪ್ರಶ್ನೆಗೆ ವಿಧಾನಪರಿಷತ್ತಿನಲ್ಲಿ ಅವರು ಉತ್ತರಿಸಿದರು.

ಅವ್ಯವಹಾರ ನಡೆದಿಲ್ಲ : ಕೈಮಗ್ಗ ನಿಗಮದಿಂದ ಆರೋಗ್ಯ ಇಲಾಖೆಗೆ ಸರಬರಾಜು ಮಾಡುತ್ತಿರುವ ಮಡಿಲು ಕಿಟ್‌ಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಜವಳಿ ಖಾತೆ ಸಚಿವ ಬಾಬುರಾವ್ ಸಿಂಚನಸೂರು ವಿಧಾನಪರಿಷತ್ತಿಗೆ ತಿಳಿಸಿದ್ದಾರೆ. ಎಂ.ಡಿ.ಲಕ್ಷ್ಮಿನಾರಾಯಣ ಪ್ರಶ್ನೆಗೆ ಉತ್ತರಿಸಿದ ಅವರು, ಕೈಮಗ್ಗ ನಿಗಮವು ಕಿಟ್ ಗಳಯನ್ನು ಪಾರದರ್ಶಕವಾಗಿ ನಡೆಸಿದೆ ಎಂದು ಹೇಳಿದ್ದಾರೆ.

ಅರ್ಜಿ ಸಲ್ಲಿಸಲು ಕಾಲಾವಕಾಶ : ವಸತಿ ಯೋಜನೆಗಳಡಿ ಮನೆಗಳನ್ನು ನಿರ್ಮಿಸಲು ಉದ್ದೇಶಿಸುವವರು ಅರ್ಜಿ ಸಲ್ಲಿಸಲು ಪ್ರಸಕ್ತ ಸಾಲಿನ ಫೆ.28ರವರೆಗೆ ಸಮಯ ವಿಸ್ತರಿಸಲಾಗಿದೆ ಎಂದು ವಸತಿ ಸಚಿವ ಅಂಬರೀಶ್ ವಿಧಾನಪರಿಷತ್ತಿಗೆ ತಿಳಿಸಿದ್ದಾರೆ. ಕೋಟಾ ಶ್ರೀನಿವಾಸ್ ಪೂಜಾರಿ ಪ್ರಶ್ನೆಗೆ ಉತ್ತರಿಸಿದ ಅವರು, ವಸತಿ ಯೋಜನೆ ಅಡಿಯಲ್ಲಿ ವಸತಿಗಾಗಿ ಅರ್ಜಿ ಸಲ್ಲಿಸಲು ಫೆಬ್ರವರಿ ಅಂತ್ಯದವರೆಗೆ ಕಾಲಾವಕಾಶ ನೀಡಲಾಗಿದೆ. ಫಲಾನುಭವಿಗಳು ತಮ್ಮ ಮನೆಯನ್ನು ಸರ್ಕಾರ ನೀಡುವ ಸಹಾಯಧನದ ನಾಲ್ಕು ಪಟ್ಟಿನಷ್ಟು ಅಂದರೆ ಗರಿಷ್ಠ 3 ಲಕ್ಷ ರೂ.ಗಳ ವರೆಗೂ ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.

14 ಸಾವಿರ ಕಿಮೀ ರಸ್ತೆ ಅಭಿವೃದ್ಧಿ : ಮುಂದಿನ ಐದು ವರ್ಷಗಳಲ್ಲಿ 14 ಸಾವಿರ ಕಿ.ಮೀ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ವಿಧಾನಸಭೆಗೆ ತಿಳಿಸಿದ್ದಾರೆ. ಕೇಂದ್ರ ಸರ್ಕಾರದಿಂದ 2012-13ನೇ ಸಾಲಿಗೆ ಸಾವಿರ ಕೋಟಿ ಅನುದಾನ ದೊರಕಿದೆ. ಈಗಾಗಲೇ 250 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಐಟಿಐ ಕಾಲೇಜುಗಳಲ್ಲಿ ಕೃಷಿ ಕೋರ್ಸ್ : ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಮುಂದಿನ ತಿಂಗಳಿನಿಂದ 15 ಸರ್ಕಾರಿ ಐಟಿಐ ಕಾಲೇಜುಗಳಲ್ಲಿ ಕೃಷಿ ಆಧಾರಿತ ಕೋರ್ಸ್‌ಗಳನ್ನು ಆರಂಭಿಸುವುದಾಗಿ ಕೃಷಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ. ವಿಧಾನಸಭೆಯಲ್ಲಿ ಈ ಕುರಿತು ಹೇಳಿಕೆ ನೀಡಿದ ಅವರು, ಇತ್ತೀಚೆಗೆ ಕೃಷಿ ಚಟುವಟಿಕೆ ಬಿಟ್ಟು ರೈತರು ಮತ್ತು ಅವರ ಮಕ್ಕಳು ಬೇರೆ ಕ್ಷೇತ್ರಗಳತ್ತ ಹೋಗುತ್ತಿದ್ದಾರೆ. ಇದನ್ನು ತಡೆಗಟ್ಟಿ ಕೃಷಿ ಕೂಡ ಲಾಭದಾಯಕ ಉದ್ಯಮ ಆಗಬೇಕು ಎಂಬ ಕಾರಣಕ್ಕಾಗಿ ಕೃಷಿ ಶಿಕ್ಷಣಕ್ಕೆ ಸರ್ಕಾರ ಒತ್ತು ನೀಡಿದೆ ಎಂದು ತಿಳಿಸಿದರು.

ಪ್ರವಾಸಿ ತಾಣಗಳ ಅಭಿವೃದ್ಧಿ : ಚಿತ್ರದುರ್ಗ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ. ರಘು ಆಚಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಚಿತ್ರದುರ್ಗ ಪ್ರವಾಸೋದ್ಯಮ ತಾಣಗಳನ್ನು ಆಕರ್ಷಣೀಯಗೊಳಿಸಲು ಹಲವು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದ್ದಾರೆ. ಇದಕ್ಕಾಗಿ 5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+