KPSC: ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡ ತಪ್ಪು, ಮರು ಪರೀಕ್ಷೆಗೆ ಹೆಚ್ಚಾದ ಆಗ್ರಹ
ಬೆಂಗಳೂರು, ಸೆಪ್ಟೆಂಬರ್ 01: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಆಗಸ್ಟ್ 27ರಂದು ನಡೆಸಿದ ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಪಿಎಸ್‌ಸಿಯಲ್ಲಿ ಬದಲಾವಣೆ ಬೇಕು, ಕೆಪಿಎಸ್‌ಸಿ ಮರು ಪರೀಕ್ಷೆಯನ್ನು ನಡೆಸಬೇಕು ಎಂಬ ಕೂಗು ಜೋರಾಗಿದೆ. ಪ್ರಶ್ನೆ ಪತ್ರಿಕೆಯಲ್ಲಿನ ತಪ್ಪು ಕನ್ನಡವನ್ನು ಖಂಡಿಸಿ, ಸೋಮವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಸಹ ಹಮ್ಮಿಕೊಳ್ಳಲಾಗಿದೆ.
ಕೆಎಎಸ್ ನೇಮಕಾತಿ ಪೂರ್ವಭಾವಿ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿನ ಕನ್ನಡ ದೋಷದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಕೆಪಿಎಸ್‌ಸಿಯಿಂದ ವರದಿಯನ್ನು ಕೇಳಿದೆ.

ಮರು ಪರೀಕ್ಷೆಯನ್ನು ನಡೆಸಿ: ಕರ್ನಾಟಕ ರಾಜ್ಯ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳ ಸಂಘ (ರಿ) ಒಕ್ಕೂಟ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆದಿದ್ದು, ಮರು ಪರೀಕ್ಷೆ ನಡೆಸಲು ಕೆಪಿಎಸ್‌ಸಿಗೆ ಸೂಕ್ತ ಆದೇಶವನ್ನು ನೀಡಬೇಕು ಎಂದು ಮನವಿ ಮಾಡಲಾಗಿದೆ. ಈ ಕುರಿತು ಒಕ್ಕೂಟದ ಅಧ್ಯಕ್ಷೆ ಭವ್ಯಾ ನರಸಿಂಹಮೂರ್ತಿ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದಾರೆ.
ಈ ಪತ್ರವು 2024ರ ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಕೆಪಿಎಸ್‌ಸಿ ಮಾಡಿರುವ ಲೋಪದೋಷಗಳು, ಘೋರ ಅನ್ಯಾಯ ಮತ್ತು ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಮಾಡಿರುವ ದ್ರೋಹದ ಕುರಿತು ಎಂಬ ವಿಷಯ ಒಳಗೊಂಡಿದೆ.
ಕರ್ನಾಟಕ ರಾಜ್ಯ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳ ಸಂಘ (ರಿ) ಅತೀ ಜರೂರಾಗಿ ತಮ್ಮ ಗಮನಕ್ಕೆ ತರುವುದೇನೆಂದರೆ, ದಿನಾಂಕ 27.08.2024 ರಂದು ಕೆಪಿಎಸ್‌ಸಿ ರಾಜ್ಯಾದ್ಯಂತ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಸಿದೆ. ಇದರಲ್ಲಿ ಕನ್ನಡ ಮಾಧ್ಯಮದಲ್ಲಿ ಬರೆಯುವ ಅಭ್ಯರ್ಥಿಗಳಿಗೆ ಸುಮಾರು 58 ಪ್ರಶ್ನೆಗಳನ್ನು ಸರಿಯಾಗಿ, ಅರ್ಥಗರ್ಭಿತವಾಗಿ ತರ್ಜುಮೆ/ ಅನುವಾದ/ ಭಾಷಾಂತರ ಮಾಡದೆ ಪ್ರಮಾದ ಎಸಗಿದೆ.
ಕರ್ನಾಟಕದಲ್ಲಿ ಕನ್ನಡ ಭಾಷೆ ಹಾಗೂ ಮಾಧ್ಯಮಕ್ಕೆ ಒತ್ತು ನೀಡದೇ ಆಂಗ್ಲ ಭಾಷೆ ಅಂತಿಮ ಎಂದು ಸೂಚಿಸಿದೆ. ಹಾಗಾದರೆ ಕನ್ನಡ ಆಸ್ಮಿತೆ, ಮಾಧ್ಯಮ, ಹಕ್ಕುಗಳು, ಹಾಗೂ ಕನಸುಗಳು ಬರೀ ನಾಟಕಿಯವೇ?. ಕನ್ನಡ ಸಾರ್ವಭೌಮತ್ವಕ್ಕೆ ಬೆಲೆ ಇಲ್ಲವೇ?. ಕನ್ನಡದ ವಿರೋಧ ನೀತಿ ವಿರುದ್ಧ ಮತ್ತೊಮ್ಮೆ ಗೋಕಾಕ್ ತರಹದ ಚಳವಳಿ ಅನಿವಾರ್ಯವೇ? ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ.
ಮುಂದುವರೆದು ಪ್ರಶ್ನೆಪತ್ರಿಕೆ ಮಾದರಿ ವಿಷಯವಾರು ಪ್ರಶ್ನೆಗಳು ಇರಬೇಕು ಎಂಬುದು ಪಠ್ಯಕ್ರಮದಲ್ಲಿ ತಿಳಿಸಿದೆ. ಆದರೆ ಇಲ್ಲಿ ಆ ನಿಯಮ ಪಾಲನೆ ಮಾಡದೇ ಬೇಕಾಬಿಟ್ಟಿ ಪ್ರಶ್ನೆಗಳನ್ನು ಕೇಳಿ ಗೊಂದಲ ಸೃಷ್ಟಿಸಿದೆ. ಒಂದು ಪ್ರಶ್ನೆಗೆ ಒಂದೇ ಉತ್ತರವನ್ನು ಕಂಡುಕೊಳ್ಳಲು ಆಗದೇ ಪರದಾಡುವಂತೆ ಮಾಡಿದೆ. ಯಾವುದೇ ತಾರ್ಕಿಕ ಉತ್ತರ ಕಂಡುಕೊಳ್ಳುವುದು ಕ್ಲಿಷ್ಟಕರ ಆಗಿದೆ.
58 ಪ್ರಶ್ನೆಗಳಿಗೆ 116 ಕೃಪಾಂಕ ಕೊಡಲು ಸಾಧ್ಯವಿಲ್ಲ. ಇದರ ನಡೆಯು ಗ್ರಾಮೀಣ ಭಾಗದ, ಬಡ ಕುಟುಂಬ ಮತ್ತು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಪ್ರತಿಭಾವಂತ ಅಭ್ಯರ್ಥಿಗಳ ಉದ್ಯೋಗದ ಕನಸು ಕಮರಿಹೋಗಿದೆ. ಕೆಪಿಎಸ್‌ಸಿ 4-5 ವರ್ಷಗಳಿಗೊಮ್ಮೆ ಅಧಿಸೂಚನೆ ಹೊರಡಿಸಿ ಅಭ್ಯರ್ಥಿಗಳ ವಯಸ್ಸು, ಕೌಟುಂಬಿಕ ಸಂಕಷ್ಟ, ಆರ್ಥಿಕ ನಷ್ಟ ಇತರೆ ಸಮಸ್ಯೆ ಸೃಷ್ಟಿಸಿ ಚೆಲ್ಲಾಟವಾಡುತ್ತಿದೆ.
ಇಷ್ಟೆಲ್ಲ ಅವಾಂತರಗಳಿಗೆ ಕಾರಣರಾಗಿರುವ ಭಾಷಾಂತರಕಾರರು, ತಜ್ಞ ಸಮಿತಿ ಮತ್ತು ಯಾರೇ ಅಧಿಕಾರಿಗಳನ್ನು ಈ ಕೂಡಲೇ ವಜಾಗೊಳಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದು ಮತ್ತು ತಾವುಗಳು ಇದರ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಮರುಪರೀಕ್ಷೆ ನಡೆಸಲು ಕೆಪಿಎಸ್‌ಸಿಗೆ ಸೂಕ್ತ ಆದೇಶ ನೀಡಲು ಕೋರಿದೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications