ಕಾಣದ ಬಹುಮತ : ರಾಜೀನಾಮೆಗೆ ಯಡಿಯೂರಪ್ಪ ಸಿದ್ಧತೆ?
ಬೆಂಗಳೂರು, ಮೇ 19 : ಏನೇ ಪ್ರಯತ್ನಗಳನ್ನು ಮಾಡಿದರೂ ಬಹುಮತಕ್ಕೆ ಬೇಕಾಗಿರುವ ಸಂಖ್ಯೆ (112) ಒಗ್ಗೂಡಿಸಲು ಸಾಧ್ಯವಾಗದ ಕಾರಣ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರಾ? ಇಂಥದೊಂದು ಆಘಾತಕಾರಿ ಸುದ್ದಿ ಹರಿದಾಡುತ್ತಿದೆ.
ಬಿಜೆಪಿ ಆಪ್ತ ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯೇನೆಂದರೆ, ಇಲ್ಲಸಲ್ಲದ 'ಕುದುರೆ ವ್ಯಾಪಾರ'ದ ಆರೋಪಗಳನ್ನು ಎದುರಿಸುವ ಬದಲು, ಮರ್ಯಾದೆಯಿಂದ ರಾಜೀನಾಮೆ ನೀಡಿ ವಾಜಪೇಯಿಯವರು ಹಾಕಿಕೊಡ್ಡ ಸಂಪ್ರದಾಯವನ್ನು ಪಾಲಿಸುವುದು ಉತ್ತಮ ಎಂಬ ಸಂದೇಶ ಯಡಿಯೂರಪ್ಪನವರಿಗೆ ರವಾನಿಸಲಾಗಿದೆ.
ಮೌನಕ್ಕೆ ಶರಣಾಗಿರುವ ಯಡಿಯೂರಪ್ಪನವರ ಮುಖವೇ ಹಲವಾರು ಕಥೆಗಳನ್ನು ಹೇಳುತ್ತಿದೆ. ಆದರೆ, ಮತ್ತೊಂದು ಬದಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಸದನದಲ್ಲಿ ವಿಜಯೋತ್ಸಾಹದ ಮೂಡ್ ನಲ್ಲಿ ಇದ್ದಾರೆ. ಶಾಸಕರು ಪ್ರಮಾಣ ವಚನ ಸ್ವೀಕರಿಸುತ್ತಿದ್ದ ಸಮಯದಲ್ಲಿಯೇ ಯಡಿಯೂರಪ್ಪನವರು ಸದನದಿಂದ ಹೊರನಡೆದಿದ್ದಾರೆ.

ರಾಜ್ಯದ ಸಮಸ್ತ ರೈತರ ಪ್ರತಿನಿಧಿಯಾಗಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತ ಪಡೆಯಲು ಆಗಲಿಲ್ಲ. ರಾಜ್ಯದ ಮತದಾರರು ಉಳಿದೆರಡು ಪಕ್ಷಗಳನ್ನು ತಿರಸ್ಕರಿಸಿದರೂ, ಕಾಂಗ್ರೆಸ್ ಮತ್ತು ಜೆಡಿಎಸ್ ಮಾಡಿಕೊಂಡಿರುವ ಮೈತ್ರಿಯಿಂದಾಗಿ ಸರಕಾರ ರಚಿಸಲು ಸಾಧ್ಯವಾಗಲಿಲ್ಲ ಎಂಬ ದುಃಖ ಯಡಿಯೂರಪ್ಪನವರ ಮುಖದಲ್ಲಿ ಮಡುಗಟ್ಟಿದೆ.
ಬಿಜೆಪಿ 104, ಕಾಂಗ್ರೆಸ್ 78 ಮತ್ತು ಜೆಡಿಎಸ್ 37 ಸ್ಥಾನಗಳನ್ನು ಗೆದ್ದಿದ್ದರೆ, ಎರಡು ಪಕ್ಷೇತರರ ಪಾಲಾಗಿವೆ. ಜಯನಗರ ಮತ್ತು ರಾಜರಾಜೇಶ್ವರಿ ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದ್ದರೆ, ಕುಮಾರಸ್ವಾಮಿಯವರು ಎರಡು ಕ್ಷೇತ್ರಗಳಿಂದಲೂ ಗೆದ್ದಿದ್ದರಿಂದ ಒಂದಕ್ಕೆ ಮತ್ತೆ ಚುನಾವಣೆ ನಡೆಯಬೇಕು.
1996ರಲ್ಲಿ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಬಹುಮತಕ್ಕೆ ಬೇಕಾಗಿದ್ದ 272 ಸ್ಥಾನಗಳನ್ನು ಕ್ರೋಢೀಕರಿಸಲು ವಿಫಲವಾಗಿದ್ದರಿಂದ, ಅದ್ಭುತವಾದ ಭಾಷಣವೊಂದನ್ನು ಮಾಡಿ 13 ದಿನಗಳ ಆಡಳಿತವನ್ನು ಕೊನೆಗೊಳಿಸಿದ್ದರು. ಯಾವುದೇ ಕುದುರೆ ವ್ಯಾಪಾರಕ್ಕೆ ಅವಕಾಶ ನೀಡದೆ, ರಾಜೀನಾಮೆ ನೀಡಿ ಸಂಸತ್ತಿಗೆ ಗೌರವ ತಂದಿದ್ದರು. ಆಗ, ಬಿಜೆಪಿ 161 ಸ್ಥಾತ ಗಳಿಸಿದ್ದರೆ, ಕಾಂಗ್ರೆಸ್ 140 ಸ್ಥಾನ ಗಳಿಸಿತ್ತು.
ಯಡಿಯೂರಪ್ಪನವರು ಕೂಡ ಇದೇ ಬಗೆಯಲ್ಲಿ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕೇವಲ ಎರಡು ದಿನಗಳ ಮುಖ್ಯಮಂತ್ರಿಯಾಗಿರುವ ಅವರು, ರಾಜೀನಾಮೆ ನೀಡಿ ಇತಿಹಾಸದ ಪುಟಗಳನ್ನು ಸೇರಲು ಸಿದ್ಧರಾಗಿದ್ದಾರೆ. ಇದಕ್ಕೂ ಮೊದಲು 13 ಪುಟಗಳ ಭಾವನಾತ್ಮಕ ಭಾಷಣ ಮಾಡಲಿದ್ದಾರೆ ಎಂದು ಕೂಡ ತಿಳಿದುಬಂದಿದೆ.
ಕರ್ನಾಟಕದ ಅಧಿಕಾರದ ಚುಕ್ಕಾಣಿಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಗೆ ಬಿಡಲು ಕಷ್ಟಕರ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಇದು ನಿಜವೇ ಆದರೆ, ಯಡಿಯೂರಪ್ಪನವರು ಸಂಜೆ 4 ಗಂಟೆಗೆ ಬಹುಮತ ಸಾಬೀತುಪಡಿಸುವ ಮೊದಲೇ ರಾಜೀನಾಮೆ ಸಲ್ಲಿಸಲಿದ್ದಾರೆ. ಹೀಗಾದರೆ, ಎಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವುದು ಖಚಿತ.
ಇದರ ಸುಳಿವನ್ನು ಸಿಟಿ ರವಿಯವರು '1996ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಬಹುಮತ ಸಾಬೀತಾಗದಿದ್ದಾಗ ರಾಜಿನಾಮೆ ಕೊಟ್ಟು ಹೊರ ಹೊಗಿದ್ದರು, ಅದು ರಾಜಮಾರ್ಗ, ನಾವು ಆ ಮಾರ್ಗದಲ್ಲೇ ನಡೆಯುತ್ತೇವೆ' ಎಂದು ನಿನ್ನೆಯೇ ನೀಡಿದ್ದರು.
ಇಂದು ಸಂಜೆ 5 ಗಂಟೆಗೆ ವಿಜಯೋತ್ಸವಕ್ಕೆ ಸಿದ್ಧರಾಗಿರಿ ಎಂದು ಯಡಿಯೂರಪ್ಪನವರು ತಮ್ಮ ಪಕ್ಷದ ಕಾರ್ಯಕರ್ತರಿಗೆ, ನಾಯಕರಿಗೆ, ತಮ್ಮನ್ನು ಬೆಂಬಲಿಸಿರುವ ಜನರಿಗೆ ಶುಕ್ರವಾರವೇ ಕರೆ ನೀಡಿದ್ದರು. ಆದರೆ, ಇದು ಅಸಾಧ್ಯವಾಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಜನಾದೇಶ ಪಡೆಯದ ಪಕ್ಷದ ನಾಯಕರೊಬ್ಬರು ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ.
ಖ್ಯಾತ ಸಂಖ್ಯಾಶಾಸ್ತ್ರಜ್ಞರೊಬ್ಬರು ಇದನ್ನು ಮೊದಲೇ ಊಹಿಸಿದ್ದರು. ಯಡಿಯೂರಪ್ಪನವರು ತಪ್ಪು ದಿನ ಮತ್ತು ಮುಹೂರ್ತದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರಿಂದ ಅವರಿಗೆ ತುಂಬಾ ಕಷ್ಟವಿದೆ. ಅವರು ತೀವ್ರವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ ಎಂದು ಕೂಡ ತಿಳಿಸಿದ್ದರು. ಒಂದು ವೇಳೆ ವಿಶ್ವಾಸಮತದಲ್ಲಿ ಗೆದ್ದರೂ ಕೂಡ ಮುಂದೆ ಗಂಭೀರ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ ಎಂದಿದ್ದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications