JDS: ಕಾಂಗ್ರೆಸ್ ಆಡಳಿತದಲ್ಲಿ ಮಹಿಳೆಯರು ನಡುರಸ್ತೆಗೆ ಕಾಲಿಂಡುವಂತಿಲ್ಲ
ಗಂಗಾವತಿ ತಾಲೂಕಿನ ಸಾಣಾಪುರದ ಬಳಿ ಇಸ್ರೇಲ್ ಮಹಿಳೆ ಹಾಗೂ ಹೋಂ ಸ್ಟೇ ಮಾಲಕಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರವಾಗಿ ರಾಜ್ಯ ಸರ್ಕಾರವನ್ನು ಜೆಡಿಎಸ್ ತರಾಟೆಗೆ ತೆಗೆದುಕೊಂಡಿದೆ. ಒಂದೆಡೆ ಮಹಿಳಾ ದಿನಾಚರಣೆ, ಇನ್ನೊಂದೆಡೆ ಮಹಿಳೆಯರ ಮೇಲೆ ಅತ್ಯಾಚಾರ. ಇದು ಸಮಾಜವಾದಿ ಕೈಯ್ಯಲ್ಲಿರುವ ಕರ್ನಾಟಕದ ದುಸ್ಥಿತಿ ಎಂದು ಟೀಕಿಸಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದ ಬಳಿ ಪ್ರವಾಸಕ್ಕೆ ಬಂದಿದ್ದ ಇಸ್ರೇಲ್ ಮಹಿಳೆ ಮತ್ತು ಸ್ಥಳೀಯ ಹೋಮ್ ಸ್ಟೇ ಮಾಲಕಿಯ ಮೇಲೆ ಕಾಮಪಿಶಾಚಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಹೀನಕೃತ್ಯ ರಾಜ್ಯಕ್ಕೆ ಕಪ್ಪು ಚುಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸಿದ್ದರಾಮಯ್ಯ ಸರ್ಕಾರದ ಅಸಮರ್ಥ, ಅದಕ್ಷ ಆಡಳಿತ ಹಾಗೂ ಅಪ್ರಯೋಜಕ ಗೃಹ ಸಚಿವರಿಂದಾಗಿ ಕರ್ನಾಟಕದಲ್ಲಿ ಕಾಮಪಿಶಾಚಿಗಳ ಅಟ್ಟಹಾಸ ಮಿತಿಮೀರಿದೆ. ಕಾನೂನು ಸುವ್ಯವಸ್ಥೆ ಮಣ್ಣುಪಾಲಾಗಿದ್ದು, ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ನಾರಿಯರು ನಡುರಸ್ತೆಗೆ ಕಾಲಿಡುವುದೇ ದುಸ್ತರವಾಗಿದೆ ಎಂದು ದೂರಿದೆ.

ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರವೆಸಗಿರುವುದಷ್ಟೇ ಅಲ್ಲದೇ, ಓರ್ವ ಪ್ರವಾಸಿಗನನ್ನು ನಾಲೆಗೆ ತಳ್ಳಿ ಕೊಂದಿರುವ ದುರುಳರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಸಿದ್ದರಾಮಯ್ಯನವರೇ, ನಿಮ್ಮ ಸರ್ಕಾರದ ಭದ್ರತಾ ವೈಫಲ್ಯಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ಛೀ, ನಾಚಿಕೆಗೇಡು ಎಂದು ಗರಂ ಆಗಿದೆ.
ಸಿಎಂ ಹೇಳಿದ್ದೇನು?: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ಇಸ್ರೇಲಿ ಪ್ರಜೆ ಹಾಗೂ ಹೋಮ್ ಸ್ಟೇ ಮಾಲಕಿ ಮೇಲೆ ನಡೆದ ಹಲ್ಲೆ ಹಾಗೂ ಅತ್ಯಾಚಾರ ಅತ್ಯಂತ ಹೇಯ ಕೃತ್ಯ. ಘಟನೆ ವರದಿಯಾದ ಕೂಡಲೇ ಸಂಬಂಧಪಟ್ಟ ಪೊಲೀಸರಿಂದ ಮಾಹಿತಿ ಪಡೆದು, ಕಟ್ಟುನಿಟ್ಟಿನ ತನಿಖೆ ಕೈಗೊಂಡು, ಅಪರಾಧಿಗಳನ್ನು ಶೀಘ್ರ ಪತ್ತೆಹಚ್ಚುವಂತೆ ಸೂಚಿಸಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಪ್ರಕರಣದ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ. ರಾಜ್ಯಕ್ಕೆ ಬರುವ ಪ್ರವಾಸಿಗರು ಸೇರಿದಂತೆ ಪ್ರತಿಯೊಬ್ಬರಿಗೂ ರಕ್ಷಣೆ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ಅಗತ್ಯ ಕ್ರಮ ವಹಿಸಲಾಗುವುದು ಎಂದಿದ್ದಾರೆ.

ಏನಿದು ಘಟನೆ?: ಕರ್ನಾಟಕದ ಹಂಪಿ ಪಾರಂಪರಿಕ ತಾಣದ ಬಳಿ ವಿದೇಶಿ ಪ್ರಜೆ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ ಎಂದು ವರದಿಯಾಗಿದೆ. ವಿದೇಶಿ ಮಹಿಳೆ ಜೊತೆ ಇದ್ದ ಪುರುಷ ಪ್ರವಾಸಿಯೊಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಗುರುವಾರ ರಾತ್ರಿ ದುಷ್ಕರ್ಮಿಗಳ ಗುಂಪೊಂದು ಇವರ ಮೇಲೆ ದಾಳಿ ಮಾಡಿ ಅವರನ್ನು ತುಂಗಭದ್ರಾ ನದಿ ಕಾಲುವೆಗೆ ತಳ್ಳಿ ಎಸ್ಕೇಪ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಕೊಪ್ಪಳ ಜಿಲ್ಲೆಯ ಆನೆಗುಂದಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗಂಗಾವತಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಈ ಪ್ರಕರಣ ಸಂಬಂಧ ಮೂವರು ಆರೋಪಿಗಳ ವಿರುದ್ಧ ಅತ್ಯಾಚಾರ, ದರೋಡೆ, ಹಲ್ಲೆ ಹಾಗೂ ಕೊಲೆ ಯತ್ನದ ಕೇಸ್ ದಾಖಲಿಸಿದ್ದಾರೆ.
ಇಬ್ಬರು ವಿದೇಶಿಯರು ಮತ್ತು ಅವರ ರೆಸಾರ್ಟ್‌ನ ಮಹಿಳಾ ಮಾರ್ಗದರ್ಶಿ ಸೇರಿದಂತೆ ನಾಲ್ವರು ಪ್ರವಾಸಿಗರ ಗುಂಪು ಹಂಪಿಯ ನದಿಗೆ ಅಡ್ಡಲಾಗಿ ತುಂಗಭದ್ರಾ ಕಾಲುವೆಯ ಬಳಿ ವಿಶ್ರಾಂತಿ ಪಡೆಯುತ್ತಿದ್ದಾಗ ದಾಳಿಕೋರರು ಅವರ ಬಳಿಗೆ ಬಂದು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮರುದಿನ ಬೆಳಿಗ್ಗೆ 29 ವರ್ಷದ ಮಹಿಳಾ ಪ್ರವಾಸಿ ಮಾರ್ಗದರ್ಶಿ ಸಲ್ಲಿಸಿದ ದೂರಿನಲ್ಲಿ ಮೂವರು ದಾಳಿಕೋರರು ಕನ್ನಡ ಮತ್ತು ತೆಲುಗು ಮಾತನಾಡುತ್ತಿದ್ದರು. ಅವರು 20ರಿಂದ 25 ವರ್ಷ ವಯಸ್ಸಿನವರಾಗಿದ್ದರು ಎಂದು ಹೇಳಿದ್ದರು. ಈ ಸಂಬಂಧ ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ.












Click it and Unblock the Notifications