1 ವರ್ಷದಿಂದ ಆರೋಗ್ಯ ಇಲಾಖೆಯ ಸಹಾಯವಾಣಿ 104 ಸ್ಥಗಿತ: ಏಕೆ ತಿಳಿಯಿರಿ
ಬೆಂಗಳೂರು, ಜನವರಿ 13: ಕರ್ನಾಟಕದಲ್ಲಿ ಸಾವಿರಾರು ಕರೆಗಳನ್ನು ಸ್ವೀಕರಿಸಿ ಆರೋಗ್ಯ ಕುರಿತು ಮಾಹಿತಿ ಒದಗಿಸುತ್ತಿದ್ದ 'ಆರೋಗ್ಯ ಸಹಾಯವಾಣಿ 104' ಸುಮಾರು ಒಂದು ವರ್ಷದಿಂದ ಸ್ಥಗಿತಗೊಂಡಿದೆ.
ಆರೋಗ್ಯ ಮೂಲಭೂತ ಸಲಹೆ, ಮಾಹಿತಿ ಒದಗಿಸಲು ಆರೋಗ್ಯ ಇಲಾಖೆ ಸಹಾಯವಾಣಿ 104 ಕಾಲ್ ಸೆಂಟರ್ ಹೊಂದಿದೆ.
ಇದು ಪಿರಮಲ್ ಸ್ವಾಸ್ಥ್ಯ ಮ್ಯಾನೇಜ್‌ಮೆಂಟ್ ರಿಸರ್ಚ್ ಇನ್‌ಸ್ಟಿಟ್ಯೂಟ್ (PSMRI) ಸಹಯೋಗದಲ್ಲಿ ಆರೋಗ್ಯ ಇಲಾಖೆ ನಿರ್ವಹಿಸುತ್ತದೆ. ದಿನದ 24 ಗಂಟೆಯು ಸೇವೆ ನೀಡಲೆಂದು 2013ರ ಜೂನ್ ನಲ್ಲಿ ಪ್ರಾರಂಭಿಸಲಾಯಿತು. ಆದರೆ ಕಳೆದ ವರ್ಷ 2022 ಫೆಬ್ರವರಿ 15 ರಿಂದ ಜನರಿಗೆ ಸಹಾಯವಾಣಿ ಸೇವೆ ಲಭ್ಯವಾಗುತ್ತಿಲ್ಲ.
ಆರಂಭಿಕ ಕಂಪನಿ PSMRI ನ ಗುತ್ತಿಗೆಯನ್ನು ಮೂರು ವರ್ಷದ ಅವಧಿಗೆ ವಿಸ್ತರಿಸಲಾಯಿತು. ಅಲ್ಲಿಂದ 2022 ಫೆಬ್ರವರಿ 15ವರೆಗೆ ಸೇವೆ ಮುಂದುವರೆಯಿತು. ಅವಧಿ ಮುಗಿದ ನಂತರ ಸಹಾಯವಾಣಿ ಸೇವೆ ಮುಂದುವರೆಸಲು ಕರೆಯಲಾದ ಮೊದಲ ಟೆಂಡರ್ ಕಾರ್ಯರೂಪಕ್ಕೆ ಬರಲಿಲ್ಲ. ಮತ್ತೆ ಎರಡನೇ ಬಾರಿಗೆ ಟೆಂಡರ್ ಕರೆಯಿತಾದರೂ ಟೆಂಡರ್ ಅಂಗೀಕಾರವಾಯತು. ಆದರೆ ಯೋಜನೆ ಇನ್ನೂ ಆರಂಭವಾಗಿಲ್ಲ. ಈ ಸಂಬಂಧದ ಕಡತಗಳು ಸದ್ಯಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಬಳಿ ಇದೆ ಎನ್ನಲಾಗಿದೆ.

ಖಿನ್ನತೆ, ಆತಂಕ, ಒತ್ತಡದ ಕರೆಗಳಿಗೆ ಮಾಹಿತಿ
ಟೆಲಿಮೆಡಿಕಲ್ ಸಮಾಲೋಚನೆ, ಆರೋಗ್ಯ ಶಿಕ್ಷಣ, ಸರ್ಕಾರದ ಯೋಜನೆಗಳು ಮತ್ತು ಆರೋಗ್ಯ ಸೇವೆಗಳ ಬಗ್ಗೆ ಮಾಹಿತಿ, ಕುಂದುಕೊರತೆ ಪರಿಹಾರ ಮತ್ತು ಪ್ರಶ್ನೆ ಪರಿಹಾರದಂತಹ ವಿವಿಧ ಅಂಶಗಳಲ್ಲಿ ನಾಗರಿಕರಿಗೆ ವೈಯಕ್ತಿಕ ಸಹಾಯವನ್ನು ಒದಗಿಸಲು ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ಇದು ಒತ್ತಡ, ಖಿನ್ನತೆ, ಆತಂಕ, ಆತ್ಮಹತ್ಯಾ ಪ್ರವೃತ್ತಿಗಳು ಮತ್ತು ಆಘಾತದ ನಂತರದ ಚೇತರಿಕೆ ಹೊಂದಲು ಸಹಾಯವಾಣಿ ನೆರವಾಗಿತ್ತು. ಮುಖ್ಯವಾಗಿ ಇಲ್ಲಿ ಹಲವರಿಗೆ ಆರೋಗ್ಯ ವಿಚಾರದಲ್ಲಿ ಗೌಪ್ಯ ವೈದ್ಯಕೀಯ ಮತ್ತು ಮಾನಸಿಕ ಸಮಾಲೋಚನೆ ಸಹ ನೀಡಲಾಗಿದೆ.

ಟೆಂಡರ್ : ಕಂಪನಿಗೆ ಸ್ವೀಕಾರ ಪತ್ರ ನೀಡಬೇಕಿದೆ
ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಡಿ ಅವರು, ಹೆಚ್ಚು ಬಿಡ್ ಮಾಡಿದವರಿಗೆ ಟೆಂಡರ್ ನೀಡಲಾಗಿದೆ. ಅವರಿಗೆ ಕಾರ್ಯ ಸ್ವೀಕಾರ ಪತ್ರ ನೀಡುವುದು ಇನ್ನು ಬಾಕಿ ಇದೆ ಎಂದು ತಿಳಿಸಿದ್ದಾರೆ.
ವೈದ್ಯರು, ತಜ್ಞರು, ಕ್ಷೇತ್ರ ಆರೋಗ್ಯ ಕಾರ್ಯಕರ್ತರು ಮತ್ತು ಆಸ್ಪತ್ರೆ/ಚಿಕಿತ್ಸಾಲಯ, ರೋಗನಿರ್ಣಯ ಕೇಂದ್ರಗಳು ಮತ್ತು ರಕ್ತನಿಧಿಗಳಂತಹ ಆರೋಗ್ಯ ಕೇಂದ್ರಗಳಂತಹ ಆರೋಗ್ಯ ಸೇವೆ ವಿತರಣೆ ಬಗ್ಗೆಯು ಜನರಿಗೆ ಮಾಹಿತಿ ನೀಡಿದೆ. ಈ ರೀತಿ ಆರೋಗ್ಯ ಇಲಾಖೆಯಲ್ಲಿ ಪ್ರಮುಖ ಅಂಗವಾಗಿ ಕಾರ್ಯ ನಿರ್ವಹಿಸಿತ್ತು.

ಸಹಾಯವಾಣಿಗೆ ನಿತ್ಯ 25 ಸಾವಿರ ಕರೆ
ಆರಂಭಿಕ (2013) ವರ್ಷದಲ್ಲಿ ಇಲ್ಲಿಗೆ ದಿನಕ್ಕೆ 10,000 ಕರೆಗಳು ಬರುತ್ತಿದ್ದವು. ಕೊನೆಕೊನೆಗೆ ಪ್ರತಿನಿತ್ಯ ಸುಮಾರು 25,000 ಕರೆಗಳನ್ನು ನಿಯೋಜನೆಯಾಗಿದ್ದ ಸುಮಾರು 700 ಸಲಹೆಗಾರರು ಸ್ವೀಕರಿಸಿ ಆರೋಗ್ಯ ಮಾಹಿತಿ ಒದಗಿಸಿದ್ದಾರೆ.
ಹುಬ್ಬಳ್ಳಿ ಸಹಾಯವಾಣಿ ಕೇಂದ್ರದಲ್ಲಿ ನಿತ್ಯ ಹೆಚ್ಚು ಕರೆಗಳು ಬರುವ ಸಂಬಂಧ 100 ಆಸನಗಳ ಮತ್ತೊಂದು ಕಾಲ್ ಸೆಂಟರ್ ಕೇಂದ್ರವನ್ನು ಫೆಬ್ರವರಿ 2018 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು. ಕೆಲವು ಫಾಲೋಅಪ್ ಕರೆಗಳನ್ನು ಹೊರತುಪಡಿಸಿ ಒಟ್ಟಾರೆ ಈವರೆಗೆ ಸುಮಾರು ನಾಲ್ಕು ಕೋಟಿಗೂ ಹೆಚ್ಚು ಮಂದಿ ಸಹಾಯವಾಣಿಗೆ ಕರೆ ಮಾಡಿದ್ದಾರೆ.

ಕೋವಿಡ್ ವೇಳೆ ಆಪ್ತಮಿತ್ರ ಜೊತೆ ಕಾರ್ಯ
ಈ 104 ಸಹಾಯವಾಣಿಯು ಸುಮಾರು ಮೂರು ವರ್ಷ ಕೋವಿಡ್ ಸಂದರ್ಭದಲ್ಲಿ ಆಪ್ತಿಮಿತ್ರ ಸಹಾಯವಾಣಿ -14410 ಜೊತೆಗೆ ಕಾರ್ಯ ನಿರ್ವಹಿಸಿದೆ. ಸಾಂಕ್ರಾಮಿಕ ಸಮಯದಲ್ಲಿ ಜನರು ಭಯಗೊಂಡು ಕರೆ ಮಾಡಿದ ಪ್ರಮಾಣ ಶೇ.70ರಷ್ಟು ಎನ್ನಬಹುದು. ಕೋವಿಡ್ ಕಡಿಮೆಯಾಗಿದ್ದರ ಹಿನ್ನೆಲೆಯಲ್ಲಿ ಆಪ್ತಮಿತ್ರ ಸಹಾಯವಾಣಿಯನ್ನು ಸ್ಥಗಿತಗೊಳಿಸಲಾಗಿದೆ. ಪುನಾರಂಭಗೊಳ್ಳುವುದು ಅನುಮಾನ ಎನ್ನಲಾಗಿದೆ.
ಸದ್ಯ ಸೇವೆ ಸ್ಥಗಿತಗೊಳಿಸಿರುವ 104 ಸಹಾಯವಾಣಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಕೆಲಸವಿಲ್ಲದೇ ಪರಿತಪಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅವರೆಲ್ಲ ಹೊಸದಾಗಿ ಟೆಂಡರ್ ಕರೆದು ಕಾಲ್ ಸೆಂಟರ್ ಆರಂಭಕ್ಕೆ ಕೂಡಲೇ ನೀಡಿ ಕೇಂದ್ರ ಆರಂಭಿಸುವಂತೆ ಹಾಗೂ ಈ ಬಗ್ಗೆ ಖಚಿತತೆ ನೀಡುವಂತೆ ಒತ್ತಾಯಿಸಿದ್ದಾರೆ.












Click it and Unblock the Notifications