ಶ್ರೀಗಳ ವಿಚಾರಣೆಯಿಂದ ಹಿಂದೆ ಸರಿದ 4ನೇ ಜಡ್ಜ್
ಬೆಂಗಳೂರು, ಜ.22 : ರಾಘವೇಶ್ವರ ಶ್ರೀಗಳ ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆಯಿಂದ ನ್ಯಾ.ಹೆಚ್.ಜಿ.ರಮೇಶ್ ಹಿಂದೆ ಸರಿದಿದ್ದಾರೆ. ಕೆಲವು ದಿನಗಳ ಹಿಂದೆ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ, ರಾಮಮೋಹನ ರೆಡ್ಡಿ ಮತ್ತು ಎನ್.ಕುಮಾರ್ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದರು.
ರಾಮಚಂದ್ರಾಪುರದ ರಾಘವೇಶ್ವರ ಶ್ರೀಗಳು ತಮ್ಮ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಎನ್.ಕುಮಾರ್ ಮತ್ತು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಪೀಠದ ಮುಂದೆ ಬಂದಿತ್ತು. ಆಗ ನ್ಯಾ.ಎನ್.ಕುಮಾರ್ ತಾವು ಅರ್ಜಿಯ ವಿಚಾರಣೆ ನಡೆಸುವುದಿಲ್ಲ ಎಂದು ಹೇಳಿದ್ದರು.

ಆದ್ದರಿಂದ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಅವರು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೆಚ್.ಜಿ.ರಮೇಶ್ ಮತ್ತು ನ್ಯಾ.ಪಿ.ಬಿ.ಬಜಂತ್ರಿ ಅವರ ಪೀಠಕ್ಕೆ ವರ್ಗಾವಣೆ ಮಾಡಿದ್ದರು. ಇಂದು ಅರ್ಜಿಯ ವಿಚಾರಣೆ ವೇಳೆ ಹೆಚ್.ಜಿ.ರಮೇಶ್ ತಾವು ಪ್ರಕರಣದ ವಿಚಾರಣೆ ನಡೆಸುವುದಿಲ್ಲ ಎಂದು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. [ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಎನ್.ಕುಮಾರ್]
ನ್ಯಾಯಮೂರ್ತಿ ಹೆಚ್.ಜಿ.ರಮೇಶ್ ಅವರು ಶ್ರೀಗಳ ಪರ ವಕೀಲರಾದ ಬಿ.ವಿ.ಆಚಾರ್ಯ ಅವರ ಜೊತೆ ವಕೀಲರಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ. [ಮಠದ ಉತ್ತರಾಧಿಕಾರಿ ವಿವಾದಕ್ಕೆ ತೆರೆ]
ಹೆಚ್.ಜಿ.ರಮೇಶ್ ಶ್ರೀಗಳ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವ ನಾಲ್ಕನೇ ನ್ಯಾಯಮೂರ್ತಿಗಳಾಗಿದ್ದಾರೆ. ಹಿಂದೆ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ, ರಾಮಮೋಹನ ರೆಡ್ಡಿ ಮತ್ತು ಎನ್.ಕುಮಾರ್ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದರು. [ವಿಚಾರಣೆಯಿಂದ ಹಿಂದೆ ಸರಿದ ಜಡ್ಜ್]
ನ್ಯಾಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದಿರುವುದರಿಂದ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಅವರು ಅರ್ಜಿಯ ವಿಚಾರಣೆಯನ್ನು ಬೇರೆ ಪೀಠಕ್ಕೆ ವರ್ಗಾವಣೆ ಮಾಡುವ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ.












Click it and Unblock the Notifications