ಲೋಕಾಯುಕ್ತ ಭಾಸ್ಕರರಾವ್ ರಾಜೀನಾಮೆ ನೀಡಲಿ
ಬೆಂಗಳೂರು, ಜೂ. 30 : ಕರ್ನಾಟಕದ ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ದೂರುಗಳಿವೆ. ನ್ಯಾ.ವೈ.ಭಾಸ್ಕರರಾವ್ ಕುಟುಂಬ ಸದಸ್ಯರ ವಿರುದ್ಧವೇ ಆರೋಪಗಳಿವೆ. ಆದ್ದರಿಂದ, ಲೋಕಾಯುಕ್ತರು ಸಂಸ್ಥೆಯ ಘನತೆ ಕಾಪಾಡಲು ಮತ್ತು ಪ್ರಭಾವ ರಹಿತವಾದ ತನಿಖೆಗೆ ಸಹಕಾರ ನೀಡಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಒತ್ತಾಯಿಸಿದೆ.
ಜೆಡಿಎಸ್ ವಕ್ತಾರ ರಮೇಶ್ ಬಾಬು ಅವರು ಮಂಗಳವಾರ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಅವರು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದು, ಸಾಂವಿಧಾನಿಕ ಹುದ್ದೆಯ ಜವಾಬ್ದಾರಿಯನ್ನು ಅರಿತಿರುತ್ತಾರೆ. [ಲೋಕಾಯುಕ್ತದಲ್ಲಿ ಅಕ್ರಮ, ಎಸ್ ಐಟಿ ತನಿಖೆ]

ಕರ್ನಾಟಕದ ಜನರು ಲೋಕಾಯುಕ್ತ ಸಂಸ್ಥೆಯ ಮೇಲೆ ಅಪಾರವಾದ ನಂಬಿಕೆ, ವಿಶ್ವಾಸ ಹಾಗೂ ಗೌರವಗಳನ್ನು ಹೊಂದಿದ್ದಾರೆ. ಸಂಸ್ಥೆಯಲ್ಲಿ ಭ್ರಷ್ಟರು ಸೇರಿಕೊಂಡರೆ ಜನಸಾಮಾನ್ಯರ ವಿಶ್ವಾಸಕ್ಕೆ ಧಕ್ಕೆಯಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಗೂ ಕಳಂಕ ಅಂಟಿಕೊಳ್ಳುತ್ತದೆ. [ಲೋಕಾಯುಕ್ತದಲ್ಲೇ ಭ್ರಷ್ಟಾಚಾರ, ಮುಂದೇನು?]
ಲೋಕಾಯುಕ್ತ ಭ್ರಷ್ಟಾಚಾರ, ಸ್ವಜನ ಪಕ್ಷಪಾತಗಳಿಂದ ಮುಕ್ತವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಕಳಂಕಿತರನ್ನು ಹಾಗೂ ಭ್ರಷ್ಟರನ್ನು ಸಂಸ್ಥೆಯಿಂದ ಮುಕ್ತಿಗೊಳಿಸಿ ಜನಸಾಮಾನ್ಯರ ನಂಬಿಕೆಯನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ.
ತಮ್ಮ ಕುಟುಂಬ ಸದಸ್ಯರ ಮೇಲೆಯೇ ಆರೋಪಗಳು ಕೇಳಿಬಂದಿರುವುದರಿಂದ ಲೋಕಾಯುಕ್ತ ನ್ಯಾ.ವೈ.ಭಾಸ್ಕರರಾವ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಒತ್ತಾಯಿಸಿದೆ.












Click it and Unblock the Notifications