Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ
Kannada Books: ಕರ್ನಾಟಕದಲ್ಲಿ ಬರಹಗಾರರು ಹಾಗೂ ಪುಸ್ತಕ ಪ್ರಕಾಶಕರು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಬರಹಗಾರ ಹಾಗೂ ಪುಸ್ತಕ ಪ್ರಕಾಶಕ ರಾಜೇಂದ್ರ ಪ್ರಸಾದ್ ಅವರ ಬರಹ ಇಲ್ಲಿದೆ. 2018 ರಲ್ಲಿ ಮತ್ತೆ ಪುಸ್ತಕ ಪ್ರಕಟನೆಯಲ್ಲಿ ತೊಡಗಿದ ಮೇಲೆ ಅನಿಸಿದ್ದು ಪುಸ್ತಕ ಮಾರಾಟದಲ್ಲಿ ಅತ್ಯಂತ ದೊಡ್ಡ ಸಮಸ್ಯೆ ಅಂದರೆ ಪುಸ್ತಕ ಮಳಿಗೆಗಳಿಗೆ / ಮಾರಾಟಗಾರರಿಗೆ ಕೊಟ್ಟ ಪುಸ್ತಕಗಳ ಬಿಲ್ ಮೊತ್ತವನ್ನು ವಸೂಲು ಮಾಡುವುದು! ಆರೇಳು ವರ್ಷಗಳಿಂದ ಹಲವರು ಸಾವಿರಾರು ರೂಪಾಯಿಗಳ ಬಾಕಿಯನ್ನು ಹಾಗೇ ಉಳಿಸಿಕೊಂಡಿದ್ದಾರೆ. ಕೇಳಿದರೆ ಬಾಕಿ ಕೊಡುವುದಿಲ್ಲ, ಪ್ರತಿಕ್ರಿಯಿಸುವುದಿಲ್ಲ. ಹೆಚ್ಚು ಬಾರಿ ಕೇಳಿದರೆ ನಮ್ಮ ಪುಸ್ತಕಗಳನ್ನು ಮತ್ತೆ ಕೊಳ್ಳುವುದೂ ಇಲ್ಲ. ಹಳೆಯ ಬಾಕಿಯೇ ಬಾರದೇ ಮತ್ತೆ ಕೊಡುವುದರಲ್ಲಿ ಅರ್ಥವೂ ಇಲ್ಲ.
ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆಗಳನ್ನು ಮಾಡಿರುವ ಜನರಲ್ಲಿ ಖಂಡಿತಾ ಇಲ್ಲ. ಕೆಲವರು ನೇರವಾಗಿ ಕೊಂಡಾಗಿ ತಡವಾಗಿ ಕೊಡುವುದಾಗಿ ಹೇಳಿ ಹಣವನ್ನು ತಲುಪಿಸುತ್ತಾರೆ, ಆದರೆ ಮಳಿಗೆಗಳು ಕೊಡುವುದೇ ಇಲ್ಲ. ಆದ್ರೆ ಮಳಿಗೆಗಳನ್ನು ಉಳಿಸಿ, ಬೆಳೆಸಿ ಎಂಬ ಭಾಷಣಗಳನ್ನು ಉದ್ದಗಲ ಮಾಡುತ್ತಾರೆ! ಆದರೆ ಯಾರು ಎಲ್ಲಿಂದ ಉಳಿಸಿ, ಬೆಳೆಸುತ್ತಾರೆ?! ಪುಸ್ತಕಗಳನ್ನು ಸರಬರಾಜು ಮಾಡಿದ ಪ್ರಕಾಶಕರಿಗೆ ಕನಿಷ್ಠ ಪ್ರತಿಕ್ರಿಯಿಸುವ ಕಂತು ಕಂತಾಗಿ ಬಿಲ್ ಮೊತ್ತವನ್ನು ಪಾವತಿಸುವ ಪ್ರಕ್ರಿಯೆಗಳಾದರೂ ನಡೆಯಬೇಕಲ್ಲ! ಹೆಸರಾಂತ ಮಳಿಗೆಗಳಿಂದ ಹಿಡಿದು ಭಾಷಣಗಳನ್ನು ಮಳಿಗೆಗಳವರೆಗೆ ಇದೇ ಕಥೆ!

ಮೂರು ತಿಂಗಳ ಹಿಂದೆ ಹಿರಿಯೊಬ್ಬರ ಸಲಹೆ ಮೇರೆಗೆ ಹೊರರಾಜ್ಯದ ಮಳಿಗೆಯೊಂದಕ್ಕೆ ಹತ್ತು ಪ್ರತಿಗಳನ್ನು ಕಳುಹಿಸಿದ್ದೆವು. ಅದರಲ್ಲಿ ಒಂಬತ್ತು ಪ್ರತಿಗಳು ಮಾರಾಟವಾಗಿ, ಒಂದೇ ಪ್ರತಿ ಉಳಿದಿದೆ. ಆದರೆ ಇಂದಿನವರೆಗೂ ಬಿಲ್ ಮೊತ್ತ ಪಾವತಿಯಾಗಿಲ್ಲ! ಇದುವರೆಗೂ ಸರಿಸುಮಾರು ಏಳೆಂಟು ಬಾರಿ ಅವರಿಗೆ ನೆನಪಿಸಲಾಗಿದೆ. ಅವರು ತೆಗೆದುಕೊಳ್ಳುವ ಮೊದಲು ಮಾಡಿದ ತುರಾತುರಿ, ತುರ್ತಾಗಿ ಕಳಿಸಿಕೊಡಲು ಮಾಡಿದ ಒತ್ತಾಯ, ಪ್ರತಿ ಉಳಿದರೆ ಹಿಂತೆಗೆದುಕೊಳ್ಳಬೇಕೆಂಬ ಕರಾರುಗಳು ನಡುವೆ ಸರಿಯಾಗಿ ಬಿಲ್‌ಪಾವತಿ ಮಾಡುವ ಬಗ್ಗೆ ಬದ್ದತೆಯನ್ನು ಮಾತ್ರ ಅವರು ತೋರಲೇ ಇಲ್ಲ.
ಕರ್ನಾಟಕದ ಪುಸ್ತಕ ಮಳಿಗೆಗಳು, ಮಾರಾಟಗಾರರ ಸಮಸ್ಯೆ ಇನ್ನೂ ವಿಚಿತ್ರ. ಕೊವಿಡ್ ಮೊದಲು ನಾಕೈದು ಜನ ಬಾಕ್ಸ್ ಗಟ್ಟಲೆ ಪುಸ್ತಕ ಮಾರಾಟಕ್ಕೆ ತೆಗದುಕೊಂಡವರ ಪತ್ತೆಯೇ ಇಲ್ಲ. ಕೆಲವೊಂದು ಮಳಿಗೆಗಳು ಇವತ್ತಿಗೂ ಸಾವಿರಾರು ರುಪಾಯಿ ಬಾಕಿಯನ್ನು ಪಾವತಿಸಿಲ್ಲ, ಮೇಲ್ -ಮೆಸೇಜುಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಇನ್ನು ಸರ್ಕಾರದ ಗ್ರಂಥಾಲಯ ಇಲಾಖೆಯಂತು ಮಾತಾಡುವುದೇ ಬೇಡ. ಅಷ್ಟು ನಿರ್ಲಕ್ಷ್ಯದ ಕೊಂಪೆ! ಪುಸ್ತಕ ಪ್ರಕಟನೆ, ಮಾರಾಟ, ಪಾವತಿಗಳಲ್ಲಿ ನಮಗೆ ಬದ್ಧತೆಯೇ ಇಲ್ಲ. ಆದರೂ ನೈತಿಕತೆ ಭಾಷಣ ಮಾತ್ರ ಬಹಳ ಉದ್ದುದ್ದ!
ರಾಜೇಂದ್ರ ಪ್ರಸಾದ್, ಬರಹಗಾರ ಹಾಗೂ ಪುಸ್ತಕ ಪ್ರಕಾಶಕರು












Click it and Unblock the Notifications