Government employee; ಸರ್ಕಾರಿ ನೌಕರ ಚುನಾವಣೆಯಲ್ಲಿ ಭಾಗವಹಿಸಬಹುದೇ?
ಬೆಂಗಳೂರು, ಏಪ್ರಿಲ್ 10; ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ವೇಳಾಪಟ್ಟಿ ಘೋಷಣೆ ಮಾಡಿದೆ. ರಾಜ್ಯದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.
ಚುನಾವಣಾ ಸಂದರ್ಭದಲ್ಲಿ ಸರ್ಕಾರಿ ನೌಕರರ ಪಾತ್ರವೇನು?. ಅವರು ರಾಜಕೀಯ ಮತ್ತು ಚುನಾವಣೆಯಲ್ಲಿ ಭಾಗವಹಿಸಬಹುದೇ?. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಮಿತಿಯ, ಕರ್ನಾಟಕ ರಾಜ್ಯ ನಾಗರೀಕ ಸೇವಾ (ನಡತೆ) ನಿಯಮಗಳ, 2021 ಅಡಿಯಲ್ಲಿ ಸರ್ಕಾರಿ ನೌಕರರ ಚುನಾವಣಾ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು? ಎಂಬುದರ ಮಾಹಿತಿ ನೀಡಿದೆ.

ಯಾವುದೇ ಸರ್ಕಾರಿ ನೌಕರನು, ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕಾರಣದಲ್ಲಿ ಭಾಗವಹಿಸುವಂಥ ಯಾವುದೇ ಸಂಘ ಸಂಸ್ಥೆಯ ಸದಸ್ಯನಾಗಿರತಕ್ಕದಲ್ಲ ಅಥವಾ ಅವುಗಳೊಂದಿಗೆ ಅನ್ಯಥಾ ಸಂಬಂಧ ಹೊಂದಿರತಕ್ಕದ್ದಲ್ಲ ಅಥವಾ ಯಾವುದೇ ರಾಜಕೀಯ ಚಳುವಳಿ ಅಥವಾ ಚಟುವಟಿಕೆಯಲ್ಲಿ ಭಾಗವಹಿಸತಕ್ಕದ್ದಲ್ಲ, ಅದರ ಸಹಾಯಾರ್ಥ ವಂತಿಗೆ ನೀಡತಕ್ಕದ್ದಲ್ಲ ಅಥವಾ ಅದಕ್ಕೆ ಯಾವುದೇ ರೀತಿಯ ನೆರವು ನೀಡತಕ್ಕದ್ದಲ್ಲ ಎಂದು ನಿಯಮ ಸ್ಪಷ್ಟಪಡಿಸಿದೆ.
ಕಾನೂನಿನ ಮೂಲಕ ಸ್ಥಾಪಿತವಾದ ಸರ್ಕಾರವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉರುಳಿಸುವಂಥದಾಗಿರುವ ಅಥವಾ ಉರುಳಿಸುವ ಉದ್ದೇಶ ಹೊಂದಿರುವ ಯಾವುದೇ ಚಳುವಳಿಯಲ್ಲಿ ಅಥವಾ ಚಟುವಟಿಕೆಯಲ್ಲಿ ಅವನ ಕುಟುಂಬದ ಯಾರೇ ಸದಸ್ಯನೂ ಭಾಗವಹಿಸದಂತೆ, ಅದರ ಸಹಾಯಾರ್ಥ ವಂತಿಗೆ ನೀಡದಂತೆ ಅಥವಾ ಇನ್ನಾವುದೇ ರೀತಿಯಿಂದ ನೆರವಾಗುವುದನ್ನು ತಡೆಗಟ್ಟಲು ಪ್ರಯತ್ನಿಸುವುದು ಪ್ರತಿಯೊಬ್ಬ ಸರ್ಕಾರಿ ನೌಕರನ ಕರ್ತವ್ಯವಾಗಿರತಕ್ಕದ್ದು ಎಂದು ಹೇಳಿದೆ.
ಅಂಥ ಯಾವುದೇ ಚಳುವಳಿಯಲ್ಲಿ ಅಥವಾ ಚಟುವಟಿಕೆಯಲ್ಲಿ ಅವನ ಕುಟುಂಬದ ಸದಸ್ಯರು ಭಾಗವಹಿಸುವುದನ್ನು, ವಂತಿಗೆ ನೀಡುವುದನ್ನು ಅಥವಾ ಬೇರ ರೀತಿಯಿಂದ ನೆರವು ನೀಡುವುದನ್ನು ತಡೆಗಟ್ಟಲು ಸರ್ಕಾರಿ ನೌಕರನಿಗೆ ಸಾಧ್ಯವಾಗದಿದ್ದರೆ, ಅವನು ಆ ವಿಷಯವನ್ನು ನಿಯಮಿಸಲಾದ ಪ್ರಾಧಿಕಾರಕ್ಕೆ ವರದಿ ಮಾಡತಕ್ಕದ್ದು.

ಯಾವುದೇ ಒಂದು ಪಕ್ಷವು ರಾಜಕೀಯ ಪಕ್ಷವೇ ಅಥವಾ ಯಾವುದೇ ಸಂಘ ಸಂಸ್ಥೆಯು ರಾಜಕೀಯದಲ್ಲಿ ಭಾಗವಹಿಸುತ್ತಿದೆಯೇ ಅಥವಾ ಯಾವುದೇ ಚಳವಳಿಯು ಅಥವಾ ಚಟುವಟಿಕೆಯು (2)ನೇ ಉಪನಿಯಮದ ವ್ಯಾಪ್ತಿಯೊಳಗೆ ಬರುತ್ತದೆಯೇ ಎಂಬ ಯಾವುದೇ ಪ್ರಶ್ನೆ ಉದ್ಭವಿಸಿದಾಗ, ಆ ಕುರಿತು ಸರ್ಕಾರದ ತೀರ್ಮಾನವೇ ಅಂತಿಮವಾಗಿರತಕ್ಕದ್ದು.
ಯಾರೇ ಸರ್ಕಾರಿ ನೌಕರನು ಸಂಸತ್ತು, ರಾಜ್ಯ ವಿಧಾನಮಂಡಲದ ಯಾವುದೇ ಸದನ ಅಥವಾ ಸ್ಥಳೀಯ ಪ್ರಾಧಿಕಾರದ ಚುನಾವಣೆಗಳಲ್ಲಿ ಪ್ರಚಾರ ಮಾಡತಕ್ಕದ್ದಲ್ಲ ಅಥವಾ ಅನ್ಯಥಾ ಹಸ್ತಕ್ಷೇಪ ಮಾಡತಕ್ಕದ್ದಲ್ಲ ಅಥವಾ ಆ ಸಂಬಂಧದಲ್ಲಿ ತನ್ನ ಪ್ರಭಾವವನ್ನು ಬೀರತಕ್ಕದ್ದಲ್ಲ ಅಥವಾ ಅದರಲ್ಲಿ ಭಾಗವಹಿಸತಕ್ಕದ್ದಲ್ಲ ಎಂದು ನಿಯಮಗಳು ಸ್ಪಷ್ಟಪಡಿಸುತ್ತವೆ.
ಯಾವುದೇ ಅಂಥ ಚುನಾವಣೆಯಲ್ಲಿ ತನ್ನ ಮತವನ್ನು ಚಲಾಯಿಸಲು ಅರ್ಹನಾಗಿರುವ ಸರ್ಕಾರಿ ನೌಕರನು ಮತ ಹಾಕಲು ತನಗಿರುವ ಹಕ್ಕನ್ನು ಚಲಾಯಿಸಬಹುದು. ಆದರೆ ಆತನು ಹಾಗೆ ಮಾಡುವಾಗ, ಯಾವ ರೀತಿಯಲ್ಲಿ ತಾನು ಮತ ಹಾಕಲು ಉದ್ದೇಶಿಸಿದ್ದಾನೆ ಅಥವಾ ಮತ ಹಾಕಿದ್ದೇನೆ ಎಂಬ ಬಗ್ಗೆ ಯಾವುದೇ ಸೂಚನೆಯನ್ನು ನೀಡತಕ್ಕದ್ದಲ್ಲ ಹಾಗೂ ಯಾರಿಗೆ ಮತ ನೀಡಲು ಉದ್ದೇಶಿಸಿದ್ದೇನೆ ಅಥವಾ ಯಾರಿಗೆ ಮತ ನೀಡಿದ್ದೇನೆ ಎಂಬ ಬಗ್ಗೆ ಯಾವುದೇ ಸೂಚನೆಗಳನ್ನು ನೀಡತಕ್ಕದಲ್ಲ.
ಚುನಾವಣೆ ನಡೆಯುವಾಗ, ಸರ್ಕಾರಿ ನೌಕರನು ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೂಲಕ ಅಥವಾ ಕಾನೂನಿನ ಮೇರೆಗೆ, ಆತನ ಮೇಲೆ ವಿಧಿಸಲಾಗಿರುವ ಕರ್ತವ್ಯದ ಯುಕ್ತ ನಿರ್ವಹಣೆಯಲ್ಲಿ, ಆತನು ನೆರವು ನೀಡುತ್ತಾನೆಂಬ ಏಕೈಕ ಕಾರಣಕ್ಕಾಗಿ ಈ ಉಪನಿಯಮದ ಉಪಬಂಧಗಳನ್ನು ಉಲ್ಲಂಘಿಸಿರುವನೆಂದು ಭಾವಿಸತಕ್ಕದ್ದಲ್ಲ ಎಂದು ನಿಯಮ ಹೇಳಿದೆ.
ನಿಯಮದ ವಿವರಣೆ: ಸರ್ಕಾರಿ ನೌಕರನು ಯಾವುದೇ ಚುನಾವಣಾ ಚಿಹ್ನೆಯನ್ನು ತನ್ನ ಮೇಲೆ ತನ್ನ ವಾಹನದ ಅಥವಾ ನಿವಾಸದ ಮೇಲೆ ಅಥವಾ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸಿದರೆ, ಅವನು, ಈ ಉಪ-ನಿಯಮದ ಅರ್ಥವ್ಯಾಪ್ತಿಯೊಳಗೆ ಚುನಾವಣೆಗೆ ಸಂಬಂಧಿಸಿದಂತೆ ತನ್ನ ಪ್ರಭಾವವನ್ನು ಬೀರುತ್ತಿದ್ಮಾನ ಎಂದು ಪರಿಗಣಿಸತಕ್ಕದ್ದು ಎಂದು ವಿವರಣೆ ನೀಡಲಾಗಿದೆ.
ಕ್ರೀಡಾ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವುದು ಇತ್ಯಾದಿ. ಯಾವುದೇ ಕ್ರೀಡಾ ಸಂಘದ ಆಯ್ಕೆ ಹುದ್ದೆಗೆ ಸ್ಪರ್ಧಿಸುವಾಗ ಹಾಗೂ ಇಂತಹ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸಂಬಂಧದಲ್ಲಿ ಸರ್ಕಾರಿ ನೌಕರನು ಸರ್ಕಾರದಿಂದ ಈ ಸಂಬಂಧ ಹೊರಡಿಸಲಾಗುವ ಸೂಚನೆಗಳಿಗೆ ಬದ್ಧನಾಗಿರತಕ್ಕದ್ದು ಎಂದು ಮಾಹಿತಿ ನೀಡಲಾಗಿದೆ.












Click it and Unblock the Notifications