Get Updates
Get notified of breaking news, exclusive insights, and must-see stories!

ಬಜರಂಗದಳದಿಂದ ಅಂತರ ಕಾಯ್ದುಕೊಂಡಿದ್ದ ಬಿಜೆಪಿಗೀಗ ಬಜರಂಗಿಯೇ ಆಸರೆ: ಇದು ಕೇಸರಿ ಪಾಳಯದ ವಿರೋಧಾಭಾಸ

ಬೆಂಗಳೂರು, ಮೇ 03: ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಬಜರಂಗದಳ ಹಾಗೂ ಪಿಎಫ್‌ಐನಂತಹ ಸಂಘಟನೆಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಇದು ಬಿಜೆಪಿ ಹಾಗೂ ಸಂಘ ಪರಿವಾರದ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಬಜರಂಗದಳದಿಂದ ಬಿಜೆಪಿ ಕೆಲ ವರ್ಷಗಳಿಂದಲೂ ಅಂತರ ಕಾಯ್ದುಕೊಂಡಿದೆ. ಆದರೆ, ಈಗ ಮತ್ತೆ 'ನಾನು ಬಜರಂಗಿ' ಎಂಬ ಬಿಜೆಪಿ ನಾಯಕರ ಅಭಿಯಾನ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

ಬಜರಂಗದಳದ ಮಾತೃ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್‌ ಬಿಜೆಪಿ ವಿರುದ್ಧ ಹರಿಹಾಯುತ್ತಲೇ ಬಂದಿದೆ. ರಾಮಮಂದಿರ ವಿಚಾರವಾಗಿ ಬಿಜೆಪಿ ಹಾಗೂ ವಿಎಚ್‌ಪಿ ಸಂಘಟನೆಗಳ ನಡುವೆ ವೈಮನಸ್ಸು ಉಂಟಾಗಿತ್ತು. ರಾಮಮಂದಿರದ ಕ್ರೆಡಿಟ್‌ ತೆಗೆದುಕೊಳ್ಳಲು ಎರಡೂ ಸಂಘಟನೆಗಳು ನಡುವೆ ಸಂಘರ್ಷ ಏರ್ಪಟ್ಟಿತ್ತು.

Is BJP Leveraging Bajrang Dal Controversy for Election Benefits?

ಅದ್ವಾನಿ ಅವರ ರಥಯಾತ್ರೆಯ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳಗಳು ಮಹತ್ವದ ಪಾತ್ರವಹಿಸಿದ್ದು ಈಗ ಇತಿಹಾಸ. ಆದರೆ, ಪ್ರಧಾನಿ ಮೋದಿ ಅವರು ಬಿಜೆಪಿಯಲ್ಲಿ ಪ್ರಬಲವಾಗುತ್ತ ಬಂದ ನಂತರ ವಿಎಚ್‌ಪಿ ಹಾಗೂ ಬಜರಂಗದಳಗಳನ್ನು ಬಿಜೆಪಿಯಿಂದ ದೂರ ಮಾಡಲಾಯಿತು. ಇದರಿಂದ ಆಕ್ರೋಶಗೊಂಡ ವಿಎಚ್‌ಪಿ ಬಿಜೆಪಿ ವಿರುದ್ಧ ನಿಂತಿತು.

ಪ್ರವೀಣ್‌ಬಾಯಿ ತೊಗಾಡಿಯಾ vs ನರೇಂದ್ರಬಾಯಿ ಮೋದಿ

1980ರ ದಶಕದಿಂದಲೂ ಗುಜರಾತ್‌ನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ವಿಎಚ್‌ಪಿ ನಾಯಕ ಪ್ರವೀಣ್‌ಬಾಯಿ ತೊಗಾಡಿಯಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಶ್ರಮಿಸುತ್ತಲೇ ಬಂದರು. ಉಭಯ ನಾಯಕರು ನಿಕಟ ಹೊಂದಾಣಿಕೆಯಿಂದ ಕೆಲಸ ಮಾಡಿದ್ದರು. ಕಾಲಾನಂತರದಲ್ಲಿ, ಈ ಇಬ್ಬರೂ ನಾಯಕರು ದೂರವಾಗಿರುವುದು ಈಗ ಇತಿಹಾಸ

Narendra Modi

ಇಬ್ಬರ ನಡುವಿನ ಸಂಘರ್ಷ ಉಭಯ ನಾಯಕರ ಅಧಿಕಾರ ದಾಹ ಪರಿಣಾಮ ಎಂಬುದನ್ನು ರಾಜಕೀಯ ತಜ್ಞರು ಹೇಳುತ್ತಾರೆ. ಪ್ರಧಾನಿ ಮೋದಿ ಅವರು ಭಾರತ ರಾಜಕಾರಣದಲ್ಲಿ ಮುನ್ನೆಡೆಯುತ್ತಲೇ ಸಾಗಿದರು. ಆದರೆ, ಪ್ರವೀಣ್‌ ತೊಗಾಡಿಯಾ ಅವರ ಬೆಳವಣಿಗೆ ನಿಂತಲ್ಲೇ ನಿಂತುಹೋಯಿತು ಎಂಬ ಅಭಿಪ್ರಾಯವನ್ನು ಪರಿಣತರು ವ್ಯಕ್ತಪಡಿಸಿದ್ದಾರೆ. 2002 ಗುಜರಾತ್‌ ಗಲಭೆಯ ನಂತರ ತೊಗಾಡಿಯಾ ಅವರು 'ಹಿಂದು ಹೃದಯ ಸಾಮ್ರಾಟ'ನೆಂಬ ಹೆಗ್ಗಳಿಕೆಯಿಂದ ದೂರವಾದರು. ಆದರೆ, ಅಂದಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಹಿಂದುತ್ವದ ರಾಯಭಾರಿಯಾಗಿ ಮುನ್ನೆಲೆಗೆ ಬಂದರು.

1980ರ ದಶಕದ ಅಂತ್ಯದಲ್ಲಿ ವಿಎಚ್‌ಪಿ ನಡೆಸಿದ 'ಶಿಲಾ ಯಾತ್ರೆ'ಯ ಸಂದರ್ಭದಲ್ಲಿ ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಆರಂಭವಾದವು ಎಂದು ರಾಜಕೀಯ ಚರಿತ್ರಕಾರರು ಹೇಳುತ್ತಾರೆ. ಗುಜರಾತಿನಲ್ಲಿ ಕೇಶುಭಾಯಿ ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ತೊಗಾಡಿಯಾ ಅವರು ಮಹತ್ವ ತೀರ್ಮಾಣಗಳನ್ನು ತೆಗೆದುಕೊಳ್ಳುವ ಕಮೀಟಿಯಲ್ಲಿದ್ದರು. ನರೇಂದ್ರ ಮೋದಿ ಅವರ ಇಮೇಜ್‌ ಅನ್ನು ನಿರ್ಮಿಸುವಲ್ಲಿ ತೊಗಾಡಿಯಾ ಪ್ರಮುಖ ಪಾತ್ರ ವಹಿಸಿದ್ದರೆಂದು ಹೇಳಲಾಗುತ್ತದೆ.

Praveen Togadia

2001 ರಲ್ಲಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆದ ಬಳಿಕ ತೊಗಾಡಿಯರನ್ನು ದೂರವಿಟ್ಟರು ಎಂಬ ಆರೋಪಗಳು ಕೇಳಿಬಂದಿವೆ. ಸರ್ಕಾರದ ಮಟ್ಟದಲ್ಲಿ ತೊಗಾಡಿಯಾ ಅವರ ಹಸ್ತಕ್ಷೇಪ ಮೋದಿಗೆ ಇಷ್ಟವಾಗಲಿಲ್ಲ ಎಂದೂ ಹೇಳಲಾಗುತ್ತದೆ. 2002ರ ವಿಧಾನಸಭಾ ಚುನಾವಣೆಯಲ್ಲಿ ಕೊನೆಯ ಬಾರಿಗೆ ಬಿಜೆಪಿ ಪರ ತೊಗಾಡಿಯಾ ಪ್ರಚಾರ ಮಾಡಿರುವುದನ್ನು ನೆನಪಿಸಿಕೊಳ್ಳಬಹುದು.

ಪ್ರಮೋದ್‌ ಮುತಾಲಿಕ್‌ vs ರಾಜ್ಯ ಬಿಜೆಪಿ

ಬಜರಂಗದಳದ ಮಾಜಿ ನಾಯಕ ಪ್ರಮೋದ್‌ ಮುತಾಲಿಕ್‌ ಅವರಿಗೂ ಬಿಜೆಪಿ ಅನ್ಯಾಯ ಮಾಡಿದೆ ಎಂಬ ಆರೋಪಗಳು ಕೇಳಿಬಂದಿವೆ. ಪ್ರಮೋದ್‌ ಮುತಾಲಿಕ್‌ ಅವರನ್ನು ಬಿಜೆಪಿಗೆ ಸೇರಿಸಿಕೊಂಡ ದಿನವೇ ಅವರನ್ನು ಬಿಜೆಪಿಯಿಂದ ಹೊರತಳ್ಳಿದಕ್ಕೆ ಕಟ್ಟರ್‌ ಹಿಂದುವಾದಿಗಳಲ್ಲಿ ಆಕ್ರೋಶವಿದೆ. ಪ್ರಮೋದ್‌ ಮುತಾಲಿಕ್‌ ಅವರೂ ಸಹ ಬಿಜೆಪಿ ವಿರುದ್ಧ ವ್ಯಾಪಕವಾಗಿ ಟೀಕೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಪ್ರಮೋದ್‌ ಮುತಾಲಿಕ್‌ ಅವರು ಸದ್ಯ ಕಾರ್ಕಳದಲ್ಲಿ ಬಿಜೆಪಿ ವಿರುದ್ಧ ತೊಡೆತಟ್ಟಿದ್ದಾರೆ.

Pramod mutalik

ಕಾರ್ಕಳ ವಿಧಾನಸಭೆ ಕ್ಷೇತ್ರದಲ್ಲಿ ಸಚಿವ ಸುನೀಲ್‌ ಕುಮಾರ್ ವಿರುದ್ಧ ಕಣಕ್ಕಿಳಿದಿದ್ದಾರೆ. ಈ ಹಿಂದೆ ಧಾರವಾಡ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಿರುದ್ಧ ಕಣಕ್ಕಿಳಿದು ಪ್ರಮೋದ್‌ ಮುತಾಲಿಕ್‌ ಪರಾಭವಗೊಂಡಿದ್ದರು. ಬಿಜೆಪಿ ಸರ್ಕಾರವು ದ್ವಂದ್ವ ನೀತಿಗಳನ್ನು ಅನುಸರಿಸುತ್ತಿದೆ ಎಂದು ಮುತಾಲಿಕ್‌ ಹೇಳುತ್ತಲೇ ಬಂದಿದ್ದಾರೆ.

ಬಾಬು ಬಜರಂಗಿ vs ಗುಜರಾತ್‌ ಬಿಜೆಪಿ

ಗುಜರಾತ್‌ ಕೋಮುಗಲಭೆಯಲ್ಲಿ ಪ್ರಮುಖ ಆರೋಪಿಯಾಗಿದ್ದ ಬಾಬು ಬಜರಂಗಿಯನ್ನು ಬಿಜೆಪಿ ಜೈಲಿನಿಂದ ಹೊರಬರುವಂತೆ ಮಾಡಲಿಲ್ಲ ಎಂಬ ಆಕ್ರೋಶವೂ ಬಜರಂಗದಳದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿದೆ. 97 ಜನರ ಸಾವಿಗೆ ಕಾರಣವಾದ ನರೋಡಾ ಪಾಟಿಯಾ ಹತ್ಯಾಕಾಂಡದ ಮಾಸ್ಟರ್‌ಮೈಂಡ್‌ ಬಾಬು ಬಜರಂಗಿ ಎಂದು ಕೋರ್ಟ್‌ ತೀರ್ಪು ನೀಡಿದೆ.

ಈ ಹಿನ್ನೆಲೆಯಲ್ಲಿ ಬಾಬು ಬಜರಂಗಿಗೆ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಮಾರ್ಚ್ 2019 ರಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಭಾರತದ ಸರ್ವೋಚ್ಚ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತು. ಆದರೆ, ಬಾಬು ಬಜರಂಗಿಯನ್ನು ಸುಮಾರು 17 ವರ್ಷಗಳ ಕಾಲ ಜೈಲಿನಲ್ಲಿ ಇರಿಸಲಾಯಿತು. ಇದು ಬಜರಂಗದಳದ ಕೋಪಕ್ಕೆ ಕಾರಣವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಜರಂಗದಳ ಹಾಗೂ ಬಿಜೆಪಿ ನಡುವೆ ಹಲವು ವರ್ಷಗಳಿಂದ ಸಂಘರ್ಷಗಳಿವೆ. ಇದು ಬಹಿರಂಗವಾಗಿಯೂ ಕಾಣಿಸಿಕೊಂಡಿದೆ. ಆದರೆ, ಕಾಂಗ್ರೆಸ್‌ ಪ್ರಣಾಳಿಕೆ ಅಂಶವು ಬಿಜೆಪಿಗೆ ಹೊಸ ಅಸ್ತ್ರವಾಗಿ ಮಾರ್ಪಟ್ಟಿದೆ. ಹಲವು ವರ್ಷಗಳಿಂದ ಬಜರಂಗದಳದಿಂದ ದೂರವೇ ಉಳಿದಿದ್ದ ಬಿಜೆಪಿ ಈಗ ಬಜರಂಗಿ ಮೊರೆ ಹೋಗಿದೆ. 'ನಾನು ಬಜರಂಗಿ' ಎಂಬ ಅಭಿಯಾನವನ್ನು ಬಿಜೆಪಿ ನಾಯಕರು ಆರಂಭಿಸಿದ್ದಾರೆ. ಇದರಲ್ಲಿ ಬಿಜೆಪಿಯ ದ್ವಂದ್ವ ನಿಲುವು ಹಾಗೂ ವಿರೋಧಾಭಾಸ ಎದ್ದು ಕಾಣುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+