ಹಣಬಲದ ಎದುರು ಜನಬಲಕ್ಕೆ ಸೋಲು: ಕುಮಾರಸ್ವಾಮಿ ಸರಣಿ ಟ್ವೀಟ್
ಬೆಂಗಳೂರು, ಡಿಸೆಂಬರ್ 14: ಕರ್ನಾಟಕದ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. "ಹಣ ಬಲ ಮತ್ತು ಜನ ಬಲದ ನಡುವಿನ ಹೋರಾಟದಲ್ಲಿ ಜನ ಬಲಕ್ಕೆ ಸೋಲಾಗಿರುವುದು ಬೇಸರ ತಂದಿದೆ. ರಾಷ್ಟ್ರೀಯ ಪಕ್ಷಗಳ ಹಣದ ಅಬ್ಬರದಲ್ಲಿ ನಾವು ಹಿನ್ನಡೆ ಅನುಭವಿಸಿದ್ದೇವೆ. ಆಣೆ, ಪ್ರಮಾಣಗಳ ನಡುವೆಯೂ ನೈತಿಕ ನೆಲೆಯಲ್ಲಿ ಸೆಣಸಿದ್ದೇವೆ," ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ರಾಜ್ಯದ 25 ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷಕ್ಕೆ 12, ಕಾಂಗ್ರೆಸ್ ಪಕ್ಷಕ್ಕೆ 11 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದರೆ, ಜೆಡಿಎಸ್ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಒಂದು ಕ್ಷೇತ್ರವು ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ. ರಾಜ್ಯದ 20 ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳಿಂದ 1 ಲಕ್ಷಕ್ಕೂ ಹೆಚ್ಚು ಚುನಾಯಿತ ಪ್ರತಿನಿಧಿಗಳು, ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಶಾಸಕರು ಹಾಗೂ ಸಂಸದರು ಮತ ಚಲಾಯಿಸಿದ್ದಾರೆ. ಜನಪ್ರತಿನಿಧಿಗಳೇ ವೋಟ್ ಹಾಕಿದ್ದು ಶೇಕಡಾ 99ರಷ್ಟು ಪ್ರಮಾಣದಲ್ಲಿ ಮತದಾನ ನಡೆದಿತ್ತು.
ಮಂಗಳವಾರ ಘೋಷಣೆಯಾದ ವಿಧಾನ ಪರಿಷತ್ ಚುನಾವಣಾ ಫಲಿತಾಂಶದ ಬಗ್ಗೆ ತೀವ್ರ ಅಸಮಾಧಾನ ತೋಡಿಕೊಂಡಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸರಣಿ ಟ್ವೀಟ್ ಮೂಲಕ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹರಿ ಹಾಯ್ದಿದ್ದಾರೆ. ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಏನು ಎಂಬುದನ್ನು ತೋರಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.

ವಿಧಾನಸಭಾ ಚುನಾವಣೆ ನಮ್ಮ ಗುರಿ:
"2023ರ ವಿಧಾನಸಭೆ ಚುನಾವಣೆಯೇ ನಮ್ಮ ಗುರಿ ಎಂದು ಹಿಂದೆಯೇ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಆ ನಿಟ್ಟಿನಲ್ಲಿ ನಮ್ಮ ತಯಾರಿ ನಡೆದಿದೆ. ಆದರೂ ಈ ಚುನಾವಣೆಯಲ್ಲಿ ಪ್ರಯತ್ನ ಮಾಡಿದ್ದೇವೆ. ʼದೊಡ್ಡ ಪಕ್ಷಗಳ ಕಾಂಚಾಣ ಹಂಚಿಕೆʼ ನಡುವೆ ನಾವು ಹಿಂದೆ ಬಿದ್ದಿದ್ದೇವೆ," ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಜೆಡಿಎಸ್ ಮುಖಂಡರು, ಕಾರ್ಯಕರ್ತರೇ ನಮ್ಮ ಶಕ್ತಿ:
"ಚುನಾವಣೆ ಎಂದರೆ ಸೋಲು-ಗೆಲುವು. ಗೆಲುವಿಗಾಗಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಅವರೇ ನಮ್ಮ ಶಕ್ತಿ. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು. ಈಗ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಹಣಬಲದಿಂದ ಎದುರಾಗುವ ಇಂಥ ಸೋಲುಗಳಿಗೆ ಜೆಡಿಎಸ್ ಎಂದೂ ಧೃತಿಗೆಡುವುದಿಲ್ಲ," ಎಂದು ಕುಮಾರಸ್ವಾಮಿ ಬರೆದುಕೊಂಡಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ತಿಳಿಯಲಿದೆ:
ವಿಧಾನ ಪರಿಷತ್ ಚುನಾವಣೆಯಲ್ಲಿ, "ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಈ ಚುನಾವಣೆಯ ಮತದಾರರು. ಜನರೇ ನೇರವಾಗಿ ಹಕ್ಕು ಚಲಾಯಿಸುವ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಏನೆಂಬುದು ತಿಳಿಯಲಿದೆ. ಪಕ್ಷ ಮತ್ತೆ ಪುಟಿದೆದ್ದು ಬರಲಿದೆ. ಜನರಲ್ಲಿ ಜೆಡಿಎಸ್ ಬಗೆಗಿನ ವಿಶ್ವಾಸವನ್ನು ಅಳಿಸಲಾಗದು ಎಂದರು ಬರೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಮುಂದಿನ ಟ್ವೀಟ್ ಸಂದೇಶದ ಮೂಲಕ ಈ ಚುನಾವಣೆಯಲ್ಲಿ ಜಯ ಗಳಿಸಿದ ಎಲ್ಲ ಪಕ್ಷಗಳ ಅಭ್ಯರ್ಥಿಗಳಿಗೆ ನನ್ನ ಶುಭಾಶಯಗಳನ್ನು ತಿಳಿಸಿದ್ದಾರೆ.
ಹಾಸನದಲ್ಲಿ ರೇವಣ್ಣ ಪುತ್ರನಿಗೆ ಗೆಲುವಿನ ಮಾಲೆ:
ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಹಾಸನ ಕ್ಷೇತ್ರದಲ್ಲಿ ಜಯ ಗಳಿಸುವ ಮೂಲಕ ಜೆಡಿಎಸ್ ಮತ್ತೆ ಪ್ರಾಬಲ್ಯ ಸಾಧಿಸಿದೆ. ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಸೂರಜ್ ರೇವಣ್ಣ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮೊದಲ ಪ್ರಾಶಸ್ತ್ಯದ ಮತದಲ್ಲೇ ಗೆಲುವಿನ ಕೇಕೆ ಹಾಕಿದ್ದಾರೆ. ಜೆಡಿಎಸ್ ಅಭ್ಯರ್ಥಿಗೆ 2247 ಮತಗಳು, ಕಾಂಗ್ರೆಸ್ ಅಭ್ಯರ್ಥಿಗೆ 724 ಮತಗಳು ಮತ್ತು ಬಿಜೆಪಿ ಅಭ್ಯರ್ಥಿಗೆ 435 ಮತಗಳು ಲಭಿಸಿವೆ. ಡಾ. ಸೂರಜ್ ರೇವಣ್ಣ 1523 ಮತಗಳ ಅಂತರದಿಂದ ಭರ್ಜರಿ ಜಯಭೇರಿ ಬಾರಿಸಿದ್ದಾರೆ.












Click it and Unblock the Notifications