ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ಸಂಚಕಾರ!
ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಒಳಗಿನ ಬೆಳವಣಿಗೆಗಳು ಪಕ್ಷದ ಅಸ್ತಿತ್ವಕ್ಕೆ ಸಂಚಕಾರ ತರುವಂತಿವೆ. ವಿವಿಧ ಕಾರಣಗಳಿಗಾಗಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿ, ಪಕ್ಷ ತೊರೆಯುತ್ತಿದ್ದಾರೆ. ಅಂದಹಾಗೆ, ಕೊಡಗು ಜಿಲ್ಲಾ ಕಾಂಗ್ರೆಸ್ ನಲ್ಲಿ ಏನಾಗಿದೆ?
ಮಡಿಕೇರಿ, ಏಪ್ರಿಲ್ 1: ಒಂದು ಕಾಲದಲ್ಲಿ ಕೊಡಗಿನ ಭದ್ರಕೋಟೆಯಾಗಿ ಗ್ರಾಮ ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿವರೆಗೆ ಸ್ಥಳೀಯ ಆಡಳಿತದಲ್ಲಿ ಹಿಡಿತ ಸಾಧಿಸಿದ್ದ ಕಾಂಗ್ರೆಸ್ ಇವತ್ತು ಒಡೆದ ಮನೆಯಾಗಿದೆ.
ಭಿನ್ನಮತ, ಅಸಮಾಧಾನ ಎಲ್ಲವೂ ಕೊಡಗು ಜಿಲ್ಲಾ ಕಾಂಗ್ರೆಸ್ ಅನ್ನು ಅಧೋಗತಿಗೆ ಕೊಂಡೊಯ್ಯುವಂತೆ ಮಾಡಿದೆ. ತಳಮಟ್ಟದಿಂದ ಕಾಂಗ್ರೆಸ್ ನಲ್ಲಿ ದುಡಿಯುತ್ತಾ ಬಂದಿದ್ದ ಹಲವರನ್ನು ಕಡೆಗಣಿಸಿ ನಿನ್ನೆ ಮೊನ್ನೆ ಬಂದ ನಾಯಕರ ಓಲೈಕೆ, ರಾಜ್ಯಕೀಯ ನಾಯಕರ ತಪ್ಪು ನಿರ್ಧಾರಗಳು ಇದೀಗ ಜಿಲ್ಲಾ ಕಾಂಗ್ರೆಸ್ ಮೇಲೆ ಭಾರೀ ಪರಿಣಾಮ ಬೀರಿದೆ.[ರಾಷ್ಟ್ರಪತಿ ಹುದ್ದೆಗೆ ಭಾಗವತ್ ಬೆಂಬಲಿಸಿ ಮೋದಿಗೆ ಜಾಫರ್ ಷರೀಫ್ ಪತ್ರ]
ಸಾರ್ವತ್ರಿಕ ಚುನಾವಣೆಗೆ ಇನ್ನು ಒಂದು ವರ್ಷವಿರುವಾಗಲೇ ಅಸಮಾಧಾನದ ಹೊಗೆ ಭುಗಿಲೆದ್ದಿದೆ. ಪಕ್ಷಾಂತರ, ಉಚ್ಚಾಟನೆ, ಅಮಾನತು ಮುಂತಾದ ಪ್ರಕ್ರಿಯೆಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುವ ಲಕ್ಷಣಗಳು ಗೋಚರವಾಗುತ್ತಿವೆ.
ಭಿನ್ನಮತ ಮತ್ತು ಪದಾಧಿಕಾರಿಗಳ ಅಸಮಾಧಾನದ ಕಾರಣದಿಂದ ಇನ್ನೂ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲು ಕೆಪಿಸಿಸಿಗೆ ಸಾಧ್ಯವಾಗಿಲ್ಲ. ಕಳೆದೊಂದು ವರ್ಷದಿಂದ ಅಧ್ಯಕ್ಷರ ನೇಮಕವಾಗಿಲ್ಲ. ಈಗಾಗಲೇ ಇರುವ ಒಂದಷ್ಟು ನಾಯಕರು ತಮ್ಮದೇ ಸರಕಾರ ಆಡಳಿತದಲ್ಲಿದ್ದರೂ ಯಾವುದೇ ಅಧಿಕಾರವಿಲ್ಲದೆ ಹಲ್ಲು ಕಿತ್ತ ಹಾವಿನಂತಾಗಿದ್ದಾರೆ. ಅವರಿಂದ ಜಿಲ್ಲೆಗಾಗಲೀ ಪಕ್ಷಕ್ಕಾಗಲೀ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.[ಉಪಚುನಾವಣೆಯಲ್ಲಿ 'ಕೈ' ತಂತ್ರ ಸಫಲವಾಗುತ್ತಾ?]

ಎಲ್ಲರನ್ನೂ ಜೊತೆಗೆ ಕರೆದೊಯ್ಯುವ ನಾಯಕ ಬೇಕು
ಜಿಲ್ಲಾ ಮಟ್ಟದ ಕಾಂಗ್ರೆಸ್ ಸಮಿತಿ ಬಲಿಷ್ಠವಾಗಬೇಕಾದರೆ ಇಲ್ಲಿರುವ ಸಣ್ಣಪುಟ್ಟ ನಾಯಕರ ಶ್ರಮ ಅಗತ್ಯವಿದ್ದು, ಅವರೆಲ್ಲರನ್ನು ಒಂದೇ ಸೂರಿನಡಿ ಕರೆದೊಯ್ಯುವ ನಾಯಕನ ಅಗತ್ಯವಿದೆ. ಆದರೆ ಡಿಸಿಸಿಗೆ ಸಮರ್ಪಕವಾದ ಅಧ್ಯಕ್ಷನನ್ನು ನೇಮಕ ಮಾಡದೆ ನಿಗಮ ಮಂಡಳಿ ಅಧ್ಯಕ್ಷರಾಗಿರುವ ಟಿ.ಪಿ.ರಮೇಶ್ ಅವರನ್ನೇ ಪ್ರಭಾರ ಅಧ್ಯಕ್ಷರಾಗಿ ಮುಂದುವರೆಸಲಾಗಿದೆ.

ಮೂಲ ಕಾಂಗ್ರೆಸ್ಸಿಗರ ಕಡೆಗಣನೆ
ಇಷ್ಟಕ್ಕೂ ಟಿ.ಪಿ.ರಮೇಶ್ ಮೂಲ ಕಾಂಗ್ರೆಸ್ಸಿಗರಲ್ಲ. ಜನತಾದಳದಿಂದ ಬಂದವರು. ಸಿದ್ದರಾಮಯ್ಯ ಅವರ ಬೆಂಬಲಿಗರು ಎಂದರೂ ತಪ್ಪಾಗಲಾರದು. ನಿನ್ನೆ ಮೊನ್ನೆ ಬಂದ ಇವರಿಗೆ ಒಂದಷ್ಟು ಅಧಿಕಾರ ನೀಡಲಾಗಿದೆ. ಆದರೆ ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದ ಕೆಲವು ನಾಯಕರನ್ನು ಕಡೆಗಣಿಸುತ್ತಲೇ ಬರಲಾಗುತ್ತಿದೆ. ಇದು ಕೂಡ ಅಸಮಾಧಾನಕ್ಕೆ ಕಾರಣವಾಗಿದೆ.

ಕೊಡವ ವರ್ಸಸ್ ಕೊಡವೇತರರು
ಈ ನಡುವೆ ಕೊಡವ ಮತ್ತು ಕೊಡವೇತರರು ಎಂಬ ಭಿನ್ನಮತವೂ ಸೃಷ್ಟಿಯಾಗಿದ್ದು, ಇದು ಕೂಡ ಜಿಲ್ಲಾ ಕಾಂಗ್ರೆಸ್ ದುರ್ಬಲಗೊಳ್ಳಲು ಕಾರಣವಾಗಿದೆ. ಒಂದು ಹಂತದಲ್ಲಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಪ್ರಭಾವಿ ನಾಯಕರ ಕೊರತೆ ಎದುರಾಗಿದೆ. ಹೀಗಿರುವಾಗಲೇ ಇರುವ ಪದಾಧಿಕಾರಿಗಳ ಅಮಾನತು, ಉಚ್ಚಾಟನೆ ಮಾಡುತ್ತಿದ್ದರೆ, ಮತ್ತೊಂದೆಡೆ ನಾಯಕರು ತಾವೇ ರಾಜೀನಾಮೆ ನೀಡುತ್ತಿದ್ದಾರೆ.

ಎಸ್.ಎಂ.ಕೃಷ್ಣ ರಾಜೀನಾಮೆ ಎಫೆಕ್ಟ್
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರಾಜೀನಾಮೆ ನೀಡುತ್ತಿದ್ದಂತೆಯೇ ಅದರ ಎಫೆಕ್ಟ್ ಜಿಲ್ಲಾ ಕಾಂಗ್ರೆಸ್ ಮೇಲಾಗಿದೆ. ಜಿಲ್ಲಾ ವಕ್ತಾರರಾಗಿದ್ದ ಮಂಜುನಾಥ್ ಕುಮಾರ್ ರಾಜೀನಾಮೆ ನೀಡಿದ್ದರೆ, ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷರಾಗಿದ್ದ ಕೆ.ಎಂ.ಲೋಕೇಶ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಇನ್ನು ಮಡಿಕೇರಿ ನಗರಸಭೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ಎಂಬ ಮಹಿಳಾ ಸದಸ್ಯರನ್ನು ಪಕ್ಷದಿಂದ ಉಚ್ಚಾಟಿಸಿ, ಅವರ ಮೇಲೆ ಪಕ್ಷ ವಿರೋಧಿ ಆರೋಪದಡಿ ಮೊಕದ್ದಮೆ ದಾಖಲಿಸಿ, ನಗರಸಭಾ ಸದಸ್ಯತ್ವ ಸ್ಥಾನದಿಂದಲೇ ವಜಾಗೊಳಿಸಲಾಗಿದೆ.

ಅಸಮಾಧಾನದಿಂದ ಮೌನ
ಈ ಎಲ್ಲದರ ಮಧ್ಯೆ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು, ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದ ಹಿರಿಯ ನಾಯಕರಾದ ವಿ.ಪಿ.ಸುರೇಶ್ ಅವರು ಮುಡಾ ಅಧ್ಯಕ್ಷ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡಿದ್ದು, ಸದ್ಯ ಮೌನಕ್ಕೆ ಶರಣಾಗಿದ್ದಾರೆ.

ರಾಜೀನಾಮೆ ಪರ್ವ
ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿರುವ, ನಗರಸಭೆ ಸದಸ್ಯರೂ ಆದ ಲೀಲಾ ಶೇಷಮ್ಮ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾಪೋಕ್ಲು ಕಕ್ಕಬೆ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಡಕಡ ಸುರೇಶ್ ಬೆಳ್ಯಪ್ಪ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೆಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಕೊಡಗಿನಲ್ಲಿ ಕಾಂಗ್ರೆಸ್ ನೆಲಕಚ್ಚುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿವೆ.












Click it and Unblock the Notifications