ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ 'ಕರ್ಮಯೋಗಿ ಖರ್ಗೆ' ಸಾಂಗ್: ಬೆಂಬಲಿಗರಿಂದ ದಲಿತ ನಾಯಕನ ಹೊಗಳಿಕೆ
ನವದೆಹಲಿ, ಏಪ್ರಿಲ್ 18: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Assembly Elections 2023 ) ಪಕ್ಷಗಳು ಭರ್ಜರಿ ಪ್ರಚಾರವನ್ನು ನಡೆಸುತ್ತಿವೆ. ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದೇ ವೇಳೆಯಲ್ಲಿ, ಪಕ್ಷಗಳ ಕಾರ್ಯಕರ್ತರು ಹಾಗೂ ನಾಯಕರ ಅಭಿಮಾನಿಗಳು ಹೊಸ ಹಾಡುಗಳನ್ನು ನಿರ್ಮಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್‌ನ ಹಿರಿಯ ರಾಜಕಾರಣಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಭಿಮಾನಿಗಳು ಕರ್ನಾಟಕ ರಾಜ್ಯಕ್ಕಾಗಿ ಖರ್ಗೆ ಅವರ ಬದ್ಧತೆ ಮತ್ತು ಸಾಧನೆಗಳನ್ನು ಬಿಂಬಿಸುವ 'ಕರ್ಮಯೋಗಿ ಖರ್ಗೆ' ಎನ್ನುವ ಶೀರ್ಷಿಕೆಯ ಹಾಡನ್ನು ಹರಿಬಿಟ್ಟಿದ್ದಾರೆ. ಈ ಹಾಡು ಸಧ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ಈ ಹಾಡಿನಲ್ಲಿ ಖರ್ಗೆಯವರ ಜನಪರ ನಿಲುವುಗಳು ಮತ್ತು ಜನರ ಕಲ್ಯಾಣಕ್ಕಾಗಿ ಅವರ ಸಮರ್ಪಣಾ ಮನೋಭಾವವನ್ನು ಎತ್ತಿ ತೋರಿಸಲಾಗಿದೆ.

ದೀನ ದಲಿತರಾಗಿ ಹುಟ್ಟಿದ ಜೀವ, ಅಭಿವೃದ್ದಿಗೆ ಮುಡಿಪಿಟ್ಟ ಜೀವ, ಇವರಿಂದಲೇ ಮುಂದೆಡೆ ಇಟ್ಟಿದೆ ಕಲಬುರ್ಗಿ, ಇವರ ಹೋರಾಟ ಇಂದು ನಮಗಾಗಿ ಎಂದು ಆರಂಭವಾಗುವ ಈ ಹಾಡಿನಲ್ಲಿ ಖರ್ಗೆ ಅವರ ನಾಲ್ಕು ದಶಕಗಳ ಕಾಲದ ಗಮನಾರ್ಹ ರಾಜಕೀಯ ವೃತ್ತಿ ಜೀವನವನ್ನು ಮತ್ತು ಕರ್ನಾಟಕದ ಅಭಿವೃದ್ಧಿ ಮತ್ತು ಪ್ರಗತಿಗೆ ಅವರ ಹಲವಾರು ಕೊಡುಗೆಗಳನ್ನು ತೋರಿಸಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದ ಗುಣ, ದೂರದೃಷ್ಟಿ ಮತ್ತು ಜನರ ಬಗ್ಗೆ ಅವರಿಗಿರುವ ಸಹಾನುಭೂತಿಯನ್ನು ತೋರಿಸುವ ಜೊತೆಗೆ ತಮ್ಮ ನಿಸ್ವಾರ್ಥ ಸೇವೆಯಿಂದ ಖರ್ಗೆ 'ಕರ್ಮಯೋಗಿ'ಯಾಗಿದ್ದಾರೆ ಎಂದು ಈ ಹಾಡು ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ.
ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ, ಸರ್ಕಾರ ಮತ್ತು ಪಕ್ಷದ ವಿವಿಧ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸದ್ಯಕ್ಕೆ ಎಐಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಖರ್ಗೆ ಅವರ ಮೇಲೆ ಜನರು ಹೊಂದಿರುವ ಅಪಾರ ಪ್ರೀತಿ ಮತ್ತು ಗೌರವವನ್ನು ಮತ್ತು ರಾಜ್ಯದ ಅಭಿವೃದ್ಧಿಯ ಕಡೆಗೆ ಖರ್ಗೆ ಅವರ ಅಪ್ರತಿಮ ಸಮರ್ಪಣೆಯನ್ನು ಈ ಹಾಡು ಪ್ರತಿಬಿಂಬಿಸುತ್ತದೆ.
'ಕರ್ಮಯೋಗಿ ಖರ್ಗೆ' ಶೀರ್ಷಿಕೆಯಡಿಯಲ್ಲಿ ಬಿಡುಗಡೆಯಾದ ಈ ಹಾಡು ಈಗ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಶೇರ್ ಆಗುತ್ತಿದ್ದು, ಮಲ್ಲಿಕಾರ್ಜುನ ಖರ್ಗೆ ಅವರ ಅಭಿಮಾನಿಗಳು ಕುತೂಹಲದಿಂದ ಹಂಚಿಕೊಳ್ಳುತ್ತಿದ್ದಾರೆ ಮತ್ತು ಕರ್ನಾಟಕಕ್ಕೆ ಅವರ ಆದರ್ಶಪ್ರಾಯ ನಾಯಕತ್ವ ಮತ್ತು ಸಾಧನೆಗಳ ಸಂದೇಶವನ್ನು ಹರಡುತ್ತಿದ್ದಾರೆ.












Click it and Unblock the Notifications