ಕರ್ನಾಟಕ ಚುನಾವಣೆ; ಯುವ ಮತದಾರರ ಚಿತ್ತ ಎತ್ತ?
ಬೆಂಗಳೂರು, ಏಪ್ರಿಲ್ 16; ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಏಪ್ರಿಲ್ 11ರಂದು ಅಧಿಸೂಚನೆ ಪ್ರಕಟವಾಗಿದ್ದು, ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20 ಕೊನೆಯ ದಿನವಾಗಿದೆ. ಮೇ 10ರಂದು ಮತದಾನ ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಯುವ ಮತದಾರರ ಚಿತ್ತ ಯಾವ ಕಡೆ? ಎಂದು ರಾಜಕೀಯ ಪಕ್ಷಗಳು ಚಿಂತನೆ ನಡೆಸುತ್ತಿವೆ.
ಮೇ 10ರಂದು ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಯಾವ ಪಕ್ಷಕ್ಕೆ ಬಹುಮತ ಬರಲಿದೆ? ಎಂಬುದು ಕುತೂಹಲ. ರಾಜ್ಯದಲ್ಲಿ ಮೊದಲ ಬಾರಿಗೆ ಮತದಾನ ಮಾಡಲಿರುವ ಸುಮಾರು 11 ಲಕ್ಷ ಯುವ ಮತದಾರರು ರಾಜ್ಯದಲ್ಲಿ ಅಧಿಕಾರ ಯಾರು ನಡೆಸಬೇಕು? ಎಂದು ತೀರ್ಮಾನ ಮಾಡಲಿದ್ದಾರೆ. ಆದ್ದರಿಂದ ಯುವಕರನ್ನು ಸೆಳೆಯಲು ಪಕ್ಷಗಳು ಸಹ ವಿವಿಧ ತಂತ್ರ ರೂಪಿಸುತ್ತಿವೆ.

ಜನವರಿ 2022 ರಿಂದ 2023ರ ತನಕ 18 ವರ್ಷ ತುಂಬಿದ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಮಾರ್ಚ್ ತನಕ 9.58 ಲಕ್ಷ ಯುವ ಮತದಾರರು ಮತದಾರರಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಚುನಾವಣಾ ಆಯೋಗ ಏಪ್ರಿಲ್ 11ರ ತನಕ ಮತದಾರರಪಟ್ಟಿ ಸೇರಲು ಅವಕಾಶ ನೀಡಿತ್ತು. ಪಟ್ಟಿಗೆ ಹೆಸರು ಸೇರಿಸಿದವರು ಈ ಬಾರಿಯ ಚುನಾವಣೆಯಲ್ಲಿಯೇ ಮತದಾನ ಮಾಡಬಹುದಾಗಿದೆ.
ಡೆಕ್ಕನ್ ಹೆರಾಲ್ಡ್ ಪತ್ರಿಕೆ ವರದಿಯಂತೆ ಚುನಾವಣಾ ಆಯೋಗದ ಮಾಹಿತಿ ಪ್ರಕಾರ 2018ರಲ್ಲಿ ಯುವ ಮತದಾರರ ಸಂಖ್ಯೆ 7.7 ಲಕ್ಷ. ಆದರೆ ಈ ಬಾರಿಯ ಚುನಾವಣೆಯಲ್ಲಿ ಇದು ಸುಮಾರು 11 ಲಕ್ಷಕ್ಕೆ ಏರಿಕೆಯಾಗಲಿದೆ. ರಾಜಕೀಯ ತಜ್ಞ ಸಂದೀಪ್ ಶಾಸ್ತ್ರಿ ಪ್ರಕಾರ ಯಾವುದೇ ಪಕ್ಷ ಬಹುಮತ ಪಡೆಯಲು ಯುವ ಮತದಾರರನ್ನು ಸೆಳೆಯಲು ಸರಿಯಾದ ತಂತ್ರ ರೂಪಿಸಬೇಕು.
ಭವಿಷ್ಯದ ಬಗ್ಗೆ ಕನಸು; ಯುವ ಮತದಾರರು ಎಂದರೆ ಅವರು ಭವಿಷ್ಯದ ಬಗ್ಗೆ ಕನಸು ಉಳ್ಳವರು. ಅವರಿಗೆ ಭವಿಷ್ಯದ ಬಗ್ಗೆ ಭರವಸೆ ಬೇಕಿದೆ. ಕರ್ನಾಟಕದ ಮಟ್ಟಿಗೆ ಯುವ ಮತದಾರರು ಸಮಾಜದ ಬಗ್ಗೆ ಉತ್ತಮ ನಿಲುವು ಹೊಂದಬೇಕು. ಬಹುಮತ ಬೇಕಾಗಿರುವ ರಾಜಕೀಯ ಪಕ್ಷ ಯುವ ಮತದಾರರನ್ನು ಆಕರ್ಷಿಸಲು ಪ್ರಯತ್ನ ನಡೆಸಬೇಕು. ಕರ್ನಾಟಕದಲ್ಲಿ ಖಾತೆ ತೆರೆಯುವ ಉತ್ಸಾಹದಲ್ಲಿರುವ ಆಮ್ ಆದ್ಮಿ ಪಕ್ಷ ಯುವ ಮತ್ತು ಮಹಿಳಾ ಮತದಾರರ ಬೆಂಬಲ ಹೊಂದಿದೆ.

ಎಎಪಿ ದೆಹಲಿ ಮತ್ತು ಪಂಜಾಬ್ ರಾಜ್ಯದಲ್ಲಿ ಅಧಿಕಾರ ಪಡೆದಿದೆ. ಕರ್ನಾಟಕ ಎಎಪಿ ಅಧ್ಯಕ್ಷ ಪೃಥ್ವಿ ರೆಡ್ಡಿ ಪ್ರಕಾರ ಎರಡೂ ರಾಜ್ಯಗಳಲ್ಲಿ ಪಕ್ಷ ಶೇ 55ರಷ್ಟು ಯುವ ಮತ್ತು ಮಹಿಳಾ ಮತದಾರರ ಬೆಂಬಲ ಪಡೆದಿತ್ತು. ಹಣ ಮತ್ತು ಅಧಿಕಾರದತ್ತ ಯುವ ಮತದಾರರು ವಾಲುತ್ತಿಲ್ಲ. ಅವರಿಗೆ ಭವಿಷ್ಯದ ಭರವಸೆ ಬೇಕಿದೆ. ಅಲ್ಲದೇ ಒಂದೇ ಪಕ್ಷ ಬಹುಮತ ಬರುವಂತೆ ಮತದಾನ ಮಾಡುವ ಪ್ರವೃತ್ತಿ ಯುವಕರಲ್ಲಿ ಹೆಚ್ಚುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜಾತಿ ಲೆಕ್ಕಾಚಾರ, ಸ್ಥಳೀಯ ಆದ್ಯತೆಗಳಿಗಿಂತ ಹೊಸ ಮತದಾರರು ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಮತದಾನ ಮಾಡುತ್ತಾರೆ. ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಕುಮಾರ್ ಕೆ. ಸಿ. ಅವರು ಹೇಳುವ ಪ್ರಕಾರ ಯುವ ಮತದಾರರು ಪಕ್ಷಗಳ ಮುಂದಿನ ಯೋಜನೆಯನ್ನು ತಿಳಿದುಕೊಳ್ಳಲು ಬಯಸುತ್ತಾರೆ.
ಬಿಜೆಪಿ ರಾಜ್ಯಾದ್ಯಂತ ಯುವ ಮತದಾರರ ಜೊತೆ 'ಯುವ ಸ್ಪಂದನ' ಎಂಬ ಸಂವಾದ ಕಾರ್ಯಕ್ರಮವನ್ನು ಪಕ್ಷದ ಹಿರಿಯ ನಾಯಕರ ಜೊತೆ ನಡೆಸಿದೆ. ಜಾತಿ ಆಧಾರಿತ ರಾಜಕಾರಣಕ್ಕೆ ಹೊಸ ಮತದಾರರು ಮಣೆ ಹಾಕುತ್ತಿಲ್ಲ. ಸಾಮಾಜಿಕ ತಾಲತಾಣಗಳ ಮೂಲಕವೂ ಹೊಸ ಮತದಾರರನ್ನು ಸಂಪರ್ಕಿಸಿ ಅಭಿಪ್ರಾಯ ಸಂಗ್ರಹಣೆ ಮಾಡಿದಾಗ ಹಲವು ಹೊಸ ಅಂಶಗಳು ಪಕ್ಷಗಳಿಗೆ ಸಿಕ್ಕಿವೆ.
ಮತದಾನ ಪ್ರಮಾಣ ಕಡಿಮೆ; ರಾಜಕೀಯ ಪಕ್ಷಗಳು ನಗರ ಪ್ರದೇಶಗಳತ್ತ ಹೆಚ್ಚಿನ ಗಮನ ಹರಿಸಬೇಕಿದೆ. ಚುನಾವಣೆಗಳಲ್ಲಿ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ. ಅಲ್ಲದೇ ಯುವ ಮತದಾರರು ಈ ಪ್ರದೇಶದಲ್ಲಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ರಾಜಕೀಯ ಪಕ್ಷಗಳು ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಕಾಂಗ್ರೆಸ್ ಪಕ್ಷ ಬೆಂಗಳೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ದಾವಣಗೆರೆಯಲ್ಲಿ ಯುವ ಮತದಾರರನ್ನು ಸೆಳೆಯಲು ತಂತ್ರ ರೂಪಿಸಿದೆ.
'ಯುವ ಮತ' ಎಂಬ ಕಾರ್ಯಕ್ರಮದ ಮೂಲಕ ಪಕ್ಷ ಮತದಾನದ ಮಹತ್ವವನ್ನು ಯುವ ಜನರಿಗೆ ತಿಳಿಸುತ್ತಿದೆ. ಸುಳ್ಳು ಸುದ್ದಿಗಳ ಬಗ್ಗೆ ಅವರಿಗೆ ಮಾಹಿತಿ ನೀಡುತ್ತಿದೆ. ಪಕ್ಷ ಸುಮಾರು 14 ಸಾವಿರ ಮತದಾರರು ಮತದಾರರ ಪಟ್ಟಿಗೆ ಸೇರುವಂತೆ ಮಾಡಲು ಸಹಾಯ ಮಾಡಿದೆ.
ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯರ್ಶಿ ರಕ್ಷನ್ ರಾಮಯ್ಯ ಮಾತನಾಡಿ, "ನಾವು ಅವರಿಗೆ ಏನು ನೀಡುತ್ತೇವೆ ಎಂದು ನಾವು ಹೇಳಿಲ್ಲ. ಅವರಿಗೆ ಏನು ಬೇಕು? ಎಂದು ನಾವು ಕೇಳಿದ್ದೇವೆ. ಹವಾಮಾನ ಬದಲಾವಣೆ, ಉನ್ನತ ಶಿಕ್ಷಣದ ಬಗ್ಗೆ ಅವರು ಹೆಚ್ಚು ಮಾತನಾಡಿದ್ದಾರೆ" ಎಂದು ಹೇಳಿದ್ದಾರೆ.
ಯುವ ಮತದಾರರನ್ನು ಸೆಳೆಯುವ ಬಗ್ಗೆ ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿದ್ದಾರೆ, ನಮ್ಮ ಪ್ರಾಣಳಿಕೆಯಲ್ಲಿಯೇ ನಾವು ಶಿಕ್ಷಣ ಮತ್ತು ಯುವಕರಿಗೆ ಉದ್ಯೋಗ ನೀಡುವ ಕುರಿತು ಅಂಶಗಳನ್ನು ದಾಖಲು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.












Click it and Unblock the Notifications