ಟಾರ್ಗೆಟ್ 123 ಸ್ಥಾನ, 218 ಅಭ್ಯರ್ಥಿಗಳು ಕಣಕ್ಕೆ ಇದು ಜೆಡಿಎಸ್ ತಂತ್ರ!
ಬೆಂಗಳೂರು, ಏಪ್ರಿಲ್ 23; ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲು ಕರ್ನಾಟಕದಲ್ಲಿ ಚುನಾವಣೆ ಸಿದ್ಧತೆ ಆರಂಭಿಸಿದ್ದು ಪ್ರಾದೇಶಿ ಪಕ್ಷ ಜೆಡಿಎಸ್. 'ಮಿಷನ್ 123' ಎಂಬ ಘೋಷಣೆಯೊಂದಿಗೆ ಪಕ್ಷ ಜನರ ಮುಂದೆ ಬಂದಿದೆ. ಮೇ 10ರಂದು ನಡೆಯುವ ವಿಧಾನಸಭೆ ಚುನಾವಣೆಗೆ 218 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಉಳಿದ ಕ್ಷೇತ್ರದಲ್ಲಿ ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿದೆ.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳನ್ನು ಸಮಾನ ದೂರದಲ್ಲಿ ಇಟ್ಟಿದ್ದಾರೆ. ನೆಲ, ಜಲ, ಭಾಷೆ ಉಳಿವಿಗೆ ಪ್ರಾದೇಶಿಕ ಪಕ್ಷದ ಅಗತ್ಯವಿದೆ. ಆದ್ದರಿಂದ ಸ್ವತಂತ್ರವಾಗಿ ಅಧಿಕಾರ ನಡೆಸಲು ಆಶೀರ್ವಾದ ಮಾಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಪಂಚರತ್ನ ರತಥಯಾತ್ರೆ, ಜನತಾ ಜಲಧಾರೆ ಮುಂತಾದ ಕಾರ್ಯಕ್ರಮಗಳ ಮೂಲಕ ಪಕ್ಷ ಜನರ ಬಳಿ ಹೋಗಿದೆ.

ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲು, ಚುನಾವಣಾ ದಿನಾಂಕ ಘೋಷಣೆಗೆ ಮೊದಲೇ ಜೆಡಿಎಸ್ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತು. 2ನೇ ಪಟ್ಟಿಯಲ್ಲಿ 49, 3ನೇ ಪಟ್ಟಿಯಲ್ಲಿ 59 ಮತ್ತು 4ನೇ ಪಟ್ಟಿಯಲ್ಲಿ 13 ಅಭ್ಯರ್ಥಿಗಳು ಸೇರಿ 218 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪಕ್ಷ ಕಣಕ್ಕಿಳಿಸಿದೆ. ಎಚ್. ಡಿ. ಕುಮಾರಸ್ವಾಮಿ ಚನ್ನಪಟ್ಟಣದಿಂದ, ನಿಖಿಲ್ ಕುಮಾರಸ್ವಾಮಿ ರಾಮನಗರದಿಂದ, ಎಚ್. ಡಿ. ರೇವಣ್ಣ ಹೊಳೆನರಸೀಪುರದಿಂದ ಪಕ್ಷದ ಅಭ್ಯರ್ಥಿಗಳು. ಮೈಸೂರಿನ ಚಾಮುಂಡೇಶ್ವರಿಯಲ್ಲಿ ಜಿ. ಟಿ. ದೇವೇಗೌಡರನ್ನು ಉಳಿಸಿಕೊಂಡು ಮತ್ತೆ ಟಿಕೆಟ್ ನೀಡಲಾಗಿದೆ.
ಹಾಸನ ಟಿಕೆಟ್ ವಿವಾದ; ಜೆಡಿಎಸ್ ಮೊದಲೇ 93 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ಆದರೆ ಪಕ್ಷಕ್ಕೆ ಹಾಸನದ ಟಿಕೆಟ್ ಹಂಚಿಕೆ ಭಾರೀ ದೊಡ್ಡ ಸವಾಲು ಆಯಿತು. ಮಾಜಿ ಸಚಿವ ಎಚ್. ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ಮತ್ತು ಸ್ವರೂಪ್ ಪ್ರಕಾಶ್ ನಡುವಿನ ಟಿಕೆಟ್ ಜಟಾಪಟಿ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಯಿತು. ಅಂತಿಮವಾಗಿ ದೇವೇಗೌಡರ ತೀರ್ಮಾನದಂತೆ ನಡೆಯಲು ಎಚ್. ಡಿ. ರೇವಣ್ಣ ಕುಟುಂಬ ತೀರ್ಮಾನಿಸಿತು. ಟಿಕೆಟ್ ಸ್ವರೂಪ್ ಪ್ರಕಾಶ್ ಪಾಲಾಯಿತು.
ಹಲವು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಟಿಕೆಟ್ ನೀಡಿರುವ ಜೆಡಿಎಸ್ ಪಕ್ಷ ಆಯನೂರು ಮಂಜುನಾಥ್, ರಘು ಆಚಾರ್ ಸೇರಿದಂತೆ ವಿವಿಧ ಪಕ್ಷಗಳಲ್ಲಿ ಟಿಕೆಟ್ ವಂಚಿತರಾದವರನ್ನು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ನೀಡಿದೆ. ಅರಸೀಕೆರೆ, ಅರಕಲಗೊಡು, ಗುಬ್ಬಿಯಲ್ಲಿ ಹಾಲಿ ಶಾಸಕರು ಪಕ್ಷ ಬಿಟ್ಟು ಹೋಗಿದ್ದಾರೆ. ಕಡೂರು ಕ್ಷೇತ್ರದ ಮಾಜಿ ಶಾಸಕ ವೈಎಸ್‌ವಿ ದತ್ತಾ ಸಹ ಪಕ್ಷ ಬಿಟ್ಟು ಹೋಗಿ ಕಾಂಗ್ರೆಸ್ ಟಿಕೆಟ್ ಸಿಗದೆ ಮತ್ತೆ ವಾಪಸ್ ಬಂದು ಜೆಡಿಎಸ್‌ನಿಂದ ಕಣಕ್ಕಿಳಿಸಿದ್ದಾರೆ.

ಮೈಸೂರಿನ ನಂಜನಗೂಡು ಕ್ಷೇತ್ರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಧ್ರುವ ನಾರಾಯಣ ಮತ್ತು ಅವರ ಪತ್ನಿ ನಿಧನದ ಬಳಿಕ ಕಾಂಗ್ರೆಸ್ ಪಕ್ಷ ದರ್ಶನ್ ಧ್ರುವ ನಾರಾಯಣಗೆ ಟಿಕೆಟ್ ನೀಡಿದೆ. ಜೆಡಿಎಸ್ ಪಕ್ಷ ಇಲ್ಲಿ ದರ್ಶನ್ ಬೆಂಬಲಿಸಿ ಅಭ್ಯರ್ಥಿ ಕಣಕ್ಕಿಳಿಸಿಲ್ಲ. ಉಳಿದಂತೆ ಗುಲಬರ್ಗಾ ಗ್ರಾಮಾಂತರ, ಬಾಗೇಪಲ್ಲಿ, ಕೆ. ಆರ್. ಪುರದಲ್ಲಿ ಸಿಪಿಐಎಂ ಅಭ್ಯರ್ಥಿಗೆ ಬೆಂಬಲ ನೀಡಲಾಗಿದೆ. ಸಿ. ವಿ. ರಾಮನ್ ನಗರ, ವಿಜಯನಗರ, ಮಹದೇವಪುರದಲ್ಲಿ ಆರ್‌ಪಿಐ ಪಕ್ಷಕ್ಕೆ ಜೆಡಿಎಸ್ ಬೆಂಬಲ ನೀಡಿದೆ.
ಜನತಾ ಪರ್ವ; ಟಿಕೆಟ್ ಹಂಚಿಕೆಗೂ ಮೊದಲು ಹಾಲಿ ಶಾಸಕರಿಗೆ, ಟಿಕೆಟ್ ಆಕಾಂಕ್ಷಿಗಳಿಗೆ ಜನತಾ ಪರ್ವ, ಜನತಾ ಸಂಗಮ 1, ಜನತಾ ಸಂಗಮ 1.0 ಹೆಸರಿನಲ್ಲಿ ಕಾರ್ಯಾಗಾರ ನಡೆಸಲಿದೆ. ಅಲ್ಲದೇ ಪಂಚರತ್ನ ರಥಯಾತ್ರೆ ಎಂಬ ಕಾರ್ಯಕ್ರಮದ ಮೂಲಕ ಎಚ್. ಡಿ. ಕುಮಾರಸ್ವಾಮಿ ಎಲ್ಲಾ ಕ್ಷೇತ್ರಗಳಲ್ಲೂ ಸಂಚಾರ ಮಾಡಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದರೆ ಜಾರಿಗೆ ತರುವ 5 ಮುಖ್ಯ ಅಂಶಗಳನ್ನು ಜನರ ಮುಂದಿಟ್ಟಿದ್ದಾರೆ.
ಬೆಂಗಳೂರು ನಗರದ 28 ಕ್ಷೇತ್ರಗಳ ಮೇಲೆ ಸಹ ಜೆಡಿಎಸ್ ಕಣ್ಣಿಟ್ಟಿದೆ. ಅದರಲ್ಲೂ ಕಳೆದ ಬಾರಿ 2ನೇ ಸ್ಥಾನದಲ್ಲಿ ಬಸವನಗುಡಿ, ಯಶವಂತಪುರದಲ್ಲಿ ಈ ಬಾರಿ ಗೆಲ್ಲಲೇಬೇಕು ಎಂದು ತಂತ್ರವನ್ನು ರೂಪಿಸಲಾಗಿದೆ. ಬೆಂಗಳೂರು ನಗರದ ವ್ಯಾಪ್ತಿಯಲ್ಲಿ 10 ಸ್ಥಾನ ಗೆಲ್ಲುವ ಗುರಿಯೊಂದಿಗೆ ರೋಡ್ ಶೋ, ಪ್ರಚಾರ ಕಾರ್ಯವನ್ನು ನಡೆಸಲಾಗುತ್ತಿದೆ. ಪಕ್ಷ ಚುನಾವಣೆಯಲ್ಲಿ ಎಷ್ಟು ಸ್ಥಾನಗಳಿಸಲಿದೆ? ಎಂದು ತಿಳಿಯಲು ಮೇ 13ರ ತನಕ ಕಾಯಬೇಕಿದೆ.












Click it and Unblock the Notifications