2nd PUC Supplementary Exam: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ನೋಂದಣಿ ದಿನಾಂಕ, ಶುಲ್ಕದ ವಿವರ
2022-23ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಶುಕ್ರವಾರ, ಏಪ್ರಿಲ್ 21ರಂದು ಪ್ರಕಟವಾಗಿದ್ದು, ರಾಜ್ಯದ ಶೇ.74.67ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಜಿಲ್ಲಾವಾರು ಉತ್ತೀರ್ಣರಾದ ಪಟ್ಟಿಯಲ್ಲಿ ದಕ್ಷಿಣ ಕನ್ನಡಕ್ಕೆ ಜಿಲ್ಲೆ ಮೊದಲ ಸ್ಥಾನ ಪಡೆದಿದ್ದರೆ, ಉಡುಪಿ ಜಿಲ್ಲೆಗೆ ದ್ವಿತೀಯ ಸ್ಥಾನ ಮತ್ತು ಕೊಡಗು ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದೆ. ಇನ್ನು ಯಾದಗಿರಿ ಜಿಲ್ಲೆ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ.80.25 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದರೆ, ಶೇ.69.05ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ರಾಜ್ಯದ ಒಟ್ಟು 5,24,209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 1,09,509 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 2,47,315 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, ಇನ್ನು 90,014 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸ್ ಆಗಿದ್ದರೆ, 77,371 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಇದೀಗ 2022-23ನೇ ಸಾಲಿನ ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗಿದ್ದು, ಫೇಲಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಬರೆಯಲು ಪಿಯು ಮಂಡಳಿಯು ನೋಂದಣಿ ಪ್ರಾರಂಭಿಸಿದೆ.

ದ್ವಿತೀಯ ಪಿಯುಸಿ ಫಲಿತಾಂಶ ಬಿಡುಗಡೆಯಾದ ದಿನದಿಂದ (ಏಪ್ರಿಲ್ 21) ನೋಂದಣಿ ಪ್ರಾರಂಭವಾಗಿದ್ದು, ದಂಡವಿಲ್ಲದೆ ಏಪ್ರಿಲ್ 26ರವರೆಗೆ ಅರ್ಜಿ ಸಲ್ಲಿಸಬಹುದು. ದಂಡ ಪಾವತಿಯೊಂದಿಗೆ ಏಪ್ರಿಲ್ 27ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಮೇ 2ರ ವರೆಗೆ ಅರ್ಜಿ ಸಲ್ಲಿಸಬಹುದು.
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಏಪ್ರಿಲ್ ಕೊನೆಯ ವಾರದಲ್ಲಿ ಪ್ರಕಟಿಸಲಾಗುತ್ತದೆ. ಇನ್ನು ಅನುತ್ತೀರ್ಣರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲು KSEAB.karanataka.gov.inನ ಅಧಿಕೃತ KSEAB ವೆಬ್‌ಸೈಟ್ ನೋಂದಣಿ ಮಾಡಬಹುದು.
ಈ ವರ್ಷದಿಂದ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಮತ್ತು ಸರ್ಟಿಫಿಕೇಟ್‌ಗಳನ್ನು ನೀಡಲಾಗುವುದಿಲ್ಲ. ಮಾರ್ಚ್ 2023ರ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲು ಸಿದ್ಧರಿದ್ದರೆ, ಪಿಯು ಮಂಡಳಿ ಒದಗಿಸಿದ ಫಲಿತಾಂಶದ ಪೇಪರ್ ಆಧಾರದ ಮೇಲೆ ಶುಲ್ಕವನ್ನು ಕಾಲೇಜು ಪ್ರಾಂಶುಪಾಲರು ಸಂಗ್ರಹಿಸಬೇಕು.
ಪೂರಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶುಲ್ಕ ನಿಗದಿಪಡಿಸಿದ್ದು, ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಸಿ 1 ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿದ್ದು, ಉಳಿದದವರು ಒಂದು ವಿಷಯಕ್ಕೆ 140 ರೂ., ಎರಡು ವಿಷಯಗಳಿಗೆ 270 ರೂ. ಮತ್ತು ಮೂರು ಅಥವಾ ಹೆಚ್ಚಿನ ವಿಷಯಗಳಿಗೆ 400 ರೂ. ಪಾವತಿಸಬೇಕಾಗುತ್ತದೆ.












Click it and Unblock the Notifications