ಜಯಂತ ಕಾಯ್ಕಿಣಿಗೆ ಪ್ರತಿಷ್ಠಿತ ಡಿಎಸ್‌ಸಿ ಪ್ರಶಸ್ತಿ
ಕೋಲ್ಕತಾ, ಜನವರಿ 25: ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ತಮ್ಮ 'ನೋ ಪ್ರೆಸೆಂಟ್ ಪ್ಲೀಸ್' ಕಥಾಸಂಕಲನಕ್ಕೆ ದಕ್ಷಿಣ ಏಷ್ಯಾ ಸಾಹಿತ್ಯ 2019ರ ಡಿಎಸ್‌ಸಿ ಪ್ರಶಸ್ತಿ ಒಲಿದಿದೆ.
ಮುಂಬೈ ಮಹಾನಗರಿಯನ್ನು ಹಿನ್ನೆಲೆಯಲ್ಲಿಟ್ಟುಕೊಂಡು ರಚಿಸಿದ ಕಥೆಗಳಿಗೆ ಈ ಗೌರವ ದೊರಕಿದೆ. ಈ ಕಥೆಗಳನ್ನು ಅನುವಾದ ಮಾಡಿದ ತೇಜಸ್ವಿನಿ ನಿರಂಜನ ಕೂಡ 25,000 ಡಾಲರ್ ಮೊತ್ತದ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಟಾಟಾ ಸ್ಟೀಲ್ ಕೋಲ್ಕತಾ ಸಾಹಿತ್ಯ ಸಮ್ಮೇಳನದಲ್ಲಿ ಈ ಘೋಷಣೆ ಮಾಡಲಾಯಿತು.
ಪಾಕಿಸ್ತಾನಿ-ಬ್ರಿಟಿಷ್ ಕಾದಂಬರಿಗಾರ್ತಿ 'ಹೋಮ್ ಫೈರ್', ಪಾಕಿಸ್ತಾನದ ಕಾದಂಬರಿಕಾರ ಮೊಹ್ಸಿನ್ ಹಮೀದ್ ಅವರ 'ಎಕ್ಸಿಟ್ ವೆಸ್ಟ್', ನೀಲ್ ಮುಖರ್ಜಿ ಅವರ 'ಎ ಸ್ಟೇಟ್ ಆಫ್ ಫ್ರೀಡಂ', ಸುಜಿತ್ ಸರಫ್ ಅವರ 'ಹೀರಾಲಾಲ್ ಆಂಡ್ ಸನ್ಸ್' ಮತ್ತು ಮನು ಜೋಸೆಫ್ ಅವರ 'ಮಿಸ್ ಲೈಲಾ ಆರ್ಮ್ಡ್ ಆಂಡ್ ಡೇಂಜರಸ್' ಕೃತಿಗಳು ಸಹ ಸ್ಪರ್ಧೆಯಲ್ಲಿದ್ದವು. ಅವುಗಳ ನಡುವೆ ಪೈಪೋಟಿಯಲ್ಲಿ ಕಾಯ್ಕಿಣಿ ಅವರ ಕಥಾ ಸಂಕಲನ ಆಯ್ಕೆಯಾಗಿದೆ.

'ಅನುವಾದ ಮತ್ತು ಕಿರು ಕಥೆ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ವಿಶೇಷ ಮತ್ತು ಸಂತೋಷಕರ ಸಂಗತಿ. ಸಾಮಾನ್ಯವಾಗಿ ಹೆಚ್ಚಿನ ಗೌರವಗಳು ಬೃಹತ್ ಪುಸ್ತಕಗಳಿಗೆ, ಬೃಹತ್ ಕಾದಂಬರಿಗಳಿಗೆ ದೊರಕುತ್ತವೆ. ತೇಜಸ್ವಿನಿ ಅವರನ್ನು ಕೂಡ ತೀರ್ಪುಗಾರರು ಸಮಾನವಾಗಿ ಗುರುತಿಸಿರುವುದು ನನಗೆ ತುಂಬಾ ಖುಷಿ ನೀಡಿದೆ' ಎಂದು ಕಾಯ್ಕಿಣಿ ಹೇಳಿದ್ದಾರೆ.
ಸಾಹಿತ್ಯ ಪ್ರಶಸ್ತಿಗೆ ಇದ್ದ ಪೈಪೋಟಿಯನ್ನು 'ರೇಸ್' ಎಂದು ಕರೆಯುವುದನ್ನು ಇಷ್ಟಪಡುವುದಿಲ್ಲ ಎಂದಿರುವ ಅವರು, ಎಲ್ಲ ಬರಹಗಾರರೂ ಒಟ್ಟಿಗಿದ್ದೆವು ಎಂದಿದ್ದಾರೆ.

1976ರಿಂದ 26 ವರ್ಷ ಮುಂಬೈನಲ್ಲಿ ನೆಲೆಸಿದ್ದ ಕಾಯ್ಕಿಣಿ ಅವರು ಅಲ್ಲಿನ ಬದುಕಿನ ಹಿನ್ನೆಲೆಯಲ್ಲಿ ಹಲವು ಕಥೆಗಳನ್ನು ರಚಿಸಿದ್ದಾರೆ. ಅವುಗಳನ್ನು ಮುಂಬೈ ಕಥೆಗಳೆಂದು ಅವರು ನಿರ್ದಿಷ್ಟವಾಗಿ ಗುರುತಿಸದೆ ಇದ್ದರೂ, ಅನುವಾದಿ ತೇಜಸ್ವಿನಿ ಅವರು 'ನೋ ಪ್ರೆಸೆಂಟ್ಸ್ ಪ್ಲೀಸ್'ಅನ್ನು ಮುಂಬೈ ಕಥೆಗಳೆಂದು ಆಯ್ಕೆ ಮಾಡಿಕೊಂಡಿದ್ದರು.












Click it and Unblock the Notifications