ಗೋಶಾಲೆ ಆರಂಭ ಪಂಚವಾರ್ಷಿಕ ಯೋಜನೆಯೇ- ಸರ್ಕಾರದ ವಿರುದ್ಧ ಹೈಕೋರ್ಟ್ ಕಿಡಿ
ಬೆಂಗಳೂರು, ಜೂ.7 ಗೋಶಾಲೆ ಆರಂಭಿಸುವುದು ಪಂಚವಾರ್ಷಿಕ ಯೋಜನೆಯೇ ಎಂದು ಹೈಕೋರ್ಟ್, ರಾಜ್ಯ ಸರ್ಕಾರದವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಗೋಶಾಲೆ ಆರಂಭಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.
ಆಗ ಸರ್ಕಾರದ ಧೋರಣೆಯನ್ನು ಖಾರವಾಗಿ ಪ್ರಶ್ನಿಸುವ ಮೂಲಕ ರಾಜ್ಯದಲ್ಲಿ ಗೋಶಾಲೆ ಆರಂಭಿಸಲು ವಿಳಂಬ ಮಾಡುತ್ತಿರುವ ಸರ್ಕಾರದ ವಿರುದ್ಧ ಕಿಡಿ ಕಾರಿತು.

ನ್ಯಾಯಪೀಠ, ರಾಜ್ಯದಲ್ಲಿ ಪ್ರತಿ ತಾಲೂಕಿನಲ್ಲಿ ಗೋಶಾಲೆ ಆರಂಭಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದ್ದು, ಆ ಕುರಿತು ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿತು.
ರಾಜ್ಯ ಸರ್ಕಾರಿ ವಕೀಲರು, ಬೆಂಗಳೂರು ಹೊರತುಪಡಿಸಿ ಉಳಿದ 29 ಕಡೆ ಜಿಲ್ಲೆಗಳಲ್ಲಿ ಗೋಶಾಲೆ ಆರಂಭಿಸಲಾಗುತ್ತಿದೆ. ಆ ಕುರಿತು ಈಗಾಗಲೇ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದ್ದು, ನೀರಿನ ಸೌಲಭ್ಯ ಕಲ್ಪಿಸಲು ಹಲವೆಡೆ ಕೊಳವೆಬಾವಿ ಕೊರೆಸಲಾಗಿದ್ದು, ಶೆಡ್ ಸಹ ನಿರ್ಮಾಣ ಮಾಡಲಾಗುತ್ತಿದೆ. ಜುಲೈ 15ರ ವೇಳೆಗೆ 5 ಗೋಶಾಲೆ ಕಾರ್ಯಾರಂಭ ಮಾಡಲಿವೆ. ಆಗಸ್ಟ್ 1ರ ವೇಳೆಗೆ ಮತ್ತೆ 10 ಗೋಶಾಲಾ ಆರಂಭವಾಗಲಿವೆ ಎಂದು ವಿವರಿಸಿದರು.
ಅದಕ್ಕೆ ಸಿಜೆ, ಹಾಗಾದರೆ ಇದು ಪಂಚ ವಾರ್ಷಿಕ ಯೋಜನೆಯೇ? ಎಂದು ಪ್ರಶ್ನಿಸಿದರು. ಅಲ್ಲದೆ, ಗೋಶಾಲೆಗಳನ್ನು ಆರಂಭಿಸಿ ಎಂದು ನ್ಯಾಯಾಲಯ ಆದೇಶ ಮಾಡಿದೆ, ಯಾವಾಗ ಗೋಶಾಲೆಗಳು ಕಾರ್ಯಾರಂಭ ಮಾಡಲಿವೆ ಎಂಬುದನ್ನು ತಿಳಿಸಿ, ಉಳಿದ ಕಂತೆ ಪುರಾಣ ಬೇಡ ಎಂದು ಹೇಳಿತು. ಅಲ್ಲದೆ, ಪ್ರತಿ ಜಿಲ್ಲೆಯಲ್ಲಿ ಒಂದು ಗೋಶಾಲಾ ಆರಂಭಿಸುತ್ತೀರಾ? ಹಾಗಾದರೆ ಎಷ್ಟು ಬಿಡಾಡಿ ದನಗಳು ಅಲ್ಲಿ ಆಶ್ರಯಪಡೆಯಲಿವೆ?
ಪ್ರತಿ ಗ್ರಾಮ ಮಟ್ಟದಲ್ಲಿ ಗೋಶಾಲೆ ಇರಬೇಕು. ಕನಿಷ್ಠ ಪಕ್ಷ ತಾಲ್ಲೂಕು ಮಟ್ಟದಲ್ಲಿ ಇರಬೇಕು ಎಂದು ಸಿಜೆ ಕೇಳಿದರು. ಈ ವೇಳೆ ಅರ್ಜಿದಾರ ಪರ ವಕೀಲರು, ಪ್ರತಿ ಜಿಲ್ಲೆಯಲ್ಲೂ ಗೋಶಾಲಾ ಆರಂಭಿಸಲಾಗುವುದು ಎಂಬುದಾಗಿ ಸರ್ಕಾರ ಹೇಳಿರುವುದಾಗಿ ನ್ಯಾಯಪೀಠದ ಗಮನಕ್ಕೆ ತಂದರು.












Click it and Unblock the Notifications