ಸಿದ್ದರಾಮಯ್ಯ ಸರ್ಕಾರ ಬಿಜೆಪಿ ಆಡಳಿತದಂತಾಗಿದೆ!
ಬೆಂಗಳೂರು, ಆ.20 : "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಹಿಂದಿನ ಬಿಜೆಪಿ ಸರ್ಕಾರದಂತೆಯೇ ಇದೆ. ಜನರಿಗೆ ಕೊಟ್ಟ ಮಾತಿನಂತೆ ಹೊಸ ಸರ್ಕಾರ ನಡೆದುಕೊಳ್ಳತ್ತಿಲ್ಲ" ಎಂದು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ಸರ್ಕಾರದ ಆಡಳಿತ ವೈಖರಿ ಹಿಂದಿನ ಬಿಜೆಪಿ ಸರ್ಕಾರದಂತೆಯೇ ಇದೆ. ಪಾರದರ್ಶಕತೆ ಕಾಣುತ್ತಿಲ್ಲ. ಜಡತ್ವ ಮುಂದುವರೆದಿದೆ. ಕೊಟ್ಟ ಮಾತಿನಂತೆ ನಡೆಯದಿದ್ದರೆ ಹೊಸ ಸರ್ಕಾರ ಏಕೆ ಬೇಕು? ಎಂದು ಪ್ರಶ್ನಿಸಿದರು.

ತಮ್ಮ ಮಾತಿನ ತುಂಬಾ ಸರ್ಕಾರದ ಆಡಳಿತ ವೈಖರಿ, ಜನಪ್ರತಿನಿಧಿಗಳ ನಡವಳಿಕೆ, ಸಚಿವರ ಬೇಜವಾಬ್ದಾರಿಯನ್ನು ಟೀಕಿಸಿದ ಸ್ಪೀಕರ್, ನಿಧಾನಗತಿಯ ಆಡಳಿತ ಭ್ರಷ್ಟಾಚಾರದ ಮತ್ತೂಂದು ಮುಖ ಎಂದು ಬಣ್ಣಿಸಿದರು. ಜನರ ನಿರೀಕ್ಷೆಗೆ ತಕ್ಕಂತೆ ಹೊಸ ಸರ್ಕಾರ ಕೆಲಸ ಮಾಡದಿದ್ದರೆ, ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಸ್ಪೀಕರ್ ಹೇಳಿದರು. [ಸಿದ್ದರಾಮಯ್ಯ ಸರ್ಕಾರವನ್ನು ಕಾಡಿದ 10 ವಿವಾದಗಳು]
ಆಡಳಿತದಲ್ಲಿ ಪಾರದರ್ಶಕತೆ ಬಗ್ಗೆ ಅಧಿಕಾರಕ್ಕೆ ಬಂದ ಕ್ಷಣದಲ್ಲೇ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಇದುವರೆಗೂ ಅದನ್ನು ಆಚರಣೆಗೆ ತರಲು ಸಾಧ್ಯವಾಗಿಲ್ಲ. ಅಧಿಕಾರಿಗಳು ಹಾಗೂ ಸಚಿವರಿಗೆ ಬಿಸಿ ಮುಟ್ಟಿಸುವ ವಿಚಾರದಲ್ಲಿ ಅವರು ಮೃದು ಧೋರಣೆ ತಳೆದಿರುವುದೇ ಇದಕ್ಕೆ ಕಾರಣ ಎಂದು ಕಾಗೋಡು ತಿಮ್ಮಪ್ಪ ವಿಶ್ಲೇಷಿಸಿದರು.
ಸರ್ಕಾರದ ಆಡಳಿತದಲ್ಲಿ ನಿಧಾನಗತಿ ಇದೆ. ಅಧಿಕಾರಿಗಳು, ಮಂತ್ರಿಗಳಲ್ಲಿ ಜಾಗೃತಿ ಮನೋಭಾವ ಕಾಣುತ್ತಿಲ್ಲ. ಸರ್ಕಾರಕ್ಕೆ ಒಂದು ಪತ್ರ ಬರೆದರೆ ಅದರ ಕತೆ ಏನಾಯಿತು ಎಂದು ತಿಂಗಳುಗಟ್ಟಲೆ ಗೊತ್ತಾಗುವುದೇ ಇಲ್ಲ. ಸಚಿವಾಲಯದಿಂದ ಹಿಡಿದು ಕೆಳ ಹಂತದ ಕಚೇರಿಗಳಲ್ಲೂ ಇದೇ ಸ್ಥಿತಿ ಇದೆ ಎಂದು ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದರು.
ನಾನು ದೂರು ಕೊಡುವುದಿಲ್ಲ : ಮಂತ್ರಿಗಳ ಕಾರ್ಯವೈಖರಿ ಮತ್ತು ಸಾಧನೆ ಬಗ್ಗೆ ಮುಖ್ಯಮಂತ್ರಿಯವರೇ ಪರಾಮರ್ಶಿಸಬೇಕು. ಈ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಈ ಬಗ್ಗೆ ನಾನು ಹೈಕಮಾಂಡ್‌ಗೆ ದೂರು ಕೊಡುವುದಿಲ್ಲ ಎಂದು ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ನನಗೆ ಶಾಸನ ಸಭೆಯೇ ಹೈಕಮಾಂಡ್. ಅಲ್ಲೇ ಸರ್ಕಾರಕ್ಕೆ ತಿಳಿಹೇಳುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications