ಎಲ್ಲ ಕ್ಷೇತ್ರಗಳಲ್ಲಿ ಕನ್ನಡ ಬಳಕೆಗೆ ಕಾನೂನು ರಚನೆ: ಬಸವರಾಜ ಬೊಮ್ಮಾಯಿ ಭರವಸೆ
ಬೆಂಗಳೂರು, ನವೆಂಬರ್ 1: ಕರ್ನಾಟಕದಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಎಲ್ಲ ರಂಗಗಳಲ್ಲಿಯೂ ಕನ್ನಡದ ಬಳಕೆ ಬಗ್ಗೆ ಕಾನೂನು ರಚನೆ ಮಾಡಲು ವಿಧೇಯಕವನ್ನು ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಗಳವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕದಿಂದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 67ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು. ಭಾರತದ ಪ್ರತಿಯೊಂದು ಭಾಷೆಗಳು ಮಾತೃಭಾಷೆಗಳಾಗಿವೆ. ಕನ್ನಡ ನಮ್ಮ ಮಾತೃಭಾಷೆಯಾಗಿದ್ದು, ಅದು ನಮ್ಮ ರಾಷ್ಟ್ರಭಾಷೆಯೂ ಹೌದು ಎಂದರು.
ಮಾತೃಭಾಷೆಯನ್ನು ಎಲ್ಲ ರಂಗಗಳಲ್ಲಿ ಬಳಸಿ ಅಭಿವೃದ್ಧಿಗೊಳಿಸಬೇಕು. ಅದಕ್ಕಾಗಿ ಮುಂದಿನ ತಿಂಗಳು ನಡೆಯಲಿರುವ ಅಧಿವೇಶನದಲ್ಲಿ ಕಾನೂನು ರಚನೆ ಮಾಡಲಾಗುವುದು. ಕನ್ನಡಕ್ಕೆ ಕಾನೂನಿನ ಕವಚವನ್ನು ಕೊಟ್ಟಿರುವ ಪ್ರಪ್ರಥಮ ಸರ್ಕಾರ ನಮ್ಮದು. ಈ ಕಾನೂನಿನ ಬಗ್ಗೆ ವ್ಯಾಖ್ಯಾನ, ಸಾರ್ವಜನಿಕವಾಗಿ ಮುಕ್ತ ಚರ್ಚೆ ಮಾಡಲು, ಮುಕ್ತವಾಗಿ ಸಲಹೆ ಸ್ವೀಕರಿಸಲು ಸರ್ಕಾರ ಸಿದ್ಧವಿದೆ. ಕನ್ನಡಕ್ಕಾಗಿ ಬದುಕಬೇಕೆನ್ನುವ ಭಾವ ಹೃದಯಾಂತರಾಳದಿಂದ ಬರಬೇಕು. ರಾಜ್ಯದೆಲ್ಲೆಡೆ ಡಿಂಡಿಮವನ್ನು ಬಾರಿಸಲಿ. ನವಕರ್ನಾಟಕದ ನಿರ್ಮಾಣದಿಂದ ನವಭಾರತ ನಿರ್ಮಾಣವಾಗಲಿ ಎಂದರು.

ಕನ್ನಡಕ್ಕಾಗಿ ಬದುಕುವ ಸಂಕಲ್ಪ ಮಾಡಲು ಸಿಎಂ ಕರೆ
ಮುಂದಿನ 3-4 ವರ್ಷಗಳಲ್ಲಿ ಖಾಸಗಿ ವಲಯದಲ್ಲಿ 3 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿವೆ. ಕರ್ನಾಟಕ ಪ್ರಗತಿಪರವಾದ ರಾಜ್ಯವಾಗಿದ್ದು,7 ಲಕ್ಷ ಕೋಟಿ ಬಂಡವಾಳ ಹರಿದು ಬಂದರೆ ರಾಜ್ಯ ಅಭಿವೃದ್ಧಿ ಹೊಂದಲಿದೆ. ದೂರದೃಷ್ಟಿ ಸಹಿತ ಕೆಲಸ ಮಾಡಲಾಗುತ್ತಿದೆ. ಕನ್ನಡ ಒಂದು ಭಾಷೆಯಾಗದೇ ನಮ್ಮ ಬದುಕಾಗಿಸಿಕೊಳ್ಳಲು ಕನ್ನಡ ನಾಡಿನ ಜನರಿಗೆ ಶಕ್ತಿ ತುಂಬಲಿ ಎಂದು ತಾಯಿ ಭುವನೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಕನ್ನಡದ ಸ್ವಾಭಿಮಾನ, ಅಸ್ಮಿತೆಯನ್ನು ಪ್ರತಿಯೊಬ್ಬರೂ ಎತ್ತಿಹಿಡಿಯಬೇಕು. ಭಾಷೆಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು. ನಮ್ಮ ಮಕ್ಕಳು ವಿಶ್ವಮಟ್ಟದಲ್ಲಿ ಸಾಧನೆಗಳನ್ನು ಮಾಡಬೇಕು. ಹಿರಿಯರು ನೀಡಿದ ಮಾರ್ಗದರ್ಶನದಲ್ಲಿ ಮಕ್ಕಳ ಬದುಕನ್ನು ಉತ್ತಮಗೊಳಿಸಬೇಕು. ಕನ್ನಡಕ್ಕಾಗಿ ದುಡಿಯುತ್ತೇವೆ, ಬದುಕುತ್ತೇವೆ ಎಂದು ಇಂದಿನ ದಿವಸ ಸಂಕಲ್ಪ ಮಾಡೋಣ ಎಂದು ಅವರು ಕರೆ ನೀಡಿದರು.

8 ಸಾವಿರ ಶಾಲಾ ಕೊಠಡಿ ನಿರ್ಮಾಣ
ಶಿಕ್ಷಣದ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಈ ಒಂದೇ ವರ್ಷದಲ್ಲಿ 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿರುವುದು ಒಂದು ದಾಖಲೆ. 1956 ರಲ್ಲಿ ಕರ್ನಾಟಕ ರಚನೆಯಾದ ಮೇಲೆ ಯಾವುದೇ ಸರ್ಕಾರ ಒಂದು ವರ್ಷದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಶಾಲಾ ಕೊಠಡಿ ಗಳ ನಿರ್ಮಾಣಕ್ಕೆ ಅನುಮತಿ ನೀಡಿರಲಿಲ್ಲ. ಮುಂದಿನ ಮೂರು ವರ್ಷ ಈ ಕೆಲಸ ಮಾಡಿದರೆ ಶಾಲಾ ಕೊಠಡಿಗಳ ಕೊರತೆ ಆಗುವುದಿಲ್ಲ. 'ವಿವೇಕ' ಎಂಬ ಹೆಸರಿನಡಿ ಕಾರ್ಯಕ್ರಮ ಜಾರಿಯಾಗುತ್ತಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ರಾಜ್ಯದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ
ರಾಜ್ಯದಲ್ಲಿ ಹಾಲಿ 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಮುಂದಿನ 2 ವರ್ಷಗಳಲ್ಲಿ ಈ ಹುದ್ದೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಲಾಗುವುದು. ಸದ್ಯ ಮುಂದಿನ ಒಂದು ವರ್ಷದಲ್ಲಿ ಒಂದು ಲಕ್ಷ ಉದ್ಯೋಗ ನೀಡಲಾಗುವುದು. ಹುದ್ದೆಗಳು ಭರ್ತಿಯಾದಾಗ ಕನ್ನಡಿಗರ ಕೈಗಳಿಗೆ ಉದ್ಯೋಗ ದೊರೆಯುತ್ತದೆ. ಆರ್ಥಿಕತೆಯು ಸುಧಾರಿಸುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ರಾಂತಿ ಆಗಲಿದೆ ಎಂದು ಅವರು ಭರವಸೆ ನೀಡಿದರು.
ಬಂಡವಾಳ ಹೂಡಿಕೆದಾರರ ಸಮಾವೇಶದಿಂದ 7 ಲಕ್ಷ ಕೋಟಿ ರೂ.ಗಳ ಬಂಡವಾಳ ಕರ್ನಾಟಕಕ್ಕೆ ಹರಿದು ಬರಲಿದ್ದು, ಇದರಿಂದ ಸುಮಾರು 3 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.
ರಾಜ್ಯಕ್ಕೆ ಮೂರು ವರ್ಷ ನೀರಿನ ಬವಣೆ ತಪ್ಪಲಿದೆ
ಔದ್ಯೋಗಿಕ ಕ್ರಾಂತಿ: ಸರ್ಕಾರದ ಜೀವಂತಿಕೆ
ಕರ್ನಾಟಕದಲ್ಲಿ ಹತ್ತು ಕೃಷಿ ವಲಯಗಳಿವೆ. ಈ ವರ್ಷ ಕೆರೆಕಟ್ಟೆಗಳು ತುಂಬಿವೆ. ಪ್ರವಾಹದಿಂದ ಜನರಿಗೆ ಅನಾನುಕೂಲವಾಗಿದೆ. ಆದರೆ ದೀರ್ಘಕಾಲ ಅಂತರ್ಜಲ ಕುಸಿದಿರುವ ಕಡೆಗಳಲ್ಲಿಯೂ ಅಂತರ್ಜಲವು ಸುಧಾರಿಸಿದೆ. ಮುಂದಿನ ಮೂರರಿಂದ ನಾಲ್ಕು ವರ್ಷ ನೀರಿನ ಬವಣೆ ತಪ್ಪಲಿದೆ. ರೈತರ ನೆರವಿಗೆ ಪರಿಹಾರ ದುಪ್ಪಟ್ಟು ಮಾಡಲಾಗಿದ್ದು, ನೆರೆಯಿಂದ ಹಾಳಾದ ಮನೆಗಳಿಗೆ ಪರಿಹಾರ ನೀಡಿದ್ದೇವೆ. ಜನರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿ ತನ್ನ ಜೀವಂತಿಕೆಯನ್ನು ತೋರಿಸಿದೆ.
ನಾವೀನ್ಯತಾ ಸೂಚ್ಯಂಕದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. 6 ಲಕ್ಷ ರೈತ ಕೂಲಿಕಾರರ ಮಕ್ಕಳಿಗೆ, ನೇಕಾರರು, ಟ್ಯಾಕ್ಸಿ ಚಾಲಕರ ಮಕ್ಕಳಿಗೆ ರೈತ ವಿದ್ಯಾ ನಿಧಿಯನ್ನು ವಿಸ್ತರಣೆ ಮಾಡಿದೆ. ನಾಡಿನ ಕುಶಲಕರ್ಮಿಗಳಿಗೆ ಆರ್ಥಿಕ ನೆರವು ಒದಗಿಸಲಾಗಿದೆ. ಔದ್ಯೋಗಿಕ ಕ್ರಾಂತಿ ಮಾಡಬೇಕು ಎನ್ನುವುದು ನಮ್ಮ ಗುರಿಯಾಗಿದೆ. 5 ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ಯೋಜನೆ ರೂಪಿಸಿದ್ದೇವೆ. ಈ ಮೂಲಕ ನವ ಕರ್ನಾಟಕ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದೇವೆ.

ಕನ್ನಡಿಗರದ್ದು ಅಂತಃಕರಣವುಳ್ಳ ಸಂಸ್ಕೃತಿ
ರಾಷ್ಟ್ರದಲ್ಲಿಯೇ ಅತ್ಯಂತ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಕರುನಾಡಿನಲ್ಲಿ ಬುದ್ಧಿವಂತಿಕೆಗೆ ಕೊರತೆ ಇಲ್ಲ. ಹಿರಿಯರು ನಮಗೆ ಮೌಲ್ಯಾಧಾರಿತ, ನೈತಿಕ, ಉತ್ತಮ ಗುಣಮಟ್ಟದ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಉದಾರೀಕರಣ, ಖಾಸಗೀಕರಣ ಜಾಗತೀಕರಣವಾದ ಮೇಲೆ ಅಂತಃಕರಣ ಮರೆತಿರುವ ನಾವು ಅದನ್ನು ಉಳಿಸಿಕೊಂಡು ಸವಾಲುಗಳನ್ನು ಎದುರಿಸಬೇಕು. ಕನ್ನಡಿಗರದ್ದು ಅಂತಃಕರಣವುಳ್ಳ ಸಂಸ್ಕೃತಿ. ಕನ್ನಡ ಬಾವುಟವನ್ನು ಎಲ್ಲಾ ರಂಗಗಳಲ್ಲಿ ಹಾರಿಸುವ ಅಗತ್ಯವಿದೆ. ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೋಗ, ತಂತ್ರಜ್ಞಾನ, ತಂತ್ರಾಂಶ, ವಿಜ್ಞಾನ ಹಾಗೂ ಮೂಲಭೂತ ಸೌಕರ್ಯ ಇರುವ ಭವಿಷ್ಯ ನಿರ್ಮಿಸಲು ಈ ದಿನ ಸಂಕಲ್ಪ ಮಾಡಬೇಕಿದೆ.

ಆತ್ಮಾವಲೋಕನ ಮಾಡಿಕೊಳ್ಳುವ ಸಮಯ
ಸಂಪದ್ಭರಿತ ಕನ್ನಡ ನಾಡು ಶಿಕ್ಷಣ ಆರೋಗ್ಯ, ಉದ್ಯೋಗ ಸೃಷ್ಟಿ ಮಾಡಬಲ್ಲ ಕನ್ನಡ ನಾಡು, ಭಾರತದ ಭವಿಷ್ಯವನ್ನು ಬರೆಯುವ ಶಕ್ತಿ ಇರುವುದು ಕನ್ನಡ ನಾಡಿಗೆ ಇದೆ. ಈ ಎಲ್ಲಾ ಕನಸುಗಳು ಹಂತ ಹಂತವಾಗಿ ನನಸಾಗುತ್ತಿದೆ. ಆರೂವರೆ ದಶಕಗಳಿಗಿಂತ ಹೆಚ್ಚು ಪ್ರಯಾಣ ಮಾಡಿರುವ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕನ್ನಡ ನಾಡನ್ನು ಕಟ್ಟಲು ನನ್ನ ಕಾಣಿಕೆ ಏನು, ನನ್ನ ದುಡಿಮೆ ಏನು ಎನ್ನುವ ಪ್ರಶ್ನೆ ಪ್ರತಿಯೊಬ್ಬ ಕನ್ನಡಿಗನೂ ಕೇಳಿಕೊಳ್ಳಬೇಕು ಎಂದರು.
ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಂಸದ ಪಿ.ಸಿ.ಮೋಹನ್, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಗೋವಿಂದರಾಜು, ಶಾಸಕ ರಿಜ್ವಾನ್ ಅರ್ಷದ್ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications