ಕಾಂಗ್ರೆಸ್ ಗೆ ಬರಲು ಜೆಡಿಎಸ್ ಶಾಸಕರ ಗುಸುಗುಸು ಚರ್ಚೆ: ಸ್ಟೋಟಕ ಬಾಂಬ್ ಸಿಡಿಸಿದ ಸಚಿವ
ಚಾಮರಾಜನಗರ, ನವೆಂಬರ್ 01: ಕಾಂಗ್ರೆಸ್ ಗೆ ಸೇರ್ಪಡೆಯಾಗಲು ಜೆಡಿಎಸ್ ನ ಶಾಸಕರು ಚರ್ಚೆ ನಡೆಸುತ್ತುದ್ದಾರೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಎಲ್ಲವೂ ಅಂತಿಮವಾಗಿಲ್ಲ, ಗುಸುಗುಸು ಚರ್ಚೆ ಇದೆ ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು.
ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಜೆಡಿಎಸ್ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರುವ ಬಗ್ಗೆ ಚರ್ಚೆ ಆಗುತ್ತಿದೆ, ಗುಸು-ಗುಸು ಚರ್ಚೆ ನಡೆಯುತ್ತಿದೆ, ಯಾರು ಬರ್ತಾರೆ ಎಂದು ನಿಖರ ಮಾಹಿತಿ ಇಲ್ಲಾ, ಕಾದು ನೋಡೋಣ, ಯಾರ್ಯಾರು ಬರ್ತಾರೆ ಅಂತಾ. ಆದರೆ, ಚರ್ಚೆ ಅಂತೂ ಆಗುತ್ತಿದೆ ಎಂದು ಹೇಳಿದರು.

ಇನ್ನು, ಉಪ ಚುನಾವಣೆ ಕುರಿತು ಮಾತನಾಡಿ, ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ, ನನ್ನನ್ನು ಚನ್ನಪಟ್ಟಣ ಚುನಾವಣೆಗೆ ನಿಯೋಜಿಸಿದ್ದು, ನಾನು ಕೂಡ ಹೋಗಿ ಮತಯಾಚಿಸುತ್ತೇನೆ ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು.
ರಾಜ್ಯ ಸರ್ಕಾರ ದಿವಾಳಿ ಆಗಿದೆ ಎಂದಿದ್ದ ಸಚಿವ ಪ್ರಹ್ಲಾದ್ ಜೋಶಿಗೆ ತಿರುಗೇಟು ಕೊಟ್ಟ ವೆಂಕಟೇಶ್, ಯಾರು ಎಷ್ಟು ಸಾಲ ಮಾಡಿದ್ದಾರೆ ಎಂದು ಲೆಕ್ಕ ಕೊಡಲಿ,ಕೇಂದ್ರ ಸರ್ಕಾರ ದಿವಾಳಿ ಆಗುತ್ತಿದೆಯೇ ಹೊರತು ರಾಜ್ಯ ಸರ್ಕಾರವಲ್ಲ, ಪ್ರಧಾನಿ ನರೇಂದ್ರ ಮೋದಿ ಬಂದ ಮೇಲೆ ಎಷ್ಟು ಲಕ್ಷ ಕೋಟಿ ಸಾಲ ಮಾಡಿದ್ದಾರೆ ಅದನ್ನು ಹೇಳಲಿ ಎಂದು ಕೆ.ವೆಂಕಟೇಶ್ ಟಾಂಗ್ ನೀಡಿದರು.
ಇನ್ನು, ವಕ್ಫ್ ಅಸ್ತಿ ಗೊಂದಲದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಕೆ.ವೆಂಕಟೇಶ್ ಅವರು ಮಾತನಾಡಿ, ಈಗಾಗಲೇ ಸಿಎಂ ಸ್ಪಷ್ಟಪಡಿಸಿದ್ದಾರೆ, ಯಾರ ಜಮೀನನ್ನು ನಾವು ಕಸಿದುಕೊಳ್ಳುವುದಿಲ್ಲ, ಬಿಜೆಪಿ ಅವರು ಸುಮ್ಮನೆ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.












Click it and Unblock the Notifications