ವಿಧಾನಸೌಧದಿಂದ ವೈಟ್‌ಫೀಲ್ಡ್‌ವರೆಗೆ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ ಐಟಿ ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು, ಅಕ್ಟೋಬರ್ 19: ಐಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಗುರುವಾರ ವಿಧಾನಸೌಧದಿಂದ ವೈಟ್‌ಫೀಲ್ಡ್‌ವರೆಗೆ ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಇಂದು, ನನ್ನ ಕೆಲಸದ ಪ್ರಯಾಣಕ್ಕಾಗಿ ನಾನು ನೇರಳ ಮಾರ್ಗವನ್ನು ಆರಿಸಿಕೊಂಡಿದ್ದೇನೆ ಮತ್ತು ಅದು ಉತ್ತಮ ಸವಾರಿಯಾಗಿತ್ತು. ಇದು ವಿಧಾನಸೌಧದಿಂದ ವೈಟ್‌ಫೀಲ್ಡ್‌ಗೆ 30-40 ನಿಮಿಷಗಳ ಪ್ರಯಾಣಿಸಿದೆ. ಕಾರ್ಯಕ್ರಮ ಒಂದರಲ್ಲಿ ಒಂದು ಗಂಟೆ ಕಳೆದೆ ಹಾಗೂ ಕ್ಯಾಬಿನೆಟ್ ಮೀಟಿಂಗ್‌ಗಾಗಿ ಕಚೇರಿಗೆ ಹಿಂತಿರುಗಿದೆ ಎಂದು ತಿಳಿಸಿದ್ದಾರೆ.

ಮುಂದುವರೆದು ಮೆಟ್ರೋದಲ್ಲಿ ಒಂದೆರಡು ಅದ್ಭುತ ಸಂಭಾಷಣೆಗಳು ನಡೆದವು. ಕೆಆರ್ ಪುರಂನಿಂದ ವೈಟ್‌ಫೀಲ್ಡ್ ವಿಭಾಗವು ಕಳೆದ ವಾರ ಪ್ರಾರಂಭವಾದಾಗಿನಿಂದ ಮೆಟ್ರೋದಲ್ಲಿ 100% ಜನರ ಪ್ರಯಾಣ ಹೆಚ್ಚಳಕ್ಕೆ ಸಾಕ್ಷಿಯಾಗಿದೆ ಎಂಬುದು ಗಮನಿಸಬೇಕಾದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಸದಾ ಸಾಮಾಜಿಕ ಜಾಲತಾಣಗಳಲ್ಲೇ ಕಾಲಹರಣ ಮಾಡುವ ಸತ್ಯ ಸಂಶೋಧನಾ ಮಂತ್ರಿಗಳಾದ ಪ್ರಿಯಾಂಕ್ ಖರ್ಗೆ ಅವರು ಕಾಣೆಯಾಗಿದ್ದಾರೆ. ಕಾಂಗ್ರೆಸ್‌ನ ದುರಾಡಳಿತಕ್ಕೆ ಬೇಸತ್ತ ಗ್ರಾಮವಾಸಿಗರು ಗ್ರಾಮೀಣಾಭಿವೃದ್ಧಿ ಸಚಿವರ ಶೋಧನೆಯಲ್ಲಿ ತೊಡಗಿದ್ದು, ಇವರು ಸೇರಿಕೊಂಡಿರುವ ಜಾಗದ ಖಚಿತ ಮಾಹಿತಿಗಾಗಿ ಕಾದು ಕೂತಿದ್ದಾರೆ. ದಯವಿಟ್ಟು ಹುಡುಕಿಕೊಡಿ ಎಂದು ಬಿಜೆಪಿ ಟ್ವೀಟ್ ಮಾಡಿತ್ತು.
ಇದಕ್ಕೆ ತಿರುಗೇಟು ಕೊಟ್ಟಿದ್ದ ಸಚಿವ ಪ್ರಿಯಾಂಕ್ ಖರ್ಗೆ, ಚುನಾವಣೆಯಲ್ಲಿ ಹೀನಾಯವಾಗಿ ಸೋತು, ಜನರಿಂದ ತಿರಸ್ಕಾರಕ್ಕೆ ಒಳಗಾಗಿ, ದೆಹಲಿಯಲ್ಲಿ ಮರ್ಯಾದೆ ಸಿಗದೆ, ರಾಜ್ಯದಲ್ಲಿ ಅಧಿಕಾರದ ಕುರ್ಚಿ ಸಿಗದೆ ಬಿಜೆಪಿಗರು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಾಣೆಯಾಗಿರೋದು ಕಾಂಗ್ರೆಸ್ ನಾಯಕರಲ್ಲ. ಕಾಣೆಯಾಗಿರುವುದು ಬಿಜೆಪಿಗರ ಬೆನ್ನು ಮೂಳೆ ಎಂದು ಹೇಳಿದ್ದರು.
ಮುಂದುವರೆದು ರಾಜ್ಯಕ್ಕೆ ಕೇಂದ್ರದಿಂದ 540 ಕೋಟಿ ನರೇಗಾ ಬಾಕಿ ತರಲು ಬಿಜೆಪಿ ಸಂಸದರ ಕರ್ತವ್ಯ ಪ್ರಜ್ಞೆ ಕಾಣೆಯಾಗಿದೆ. ಚುನಾವಣೆ ಮುಗಿದು, ಸರ್ಕಾರ ರಚನೆಯಾಗಿ ಮೂರ್ನಾಲ್ಕು ತಿಂಗಳು ಕಳೆದರೂ ಇದುವರೆಗೂ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಒಬ್ಬ ನಾಯಕ ಬಿಜೆಪಿಗೆ ಸಿಗಲಿಲ್ಲ. ಪಕ್ಷದೊಳಗೆ ಆಂತರಿಕ ಕಲಹ ಮುಗಿಲು ಮುಟ್ಟಿದೆ, ಬಿಜೆಪಿಯ ರಾಜ್ಯಾಧ್ಯಕ್ಷ ಮಾತ್ರ ನಾಪತ್ತೆಯಾಗಿ ಹಲವು ತಿಂಗಳುಗಳೇ ಕಳೆದಿವೆ.
ರಾಜ್ಯದ ಬಿಜೆಪಿ ನಾಯಕರಿಗೆ ಸೌಜನ್ಯಕ್ಕೂ ಮೈತ್ರಿಗೆ ಅಭಿಪ್ರಾಯ ಪಡೆಯದ ಹೈಕಮಾಂಡ್ ಇಲ್ಲಿನ ನಾಯಕರನ್ನು ಕಾಲು ಒರೆಸುವ ಡೋರ್ ಮ್ಯಾಟ್ ಇಡುವ ಜಾಗದಲ್ಲಿಟ್ಟಿದ್ದಾರೆ, ಇಂತಹ ಹೀನಾಯ ಸ್ಥಿತಿಯಲ್ಲೂ ಬಿಜೆಪಿಗರ ಸ್ವಾಭಿಮಾನ ಕಾಣೆಯಾಗಿದೆ. ತಮ್ಮ ದೆಹೆಲಿ ಮಾಲೀಕರ ಎದುರು ನಿಂತು ಮಾತನಾಡುವ ಬಿಜೆಪಿಗರ ಧೈರ್ಯ ಕಾಣೆಯಾಗಿದೆ. ಕೊನೆಗೇ, ರೇಣುಕಾಚಾರ್ಯ, ಸದಾನಂದಗೌಡರು ಹೇಳಿದಂತೆ ಬಿಜೆಪಿಯಲ್ಲಿ ನಾಯಕತ್ವವೇ ಕಾಣೆಯಾಗಿದೆ ಎಂದು ಅವರು ವ್ಯಂಗ್ಯವಾಡಿದ್ದರು.
ಬಿಜೆಪಿ ನಾಯಕರಿಗೆ ಏನಾದರೂ ಸಮಸ್ಯೆ ಇದ್ದರೆ ನನ್ನ ಗೃಹ ಕಚೇರಿಗೆ ಬಂದು ಮನವಿ ಸಲ್ಲಿಸಬಹುದು. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಜನಪರ ಕಾಂಗ್ರೆಸ್ ಸರ್ಕಾರ ಖಂಡಿತ ಮಾಡಲಿದೆ. ಹಾಗೆಯೇ ಬಿಜೆಪಿಗರ ದೃಷ್ಟಿದೋಷಕ್ಕೆ ಚಿಕಿತ್ಸೆಯನ್ನೂ ಕೊಡಿಸುವ ವ್ಯವಸ್ಥೆಯನ್ನೂ ಮಾಡುತ್ತೇವೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದರು.












Click it and Unblock the Notifications