D.K. Suresh: ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಿದ ಡಿಕೆ ಸುರೇಶ್‌ರವರಿಗೆ ಅಭಿನಂದನೆ ಸಲ್ಲಿಸಿದ ಕನ್ನಡಿಗರು
ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ "ತೆರಿಗೆಯ ಸರಿಯಾದ ಪಾಲನ್ನು ದಕ್ಷಿಣ ರಾಜ್ಯಗಳಿಗೆ ನೀಡದಿರುವ ಅನ್ಯಾಯ ಮುಂದುವರಿದರೆ ದಕ್ಷಿಣ ಭಾರತದ ಜನರು ಪ್ರತ್ಯೇಕ ದೇಶಕ್ಕಾಗಿ ಬೇಡಿಕೆಯಿಡಬೇಕಾಗುತ್ತದೆ" ಎಂದು ಹೇಳಿಕೆ ನೀಡಿರುವುದು ಸದ್ಯ ಭಾರಿ ಚರ್ಚೆ ಹುಟ್ಟುಹಾಕಿದೆ.
ಡಿ.ಕೆ ಸುರೇಶ್ ಅವರ ಹೇಳಿಕೆಗೆ ಸಾಕಷ್ಟು ಜನ ವಿರೋಧ ವ್ಯಕ್ತಪಡಿಸಿದ್ದರೂ, ಮತ್ತೆ ಸಾಕಷ್ಟು ಜನ ಬೆಂಬಲ ಕೂಡ ವ್ಯಕ್ತಪಡಿಸಿದ್ದಾರೆ. ಹಲವು ದಶಕಗಳಿಂದ ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಒಬ್ಬರಾದರೂ ಧೈರ್ಯವಾಗಿ ಮಾತನಾಡಿದರಲ್ಲ ಎಂದು ಅನೇಕ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿವಣ್ಣ ಗುಂಡಣ್ಣನವರ್ ಎನ್ನುವವರು ಫೇಸ್‌ಬುಕ್‌ನಲ್ಲಿ ದೀರ್ಘವಾದ ಟಿಪ್ಪಣಿ ಬರೆದಿದ್ದು, ತೆರಿಗೆ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ವಿವರ ನೀಡಿದ್ದಾರೆ.
ಅವರ ಫೇಸ್‌ಬುಕ್ ಪೋಸ್ಟ್‌ನ ಸಾರಾಂಶ ಇಲ್ಲಿದೆ.
ಕರ್ನಾಟಕಕ್ಕೆ ದಶಕಗಳಿಂದ ಆಗುತ್ತಿದ್ದ ಕೇಂದ್ರ ಸರ್ಕಾರದ ತೆರಿಗೆ ವಂಚನೆ ವಿರುದ್ಧ ತಮ್ಮ ಆಕ್ರೋಶವನ್ನ ಹೊರಹಾಕಿ, ಕನ್ನಡಿಗರಿಗೆ ಆಗುತ್ತಿದ್ದ ಈ ಮೋಸದ ವಿರುದ್ಧವಾಗಿ ಡಿ.ಕೆ ಸುರೇಶ ಅವರು ನಿಂತಿರುವುದಕ್ಕೆ ಅಭಿನಂದನೆಗಳು.
ಕನ್ನಡಿಗರೇ, ಕಳೆದ ನಾಲ್ಕೈದು ದಶಕಗಳಿಂದಲೂ ಕರ್ನಾಟಕ ತೆರಿಗೆ ಕಟ್ಟುವ ರಾಜ್ಯಗಳಲ್ಲಿ ದೊಡ್ಡದಾದ ಸ್ಥಾನವನ್ನ ಹೊಂದಿದೆ, ಅದರಲ್ಲೂ ಕಳೆದ ಎರಡು ದಶಕಗಳಿಂದಲೂ ಕರ್ನಾಟಕ ಮೊದಲ ಮೂರು ಸ್ಥಾನದಲ್ಲಿದೆ. ವರ್ಷಕ್ಕೆ ಸುಮಾರು ನಾಲ್ಕು ಲಕ್ಷ ಕೋಟಿಗೂ ಅಧಿಕ ತೆರಿಗೆಯನ್ನ ಕೇಂದ್ರ ಸರ್ಕಾರ ಕರ್ನಾಟಕದಿಂದ ಪಡೆಯುತ್ತಿದೆ, ಪ್ರತಿವರ್ಷವೂ ರಾಜ್ಯ ಆದಾಯಕ್ಕೆ ಕೊಕ್ಕೆ ಹಾಕುತ್ತ, ನಾಡ ಸರ್ಕಾರದ ತೆರಿಗೆ ಮೂಲವನ್ನ ಕೇಂದ್ರ ವಶಪಡಿಸಿಕೊಳ್ಳುತ್ತ ಒಕ್ಕೂಟ ದೇಶದಲ್ಲಿ ರಾಜ್ಯಗಳನ್ನ ಬಲಹೀನರನ್ನಾಗಿ ಮಾಡುತ್ತಿದೆ.
ಆದರೆ ಇಲ್ಲಿ ಬಲಹೀನರಾಗುತ್ತಿರುವುದು ಶ್ರೀಮಂತ ರಾಜ್ಯಗಳೇ, ಭಾರತ ದೇಶದ ಭಾವುಕತೆಯನ್ನ ಬಳಸಿಕೊಂಡು ಉತ್ತರ ಭಾರತದ ಬಡ ರಾಜ್ಯಗಳನ್ನು ಬಲಿಷ್ಠ ಮಾಡುತ್ತೇವೆ ಎನ್ನುವ ಉದ್ದೇಶ ಇಟ್ಟುಕೊಂಡು ಕರ್ನಾಟಕವನ್ನ ಕೊಳ್ಳೆ ಹೊಡೆದಿದ್ದಾರೆ ಮತ್ತು ಹೊಡೆಯುತ್ತಿದ್ದಾರೆ. ಒಪ್ಪುತ್ತೇನೆ ಒಕ್ಕೂಟ ಭಾರತದ ಸಮಗ್ರ ಅಭಿವೃದ್ಧಿ ಆಗಬೇಕಾದರೆ ಎಲ್ಲ ರಾಜ್ಯಗಳು ಅಭಿವೃದ್ಧಿ ಹೊಂದಬೇಕು ಹಾಗೆಂದು ಹೇಳಿ ಅಭಿವೃದ್ಧಿ ಹೊಂದಿದ ರಾಜ್ಯದ ನಡ ಮುರಿಯುವುದು ಸರಿಯೇ?
ನಾವು ತುಂಬುವ ತೆರಿಗೆಯನ್ನು ಕೇಂದ್ರ ತೆಗೆದುಕೊಂಡು ರಾಜ್ಯಕ್ಕೆ ಬರಬೇಕಾದ ಹಕ್ಕಿನ ತೆರಿಗೆಯನ್ನ ವಂಚಿಸುತ್ತಾ ಬೇರೆ ರಾಜ್ಯಗಳ ಬೊಕ್ಕಸವನ್ನ ತುಂಬುತ್ತಿದೆ, ಇನ್ನು ಆ ಬಡ ರಾಜ್ಯದ ರಾಜಕೀಯ ಅವ್ಯವಸ್ಥೆಯಿಂದಾಗಿ ಆ ರಾಜ್ಯಗಳಿಗೆ ಹಲವಾರು ವರ್ಷಗಳಿಂದ ನಮ್ಮ್ಮ ಸಂಪತ್ತನ್ನು ಅವರಿಗೆ ಹಂಚುತ್ತಾ ಬಂದಿದ್ದರು! ಬಡ ರಾಜ್ಯಗಳು ಅಭಿವೃದ್ಧಿ ಹೊಂದಲಿಲ್ಲ ಬದಲಾಗಿ ನಮ್ಮ ರಾಜ್ಯಗಳ ನೈಸರ್ಗಿಕ ಸಂಪತ್ತಿನ ಜೊತೆಗೆ ನಮ್ಮ ರಾಜ್ಯವು ಬಡವಾಗುತ್ತ ಬರುತ್ತಿದೆ.
ನಾವು ಕೊಡುವ ನಾಲ್ಕು ಲಕ್ಷ ಕೋಟಿ ದುಡ್ಡಲ್ಲಿ 50% ಬೇಕಾದರೆ ಕೇಂದ್ರ ಬಳಸಿಕೊಳ್ಳಲಿ ಉಳಿದ 50% ನಮ್ಮ ತೆರಿಗೆಯನ್ನ ನಮಗೆ ಹಿಂದುರಿಗಿಸಿದರೆ ನಾವುಗಳು ನಮ್ಮ ಉತ್ತರ ಕರ್ನಾಟಕ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಬಹುದು, ಶಿಕ್ಷಣದಲ್ಲಿ ಇನ್ನಷ್ಟು ಪ್ರಗತಿ ಕಾಣಬಹುದು, ಮುರಿದು ಬಿದ್ದ ಆಸ್ಪತ್ರೆಗಳನ್ನ ಕಟ್ಟಿಕೊಳ್ಳಬಹುದು, ಬರಗಾಲದಲ್ಲಿ ನಮ್ಮ ರೈತರಿಗೆ ಸಹಾಯ ಮಾಡಿ ಬೀಳುವ ಹೆಣಗಳ ಸಂಖ್ಯೆಯನ್ನ ಕಡಿಮೆ ಮಾಡಬಹುದು ಆದರೆ ಡೆಲ್ಲಿ ಸರ್ಕಾರಗಳ ತೆರಿಗೆ ವಂಚನೆಯಿಂದ ಕರ್ನಾಟಕ ಇಂದು ಬಡವಾಗಿದೆ ಎಂದೇ ಹೇಳಬಹುದು.
ನೆರೆ ಬಂದು ನಮ್ಮ ಜನಗಳು ಬೀದಿಗೆ ಬಂದಾಗ ಕೇಂದ್ರ ಹಣ ಕೊಡಲಿಲ್ಲ, ಬರಗಾಲ ಬಂದು ರೈತ ನೇಣು ಏರಿದಾಗ ಬಿಡಿಗಾಸು ಬಿಚ್ಚಲಿಲ್ಲ, ಹೀಗೆ ನಾಡು ಅತ್ಯಂತ ದುಸ್ಥಿತಿಯಲ್ಲಿ ಇದ್ದಾಗಲೂ ಕೇಂದ್ರ ಸಹಾಯ ಮಾಡಲಿಲ್ಲ ಮತ್ತೆ ಯಾವ ಪುರುಷಾರ್ಥಕ್ಕಾಗಿ ರಾಜ್ಯ ಕೇಂದ್ರಕ್ಕೆ ತೆರಿಗೆ ಕೊಡಬೇಕು? ನಮಗೆ ಕಷ್ಟ ಬಂದಾಗ ಕೇಂದ್ರ ಸಹಾಯ ಮಾಡಲಿಲ್ಲ ಇದನ್ನು ನಮ್ಮ ಯಾವ ಸಂಸದನು ಇದರ ವಿರುದ್ಧವಾಗಿ ಮಾತನಾಡಲಿಲ್ಲ, ಡೆಲ್ಲಿ ಗುಲಾಮಗಿರಿಗೆ ಕೈ ಕಟ್ ಬಾಯಿ ಮುಚ್ಚು ಎನ್ನುವುದು ನಮ್ಮ ಸಂಸದರ ನಿಲುವು.
ನಮ್ಮ ತೆರಿಗೆ ಪಾಲಿನಲ್ಲಿ ಕನಿಷ್ಠ ೧೦% ಕೂಡ ಕೇಂದ್ರ ನಮಗೆ ಹಿಂದುರಿಗಿಸುತ್ತಿಲ್ಲ, ಜೊತೆಗೆ ಕೇಂದ್ರದ ಬಜೆಟ್ ಅಲ್ಲೂ ಕೂಡ ಮೋಸವಾಗುತ್ತಿದೆ. ಕೇಂದ್ರದ ಸರ್ಕಾರೀ ಹುದ್ದೆಗಳು, ಯೋಜನೆಗಳು ಎಲ್ಲದರಲ್ಲೂ ರಾಜ್ಯಕ್ಕೆ ಅನ್ಯಾಯವಾಗುತ್ತ ಬರುತ್ತಿದೆ, ಇಲ್ಲಿಯವರೆಗೆ ಯಾವುದೇ ಪಕ್ಷದ ಯಾವೊಬ್ಬ ಸಂಸದನು ಕೂಡ ಕೇಂದ್ರದ ಈ ಅನ್ಯಾಯಗಳ ವಿರುದ್ಧ ಪ್ರತಿಭಟಿಸುವುದು ಬಿಡಿ ಸದನದಲ್ಲಿ ಒಂದು ಮಾತನ್ನು ಕೂಡ ಹೇಳುವ ಧೈರ್ಯ ಯಾರಿಗೂ ಇರಲಿಲ್ಲ.
ಆದರೆ ಈಗ ಅಪರೂಪಕ್ಕೆ ಎಂಬಂತೆ ರಾಜ್ಯದೆ ಸಂಸದ ಡಿಕೆ ಸುರೇಶ ಅವರು ನಾಡಪರವಾಗಿ ಕೇಂದ್ರದ ಈ ಮೋಸದ ವಿರುದ್ಧ ಘರ್ಜನೆ ಮಾಡಿದ್ದಾರೆ, ಇದನ್ನ ಕನ್ನಡಿಗರು ತೆರದ ಮನಸ್ಸಿನಿಂದ ಸ್ವಾಗತಿಸಬೇಕು ವಿನಃ! ಪಕ್ಷ ಧರ್ಮ ಜಾತಿ ದೇಶ ಎಂದೇಳಿ ಇದನ್ನು ವಿರೋಧಿಸುವ ಮನಸ್ಸುಗಳು ಸ್ವತಃ ತಮ್ಮ ಅಭಿವೃದ್ದಿಯನ್ನ ತಾವೇ ವಿರೋಧಿಸಿದಂತೆಯೇ ಸರಿ.
ಕರ್ನಾಟಕದಿಂದ ಆಯ್ಕೆಯಾದ ನಿರ್ಮಲ ಸೀತಾರಾಮ್ ಅವರ ಕೊಡುಗೆ ಕರ್ನಾಟಕಕ್ಕೆ ಶೂನ್ಯ, ಜೊತೆಗೆ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿದ್ದಾರೆನ್ನುವುದು ಬಲು ಸ್ಪಷ್ಟ, ಹೀಗಾಗಿ ಒಬ್ಬ ಜವಾಬ್ದಾರಿಯುತ ಸಂಸದನಾಗಿ ಸುರೇಶ ಅವರು ಹೇಳಿದ ಹೇಳಿಕೆ ಕರ್ನಾಟಕ ಪರವಾದಂತದ್ದು, ನಾಡಿಗೆ ಅನ್ಯಾಯವಾದಾಗ ಜನಪ್ರತಿನಿಧಿಗಳು ಜನಪರ ಹೇಳಿಕೆ ಜೊತೆ ನಿಲ್ಲಬೇಕಾದದ್ದು ನಮ್ಮಗಳ ಕರ್ತವ್ಯ, ಹೀಗಾಗಿ ಸಮಸ್ತ ಕನ್ನಡಿಗರು ಸಂಸದರ ಈ ಹೇಳಿಕೆಯನ್ನ ಬೆಂಬಲಿಸೋಣ ಮತ್ತು ರಾಜ್ಯದ ಹಕ್ಕನ್ನ ಕೇಳಿ ಪಡೆದು ಅಭಿವೃದ್ಧಿ ಹೊಂದೋಣ.
ಇದು ಪ್ರತ್ಯೇಕತೆ ಕೂಗಲ್ಲ ನಮ್ಮ ಹಕ್ಕನ್ನು ಪಡೆಯಲು ಹೇಳುವು ಕೊನೆಯ ಕೂಗು ಎಂದು ಗಮನಿಸಬಹುದು. ಈ ಬರಹ ಯಾವುದೊ ರಾಜಕೀಯ ಪ್ರೇರಿತವಾದುದ್ದಲ್ಲ, ಒಬ್ಬ ಸ್ವಾಭಿಮಾನಿ ಕನ್ನಡಿಗರೆಲ್ಲರೂ ಮಾಡುವಂತಹ ಬೆಂಬಲವಿದು, ಅನೇಕ ಸಂದರ್ಭಗಳಲ್ಲಿ ಡಿಕೆ ಸುರೇಶ ಅವರ ಕೆಲ ನಿಲುವುಗಳನ್ನ ವಿರೋಧಿಸಿದ್ದೇನೆ ಈ ನಾಡಪರವಾದ ನಿಲುವನ್ನ ಬೆಂಬಲಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.












Click it and Unblock the Notifications