ಆದಾಯ ತೆರಿಗೆ ವಂಚಿಸಿದ ಆರೋಪ: ಆಸ್ಪತ್ರೆ, ಲ್ಯಾಬ್‌ಗಳ ಮೇಲೆ ಐಟಿ ದಾಳಿ
ಬೆಂಗಳೂರು, ನವೆಂಬರ್ 16: ಆದಾಯ ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯ ಇತರ ಜಿಲ್ಲೆಗಳ ವ್ಯಾಪ್ತಿಯ ಕೆಲವು ಆಸ್ಪತ್ರೆ ಹಾಗೂ ಡಯಾಗ್ನಸ್ಟಿಕ್ ಕೇಂದ್ರಗಳ ಮೇಲೆ ಐಟಿ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದ್ದಾರೆ.
ಮುಂಬೈನಿಂದ ಆಗಮಿಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬೆಳಗ್ಗೆ ನಸುಕಿನ ಜಾವ 4ಗಂಟೆಗೆ ಬೆಂಗಳೂರು ನಗರ, ಹುಬ್ಬಳ್ಳಿ ಹಾಗೂ ಬೆಳಗಾವಿ ಸೇರಿದಂತೆ ಪ್ರಮುಖ ನಗರಗಳಲ್ಲಿನ ಕೆಲವು ಆಸ್ಪತ್ರೆಗಳು ಮತ್ತು ಡಯಾಗ್ನಸ್ಟಿಕ್ ಸೆಂಟರ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆದಾಯ ಕುರಿತು ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಇದಲ್ಲದೇ ಆಸ್ಪತ್ರೆಗಳ ವೈದ್ಯರು ಆಡಳಿತ ಸಿಬ್ಬಂದಿಗೆ ಹಲವು ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿದ್ದಾರೆ. ಕೋವಿಡ್ ಕಾಲದಲ್ಲಿ ಎಷ್ಟು ರೋಗಿಗಳು ದಾಖಲಾಗಿದ್ದರು, ಪ್ರತಿ ರೋಗಿಗೆ ನೀಡಿದ ಚಿಕಿತ್ಸೆ ವೆಚ್ಚ ಎಷ್ಟು, ಒಬ್ಬ ರೋಗಿಗೆ ಎಚ್ಚು ಬಿಲ್ ಮಾಡಲಾಗಿತ್ತು ಎಂಬಿತ್ಯಾದಿ ಮಾಹಿತಿಗಳನ್ನು ಅಧಿಕಾರಿಗಳು ಪಡೆದಿದ್ದಾರೆ.
ಅಧಿಕ ಹಣ ಗಳಿಗೆ, ತೆರಿಗೆ ವಂಚನೆ
ಬೆಂಗಳೂರಿನ ಮಲ್ಲೇಶ್ವರಂ ವ್ಯಾಪ್ತಿಯ ಆರ್‌ವಿ ಮೆಟ್ರೋ ಪೊಲೀಸ್ ಲ್ಯಾಬ್ ಮೇಲೆ ವಂಚನೆ ಸಂಬಂಧಿಸಿದಂತೆ ಸಿಬ್ಬಂದಿಯೊಬ್ಬರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಕೆಲವು ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ಪಡೆಯಲು ದಾಖಲಾಗಿದ್ದ ರೋಗಿಗಳ ಮಾಹಿತಿಯನ್ನು ಕಲೆ ಹಾಕಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಹುಬ್ಬಳ್ಳಿಯ ಕೆಲವು ಖಾಸಗಿ ಡಯಾಗ್ನಸ್ಟಿಕ್ ಪ್ರಯೋಗಾಲಯಗಳ ಮೇಲೆ ದಾಳಿ ನಡೆಸಿದ್ದಾರೆ. ತನಿಖೆ ಮುಂದುವರಿದಿದೆ. ಕೊರೊನಾ ಕಾಲದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿ ಅತ್ಯಧಿಕ ಹಣ ಪಡೆಯಲಾಗಿದೆ. ಜೊತೆಗೆ ಆದಾಯಕ್ಕೆ ತಕ್ಕ ತೆರಿಗೆ ಕಟ್ಟದೇ ಐಟಿ ಇಲಾಖೆಗೆ ವಂಚನೆ ಮಾಡಿವೆ. ಸರ್ಕಾರಕ್ಕೆ ರೋಗಿಗಳ ಸುಳ್ಳು ಮಾಹಿತಿ ನೀಡಿ ಸರ್ಕಾರದಿಂದ ಕೆಲವು ಆಸ್ಪತ್ರೆಗಳು ಹೆಚ್ಚಿನ ಹಣ ಪಡೆದಿವೆ. ಈ ಎಲ್ಲ ಆಪಾದನೆ ಮೇರೆಗೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications