H3N2: ಕರ್ನಾಟಕದಲ್ಲಿ ಹೈಅಲರ್ಟ್- ಇಲ್ಲಿವೆ ಸೋಂಕಿನ ಲಕ್ಷಣ, ಅಂಕಿಅಂಶ, ಆರೋಗ್ಯ ಇಲಾಖೆಯ ಸಿದ್ಧತೆಗಳು- ತಿಳಿಯಿರಿ
ಎಚ್3ಎನ್2 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಸೋಂಕಿನ ಲಕ್ಷಣ, ಅಂಕಿಅಂಶ, ಆರೋಗ್ಯ ಇಲಾಖೆಯ ಸಿದ್ಧತೆಗಳ ಬಗ್ಗೆ ಇಲ್ಲಿ ತಿಳಿಯಿರಿ
ಬೆಂಗಳೂರು, ಮಾರ್ಚ್ 06: ತೀವ್ರ ಜ್ವರಕ್ಕೆ ಕಾರಣವಾಗುವ ವೈರಸ್‌ಗಳ ಉಪವಿಭಾಗವಾದ ಇನ್‌ಫ್ಲುಯೆಂಜಾ H3N2 ಗೆ ಸಂಬಂಧಿಸಿದ ಸೋಂಕು ಪ್ರಕರಣಗಳು ರಾಜ್ಯದಲ್ಲಿ ದಿನೇದಿನೇ ಹೆಚ್ಚಾಗುತ್ತಿವೆ. ಈ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಕಳವಳ ವ್ಯಕ್ತಪಡಿಸಿದೆ. ಇದರ ನಂತರ ಕರ್ನಾಟಕದ ಆರೋಗ್ಯ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೋಮವಾರ ಉನ್ನತ ಮಟ್ಟದ ಸಭೆಗೆ ಕರೆ ನೀಡಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಡಾ ಕೆ ಸುಧಾಕರ್, 'ಕಳೆದ ಒಂದು ವಾರದಿಂದ, ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಕೇಂದ್ರ ಆರೋಗ್ಯ ಸಚಿವಾಲಯವು H3N2 ರೂಪಾಂತರದ ಬಗ್ಗೆ ಎಚ್ಚರಿಕೆ ನೀಡಿದೆ. ಮಾರ್ಚ್ 6 ರಂದು ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು' ಎಂದು ಸುಧಾಕರ್ ತಿಳಿಸಿದ್ದಾರೆ.

H3N2 ಸೋಂಕಿಗೆ ಸಂಬಂಧಿಸಿದ ಹತ್ತು ಅಂಶಗಳು ಇಲ್ಲಿವೆ
1- ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆರಡೂ ತೀವ್ರವಾದ ಕೆಮ್ಮು, ಮೂಗು ಸೋರುವಿಕೆ, ತೀವ್ರ ಜ್ವರ, ಕಣ್ಣುಗಳಲ್ಲಿ ಉರಿ ಮತ್ತು H3N2 ಗೆ ಸಂಬಂಧಿಸಿದ ಇತರ ರೋಗಲಕ್ಷಣಗಳೊಂದಿಗೆ ನೂರಾರು ಪ್ರಕರಣಗಳನ್ನು ದಾಖಲಿಸುತ್ತಿವೆ.
2- ಸೋಂಕಿನಿಂದ ಬಳಲುತ್ತಿರುವ ಶೇ 27 ಜನರು ಉಸಿರಾಟದ ತೊಂದರೆಯ ಬಗ್ಗೆ ದೂರು ನೀಡುತ್ತಿದ್ದಾರೆ. ಶೇ 16 ರಷ್ಟು ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ. ಇದನ್ನು ಆರೋಗ್ಯ ಇಲಾಖೆ ಆತಂಕಕಾರಿ ಪರಿಸ್ಥಿತಿ ಎಂದು ಪರಿಗಣಿಸಿದೆ.

3- ICMR ಅಂಕಿಅಂಶಗಳ ಪ್ರಕಾರ, H3N2 ಹೊಂದಿರುವ ರೋಗಿಗಳಲ್ಲಿ ಸೇ 92 ರೋಗಿಗಳು ಜ್ವರದಿಂದ ಬಳಲುತ್ತಿದ್ದಾರೆ. ಶೇ 86 ಕೆಮ್ಮು, ಶೇ 27 ಉಸಿರಾಟದ ತೊಂದರೆ ಮತ್ತು ಶೇ 16 ಉಬ್ಬಸದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
4- ವಿಶೇಷ ಒಪಿ ಮತ್ತು ಒಳರೋಗಿಗಳ ಘಟಕಗಳನ್ನು ರಾಜ್ಯಾದ್ಯಂತ ಸರಕಾರಿ ಆಸ್ಪತ್ರೆಗಳಲ್ಲಿ ಎಚ್3ಎನ್2 ರೋಗಿಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ.
5- ಜ್ವರ ಬಂದಿರುವ ರೋಗಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಶಕ್ತಿಯುತವಾದ ಪ್ರತಿಜೀವಕಗಳನ್ನು ಶಿಫಾರಸು ಮಾಡದಂತೆ ವೈದ್ಯರಿಗೆ ಸಲಹೆ ನೀಡಲಾಗಿದೆ.

6- ಮನೆಯಿಂದ ಹೊರಬರುವಾಗ ಮಾಸ್ಕ್ ಧರಿಸುವಂತೆ ವೈದ್ಯರು ಸೂಚಿಸಿದ್ದಾರೆ.
7- ಅಲ್ಲದೆ, ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 95 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿನಲ್ಲಿ 79 ಹೊಸ ಪ್ರಕರಣಗಳು ಪತ್ತೆಯಾಗಿವೆ.
8- ರಾಜ್ಯ ಮತ್ತು ಬೆಂಗಳೂರಿನಲ್ಲಿ 100 ದಿನಗಳ ನಂತರ ಕೋವಿಡ್ ಪ್ರಕರಣಗಳ ಹೆಚ್ಚಳದ ಪ್ರವೃತ್ತಿ ಕಂಡುಬಂದಿದೆ.
9- ರಾಜ್ಯವು ಒಟ್ಟು 391 ಸಕ್ರಿಯ ಕೋವಿಡ್ ಪ್ರಕರಣಗಳನ್ನು ಹೊಂದಿದೆ. ಪಾಸಿಟಿವ್ ಪ್ರಕರಣಗಳ ಪ್ರಮಾಣವು ಶೇಕಡಾ 2.44 ಕ್ಕೆ ಏರಿದೆ ಎಂದು ರಾಜ್ಯದಲ್ಲಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಅಂಕಿಅಂಶಗಳ ತಿಳಿಸಿವೆ.
10- ಕೆಮ್ಮು, ನೆಗಡಿ ಮತ್ತು ಜ್ವರದ ಲಕ್ಷಣಗಳಿರುವವರಿಂದ ದೂರವಿರಬೇಕು ಎಂದು ವೈದ್ಯರು ಸೂಚಿಸಿದ್ದಾರೆ.












Click it and Unblock the Notifications