ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ
ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶಗಳು ಏಪ್ರಿಲ್ 09, 2026 ರಂದು ಅಧಿಕೃತವಾಗಿ ಪ್ರಕಟವಾಗಿದ್ದವು. ಆದರೆ, ಕೆಲವು ವಿದ್ಯಾರ್ಥಿಗಳ ಅಂಕಗಳಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ (KSEAB) ಇದೀಗ ಆಯ್ದ ವಿದ್ಯಾರ್ಥಿಗಳ ಪರಿಷ್ಕೃತ ಫಲಿತಾಂಶವನ್ನು ಮರು ಪ್ರಕಟ ಮಾಡಿದೆ.
ಮಂಡಳಿಯು ಹೊರಡಿಸಿರುವ ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ, ಏಪ್ರಿಲ್ 9ರಂದು karresults.nic.in ವೆಬ್‌ಸೈಟ್, ವಾಟ್ಸಾಪ್ ಸಂದೇಶ, KSEAB ವೆಬ್‌ಸೈಟ್ ಹಾಗೂ ಕರ್ನಾಟಕ ಒನ್ ಮೊಬೈಲ್ ಆ್ಯಪ್‌ಗಳಲ್ಲಿ ಫಲಿತಾಂಶವನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗಿತ್ತು. ಆದರೆ, 2024 ಮತ್ತು 2025ನೇ ಸಾಲಿನ ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳ ಪ್ರಥಮ ಭಾಷೆಗಳ ಅಂಕಗಳನ್ನು ಪ್ರಕಟ ಮಾಡುವ ಮುನ್ನ ಒಂದು ಪ್ರಕ್ರಿಯೆ ನಡೆಸಲಾಗಿತ್ತು. ಈ ವಿದ್ಯಾರ್ಥಿಗಳು ಪಡೆದ 80 ಅಂಕಗಳನ್ನು 100 ಅಂಕಗಳಿಗೆ ಅನುಗುಣವಾಗಿ ಪ್ರೋಗ್ರಾಮಿಂಗ್ (Programming) ಮೂಲಕ ಪರಿವರ್ತನೆ ಮಾಡಿ ಪ್ರಕಟಿಸುವ ಕಾರ್ಯವನ್ನು ಮಂಡಳಿ ಕೈಗೊಂಡಿತ್ತು.

ಆದರೆ, ಈ ಸಾಫ್ಟ್‌ವೇರ್ ಪ್ರೋಗ್ರಾಮಿಂಗ್ ಕಾರ್ಯದಲ್ಲಿ ಅನಿರೀಕ್ಷಿತ ತಾಂತ್ರಿಕ ದೋಷ ಎದುರಾಗಿತ್ತು. ಇದರಿಂದಾಗಿ ಈ ಹಳೆಯ ಸಾಲಿನ ಖಾಸಗಿ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಭಾರೀ ವ್ಯತ್ಯಾಸಗಳು ಕಂಡುಬಂದಿದ್ದವು. ಫಲಿತಾಂಶ ನೋಡಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಗೊಂದಲಕ್ಕೀಡಾಗಿದ್ದರು. ಈ ತಾಂತ್ರಿಕ ದೋಷವನ್ನು ತಕ್ಷಣವೇ ಗುರುತಿಸಿರುವ ಮಂಡಳಿಯು, ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ಇದೀಗ ಆ ಎಲ್ಲಾ ದೋಷಗಳನ್ನು ಸರಿಪಡಿಸಿದೆ. ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಪರಿಷ್ಕೃತ ಫಲಿತಾಂಶವನ್ನು ಮಂಡಳಿಯ ಅಧಿಕೃತ ಜಾಲತಾಣಗಳಲ್ಲಿ ಮರು ಪ್ರಕಟಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಮಂಡಳಿ, "ತಾಂತ್ರಿಕ ದೋಷದಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಉಂಟಾದ ಅನಾನುಕೂಲತೆ, ಆತಂಕ ಮತ್ತು ಗೊಂದಲಗಳಿಗಾಗಿ ಮಂಡಳಿಯು ತೀವ್ರ ವಿಷಾದ ವ್ಯಕ್ತಪಡಿಸುತ್ತದೆ. ಸಂಬಂಧಪಟ್ಟ ವಿದ್ಯಾರ್ಥಿಗಳು ಮರಳಿ ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ತಮ್ಮ ಸರಿಯಾದ ಪರಿಷ್ಕೃತ ಅಂಕಗಳನ್ನು ಪರಿಶೀಲಿಸಿಕೊಳ್ಳಬಹುದು" ಎಂದು ತಿಳಿಸಿದೆ.
ನಿಯಮಿತ ವಿದ್ಯಾರ್ಥಿಗಳಿಗೆ ಯಾವುದೇ ಆತಂಕ ಬೇಡ
ಇದೇ ವೇಳೆ ಮಂಡಳಿಯು ಪ್ರಸಕ್ತ ಸಾಲಿನ, ಅಂದರೆ 2026ನೇ ಸಾಲಿನ ನಿಯಮಿತ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಹತ್ವದ ಸ್ಪಷ್ಟನೆ ನೀಡಿದೆ. ಈ ಮೇಲಿನ ತಾಂತ್ರಿಕ ದೋಷವು ಕೇವಲ 2024 ಹಾಗೂ 2025ನೇ ಸಾಲಿನ ಖಾಸಗಿ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದೆ. 2026ನೇ ಸಾಲಿನಲ್ಲಿ ಪರೀಕ್ಷೆ ಬರೆದ ಯಾವುದೇ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಅಥವಾ ಅಂಕಗಳಲ್ಲಿ ಯಾವುದೇ ರೀತಿಯ ವ್ಯತ್ಯಾಸಗಳಿರುವುದಿಲ್ಲ ಎಂದು ಮಂಡಳಿ ಸ್ಪಷ್ಟವಾಗಿ ಖಚಿತಪಡಿಸಿದೆ.
ಹೀಗಾಗಿ ಪ್ರಸಕ್ತ ಸಾಲಿನ ನಿಯಮಿತ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಬದಲಾಗಬಹುದೆಂದು ಆತಂಕ ಪಡುವ ಅಥವಾ ಯಾವುದೇ ವದಂತಿಗಳಿಗೆ ಕಿವಿಗೊಡುವ ಅಗತ್ಯವಿಲ್ಲ ಎಂದು ಮಂಡಳಿ ಸಾರ್ವಜನಿಕರ ಗಮನಕ್ಕೆ ತಂದಿದೆ. ದೋಷದಿಂದಾಗಿ ತೊಂದರೆಗೀಡಾಗಿದ್ದ ರಿಪೀಟರ್ ವಿದ್ಯಾರ್ಥಿಗಳು ಕೂಡಲೇ ತಮ್ಮ ನವೀಕರಿಸಲಾದ ಅಂಕಗಳನ್ನು ಆನ್‌ಲೈನ್‌ನಲ್ಲಿ ಚೆಕ್ ಮಾಡಿಕೊಳ್ಳಲು ಸೂಚಿಸಲಾಗಿದೆ.












Click it and Unblock the Notifications