ಕಾಂಗ್ರೆಸ್ ಈಗ ಪ್ರಾದೇಶಿಕ ಪಕ್ಷಗಳ ಬಾಲಂಗೋಚಿ, ನಿಮ್ಮದು ನಾಯಿಪಾಡು ಎಂದ ಜೆಡಿಎಸ್
ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್‌ಗೆ ಜೆಡಿಎಸ್ ಪಕ್ಷ ಲೇವಡಿ ಮಾಡಿದೆ. ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿರುವ ಬಗ್ಗೆ ಉಲ್ಲೇಖಿಸಿ ಅಣಕಿಸಿದೆ. ಸೋತು ಸೋತು ಸುಣ್ಣವಾಗಿರುವ ಕಾಂಗ್ರೆಸ್ ಪಕ್ಷವೀಗ ದೇಶಾದ್ಯಂತ ಪ್ರಾದೇಶಿಕ ಪಕ್ಷಗಳ ಬಾಲಂಗೋಚಿ ಎಂದು ಜೆಡಿಎಸ್ ಹೇಳಿದೆ.
ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಸೋಲು ಕಂಡಿದೆ. ಮಹಾರಾಷ್ಟ್ರದಲ್ಲಿಯೂ ಸೋಲಿನ ಹ್ಯಾಟ್ರಿಕ್, ಮರ್ಯಾದೆ ಉಳಿಸಿಕೊಳ್ಳಲು ಕರ್ನಾಟಕದ ಮೂರೇ ಸೀಟಿನ ಗಿಮಿಕ್! ಸೋತು ಸೋತು ಸುಣ್ಣವಾಗಿರುವ ಕಾಂಗ್ರೆಸ್ ಪಕ್ಷವೀಗ ದೇಶಾದ್ಯಂತ ಪ್ರಾದೇಶಿಕ ಪಕ್ಷಗಳ ಬಾಲಂಗೋಚಿ ಎಂದು ಕಾಂಗ್ರೆಸ್ ಮೈತ್ರಿಯ ಬಗ್ಗೆ ಕುಟುಕಿದೆ.

ಅಲ್ಲದೆ ಕಾಂಗ್ರೆಸ್‌ನ ಬಾಲಂಗೋಚಿ ಪಟ್ಟಿಯನ್ನು ಸಹ ಉಲ್ಲೇಖಿಸಿದೆ. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ, ಶರದ್ ಪವಾರ್ ಬಾಲಂಗೋಚಿ, ಜಾರ್ಖಂಡ್‌ನಲ್ಲಿ ಹೇಮಂತ್ ಸೊರೇನ್ ಬಾಲಂಗೋಚಿ, ಬಿಹಾರದಲ್ಲಿ ಲಾಲು ಬಾಲಂಗೋಚಿ, ಕಾಶ್ಮೀರದಲ್ಲಿ ಓಮರ್ ಅಬ್ದುಲ್ಲಾ ಬಾಲಂಗೋಚಿ, ತಮಿಳುನಾಡಿನಲ್ಲಿ ಡಿಎಂಕೆ ಬಾಲಂಗೋಚಿ, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಬಾಲಂಗೋಚಿ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಟ್ಟಿ ಬಾಲಂಗೋಚಿ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಬಾಲಂಗೋಚಿ ಎಂದು ಹೇಳಿದೆ.
ಕಾಂಗ್ರೆಸ್‌ನ ಈ ಬಾಲಂಗೋಚಿ ಪಟ್ಟಿ ದೊಡ್ಡದಿದೆ. ಇನ್ನು, ಅನೇಕ ರಾಜ್ಯಗಳಲ್ಲಿ ನೆಲೆಯೂ ಇಲ್ಲ, ಬೆಲೆಯೂ ಇಲ್ಲ. ನಿಮ್ಮದು ನಾಯಿಪಾಡು. ಇಷ್ಟಾದರೂ ಶತಮಾನಗಳಿಂದ ತುಕ್ಕು ಹಿಡಿದು, ಒಂದೊಂದೇ ಪಕಳೆ ಉದುರುತ್ತಿದ್ದರೂ ಕಪಟಿ ಕಾಂಗ್ರೆಸ್ ಪಾಠ ಕಲಿತಿಲ್ಲ. ನಶಿಸುತ್ತಿರುವ ಪಾರ್ಟಿ ಯಾವುದು? ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದೆ.

ಕಾಂಗ್ರೆಸ್ ಹೇಳಿದ್ದೇನು?: ಇದಕ್ಕೂ ಮುನ್ನ ಕಾಂಗ್ರೆಸ್ ಕೂಡ ಪಳೆಯುಳಿಕೆ ಪಕ್ಷ ಯಾವುದು ಎಂದು ಜೆಡಿಎಸ್‌ಗೆ ಪ್ರಶ್ನೆ ಮುಂದಿಟ್ಟಿತ್ತು. 19 ಸ್ಥಾನದಿಂದ 18 ಸ್ಥಾನಕ್ಕೆ ಕುಸಿದವರಾ ಅಥವಾ 136ರಿಂದ 138 ಸ್ಥಾನಕ್ಕೆ ಏರಿ ಸುಭದ್ರ, ಜನಪರ ಸರ್ಕಾರ ನಡೆಸುತ್ತಿರುವವರಾ? ಎಂದು ಗೇಲಿ ಮಾಡಿತ್ತು.
ತಾತ ಮಾಜಿ ಪ್ರಧಾನಿ, ತಂದೆ ಮಾಜಿ ಮುಖ್ಯಮಂತ್ರಿಯಾದರೂ ಮನೆಮಗನ ಹ್ಯಾಟ್ರಿಕ್ ಸೋಲಿಗೆ ಮೈಪರಚಿಕೊಳ್ಳುತ್ತಿರುವವರಾ? ಅಸ್ತಿತ್ವಕ್ಕಾಗಿ ನಂಬಿದ ಸಿದ್ಧಾಂತವನ್ನೇ ಮೂಲೆಗೆಸೆದು ಕೋಮುವಾದಿಗಳ ಸಖ್ಯ ಬೆಳೆಸಿದವರಾ? ಇನ್ನೊಬ್ಬರ ಬಚ್ಚಲು ಮನೆ ಬಗ್ಗಿ ನೋಡುವ ಬಗ್ಗೆ ಪರಪ್ಪನ ಅಗ್ರಹಾರದಲ್ಲಿರುವ ಮತ್ತೊಬ್ಬ ಮನೆಮಗನನ್ನು ಕೇಳಿ! ಚನ್ನಪಟ್ಟಣದ ಫಲಿತಾಂಶ ನಿಮ್ಮ ಪಕ್ಷದ ಐರನ್ ಲೆಗ್ ಯಾರು ಎನ್ನುವುದನ್ನು ನಿಮಗೇ ತೋರಿಸಿಕೊಟ್ಟಿದೆ ಎಂದು ವ್ಯಂಗ್ಯ ಮಾಡಿತ್ತು.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಅಲ್ಲಿ 6ನೇ ಸ್ಥಾನಕ್ಕೆ, ಜಾರ್ಖಂಡ್‌ನಲ್ಲಿ 3ನೇ ಸ್ಥಾನಕ್ಕೆ ಜಾರಿದೆ. ಆದರೂ ಕರ್ನಾಟಕದಲ್ಲಿ ವಾಮಮಾರ್ಗದಲ್ಲಿ ಗೆದ್ದ 3 ಉಪಚುನಾವಣೆ ಸೀಟುಗಳನ್ನು ಮುಖದ ಮೇಲಿಟ್ಟುಕೊಂಡು ಮೆರೆಯುತ್ತಿದೆ, ಮೆರೆಯಲಿ ಎಂದು ಜೆಡಿಎಸ್ ಕಾಲೆಳೆದಿತ್ತು.
ಮಹಾರಾಷ್ಟ್ರದಲ್ಲಿ ಮತದಾರರು ಪಕ್ಷದ ಪೋಸ್ಟ್ ಮಾರ್ಟಮ್ ಮಾಡಿದ್ದಾರೆ. ಕಾಂಗ್ರೆಸ್ಸಿಗರೇ, ಅನ್ಯರ ಬಗ್ಗೆ ಹಗುರವಾಗಿ ಮಾತನಾಡುವ ನಿಮ್ಮ ಹರಕು ಬಾಯಿಗಳಿಗೆ, ನಿಮ್ಮ ತೂತುಬಿದ್ದ ಮಡಿಕೆಯಂತಾಗಿರುವ ನಿಮ್ಮ ಪಕ್ಷಕ್ಕೆ ಮೊದಲು ತೇಪೆ ಹಚ್ಚಿ. 288 ಸೀಟುಗಳ ಮಹಾರಾಷ್ಟ್ರದಲ್ಲಿ ಹದಿನಾರೇ ಸೀಟಿಗೆ ಬೋರಲು ಬಿದ್ದ ಸೋ ಕಾಲ್ಡ್ ನ್ಯಾಷನಲ್ ಪಾರ್ಟಿ ನಾಯಕರೇ, ಇನ್ನೊಬ್ಬರ ಬಚ್ಚಲು ಮನೆ ಮೂಸಿ ನೋಡುವ ಚಟ ಬಿಡಿ ಎಂದು ಹರಿಹಾಯ್ದಿತ್ತು.












Click it and Unblock the Notifications