ಕಾಂಗ್ರೆಸ್ ಸರ್ಕಾರಕ್ಕೆ ಉತ್ತರ ಕರ್ನಾಟಕದ ಮೇಲೆ ಏಕೆ ತಾತ್ಸಾರ?

ಬೆಂಗಳೂರು, ಜೂನ್ 29: ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಉತ್ತರ ಕರ್ನಾಟಕದ ಮೇಲೆ ಯಾಕಿಷ್ಟು ತಾತ್ಸಾರ?. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಏಕೀ ದ್ವಂದ್ವ ನಿಲುವು?. ಉತ್ತರ ಕರ್ನಾಟಕಕ್ಕೆ ನಿಮ್ಮ ಮಲತಾಯಿ ಧೋರಣೆ ಏಕೆ?, ಉತ್ತರ ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಲಾಗಿದೆ.

ವಿರೋಧ ಪಕ್ಷದ ಉಪನಾಯಕ, ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಈ ಕುರಿತು ಪೋಸ್ಟ್ ಹಾಕಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಉತ್ತರ ಕರ್ನಾಟಕದ ಮೇಲೆ ಯಾಕಿಷ್ಟು ತಾತ್ಸಾರ? ಎಂದು ಪ್ರಶ್ನಿಸಿದ್ದಾರೆ.

ನಮ್ಮ ಬಿಜೆಪಿ ಸರ್ಕಾರ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಭಾರತೀಯ ಮೀಸಲು ಪಡೆಯನ್ನು ಉತ್ತರ ಕರ್ನಾಟಕದ ಬೇಲೂರಿನಲ್ಲಿ ಮತ್ತು ದಕ್ಷಿಣ ಕರ್ನಾಟಕದ ದೇವನಹಳ್ಳಿಯಲ್ಲಿ ಎಂದು 2 ಘಟಕಗಳನ್ನು ನಿಗದಿ ಮಾಡಿತ್ತು. ಹಾಗಾಗಿ ಧಾರವಾಡದ ಬೇಲೂರಿನಲ್ಲಿ ಹೊಸದಾಗಿ ಘಟಕ ಸ್ಥಾಪಿಸಲು 52.04 ಎಕರೆ ಪ್ರದೇಶವನ್ನು ಮಂಜೂರು ಮಾಡಿ, ಸ್ಥಳ ನಿಗದಿಯೂ ಮಾಡಲಾಗಿತ್ತು.

IRB Unit Shifting From North Karnataka Dharwad Letter To CM Siddaramaiah

ಆದರೆ ಎರಡು ಘಟಕಗಳನ್ನೂ ದಕ್ಷಿಣ ಕರ್ನಾಟಕದಲ್ಲಿಯೇ ಸ್ಥಾಪಿಸಿರುವುದು ಉತ್ತರ ಕರ್ನಾಟಕಕ್ಕೆ ಮಾಡುತ್ತಿರುವ ದ್ರೋಹವಾಗಿದೆ. ಧಾರವಾಡದಲ್ಲಿ ಐಆರ್‌ಬಿ ಘಟಕ ಸ್ಥಾಪಿಸುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವುದರಿಂದ ಹಿಡಿದು, ಉತ್ತರ ಕರ್ನಾಟಕದ ಭಾಗದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಿಸಲು ಸಹಕಾರಿಯಾಗಲಿದೆ ಎಂದು ಅರವಿಂದ ಬೆಲ್ಲದ ಹೇಳಿದ್ದಾರೆ.

ಉತ್ತರ ಕರ್ನಾಟಕದ ನಮ್ಮ ಹಕ್ಕಿಗಾಗಿ ಸಚಿವರಾದ ಸಂತೋಷ್ ಲಾಡ್, ವಿನಯ್ ಕುಲಕರ್ಣಿ, ಪ್ರಸಾದ್ ಅಬ್ಬಯ್ಯ ಅವರು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಬಂಗಾರಪೇಟೆಯಲ್ಲಿ ಸ್ಥಾಪಿಸಲು ಹೊರಟ ಐಆರ್‌ಬಿ ಘಟಕವನ್ನು ರದ್ದುಗೊಳಿಸಿ, ಉತ್ತರಕ ರ್ನಾಟಕಕ್ಕೆ ನ್ಯಾಯ ಒದಗಿಸಬೇಕು ಎಂದು ಅರವಿಂದ ಬೆಲ್ಲದ ಆಗ್ರಹಿಸಿದ್ದಾರೆ.

ಪತ್ರದಲ್ಲಿ ವಿವರಣೆ: ಅರವಿಂದ ಬೆಲ್ಲದ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ 27/6/2024ರಂದು ಬರೆದಿರುವ ಪತ್ರವನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಪತ್ರ ಧಾರವಾಡ ತಾಲ್ಲೂಕು ಬೇಲೂರು ಗ್ರಾಮದಲ್ಲಿ ಸೃಜಿಸಲು ಉದ್ದೇಶಿಸಿರುವ ಭಾರತ ಮೀಸಲು ಪಡೆ (ಐಆರ್‌ಬಿ) ಘಟಕದ ಪ್ರಸ್ತಾವನೆಯನ್ನು ಕೈಬಿಟ್ಟು ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಘಟಕವನ್ನು ಸ್ಥಾಪಿಸುತ್ತಿರುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಧಾರವಾಡ ತಾಲ್ಲೂಕು ಬೇಲೂರು ಗ್ರಾಮದಲ್ಲಿ ಭಾರತ ಮೀಸಲು ಪಡೆ (ಐಆರ್‌ಬಿ) ಯನ್ನು ಹೊಸದಾಗಿ ಸೃಜಿಸಲು ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ 52.04 ಎಕರೆ ಜಮೀನು ಸಹ ಮಂಜೂರಾಗಿದ್ದು, ಸದರಿ ಜಮೀನನ್ನು ಈಗಾಗಲೇ ಕಮಾಂಡೆಂಟ್, 2ನೇ ಪಡೆ, ಕೆಎಸ್‌ಆರ್‌ಪಿ ಘಟಕದ ಅಧೀನದಲ್ಲಿದ್ದು, ಹೊಸದಾಗಿ ಐಆರ್‌ಬಿ, ಘಟಕವನ್ನು ಸೃಜಿಸಲು ಈಗಾಗಲೇ ಸ್ಥಳ ಸಿದ್ಧವಿರುತ್ತದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ 2 ಭಾರತ ಮೀಸಲು ಪಡೆ (ಐಆರ್‌ಬಿ) ಘಟಕಗಳನ್ನು ಸ್ಥಾಪಿಸಲು ಅನುಮತಿ ನೀಡಿದ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯಿಂದ 2 ಹೊಸ ಘಟಕಗಳನ್ನು ಹೊಸದಾಗಿ ಸ್ಥಾಪಿಸಲು ಬೆಂಗಳೂರಿನ ದೇವನಹಳ್ಳಿಯ ಆವತಿಯಲ್ಲಿ 1 ಘಟಕವನ್ನು ಹಾಗೂ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ 1 ಘಟಕವನ್ನು ಸೃಜಿಸಲು ಸ್ಥಳ ಪರಿಶೀಲನೆಯನ್ನು ನಡೆಸಿ ಈಗಾಗಲೇ ಪ್ರಸ್ತಾವನೆಯನ್ನು ಸರ್ಕಾರದ ಒಳಾಡಳಿತ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿರುತ್ತದೆ.

ಆದರೆ ಧಾರವಾಡದ ಬೇಲೂರಿನಲ್ಲಿ ಸ್ಥಾಪಿಸಬೇಕಾದ ಘಟಕದ ಪ್ರಸ್ತಾವನೆಯನ್ನು ಮಾರ್ಪಡುಗೊಳಿಸಿ/ ರದ್ದುಗೊಳಿಸಿ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಹೊಸದಾಗಿ ಸ್ಥಾಪಿಸಲು ಪ್ರಸ್ತಾವನೆಯನ್ನು ಪೊಲೀಸ್ ಇಲಾಖೆಯಿಂದ ಸಲ್ಲಿಸಿರುವುದು ಸರಿಯಷ್ಟೆ. ಆದರೆ ಸದರಿ ಸ್ಥಳದಲ್ಲಿ ಸ್ಥಾಪಿಸಿದ್ದಲ್ಲಿ ಯಾವುದೇ ರೀತಿಯಲ್ಲಿಯೂ ಉಪಯೋಗಕ್ಕೆ ಇರುವುದಿಲ್ಲ ಎಂದು ಅರವಿಂದ ಬೆಲ್ಲದ ವಿವರಣೆಯನ್ನು ನೀಡಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಹೊಸದಾಗಿ ಸೃಜಿಸಲು ಉದ್ದೇಶಿಸಿರುವ ಐಆರ್‌ಬಿ ಘಟಕದ ಸಾಧಕ/ ಬಾಧಕಗಳನ್ನು ಅರವಿಂದ ಬೆಲ್ಲದ ಪಟ್ಟಿ ಮಾಡಿದ್ದಾರೆ. ಕೋಲಾರ ಜಿಲ್ಲೆಗೆ ಡಿಪ್ಲಾಯ್‌ಮೆಂಟ್‌ ಇರುವುದಿಲ್ಲ. ಸದರಿ ಜಿಲ್ಲೆಯ ಸುತ್ತ-ಮುತ್ತಾ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯುವಂತಹ ಸೂಕ್ಷ್ಮ ಪ್ರದೇಶ ಇರುವುದಿಲ್ಲ.

ಆ ಸರಹದ್ದಿಗೆ ಕೋಲಾರ ಮತ್ತು ಕೆ.ಜಿ.ಎಫ್ ಘಟಕಗಳಲ್ಲಿರುವ ಡಿಎಆರ್ ಸಿಬ್ಬಂದಿಗಳನ್ನೇ ಬಳಸಿಕೊಳ್ಳುವುದು ಅತಿ ಕಡಿಮೆ. ಸರಿಯಾದ ಸಮಯಕ್ಕೆ ಕಾನೂನು ಸುವ್ಯವಸ್ಥೆಗೆ ಐಆರ್‌ಬಿ ಘಟಕವು ಲಭ್ಯವಾಗುವುದಿಲ್ಲ. ಹೊಸದಾಗಿ ಘಟಕ ಸೃಜಿಸುವುದರಿಂದ ಘಟಕದ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನಾನುಕೂಲವಾಗುತ್ತದೆ.

ಸರ್ಕಾರಕ್ಕೆ ಸಾರಿಗೆ, ಸಾಗಾಣಿಕೆ ವೆಚ್ಚ ದುಬಾರಿಯಾಗುತ್ತದೆ, ಆರ್ಥಿಕ ನಷ್ಟವಾಗುತ್ತದೆ. ಸದರಿ ಜಿಲ್ಲೆಗೆ ಐಆರ್‌ಬಿ ಘಟಕ ಸೃಜಿಸುವ ಅಗತ್ಯತೆ ಇರುವುದಿಲ್ಲ. ಸದರಿ ಸ್ಥಳದಲ್ಲಿ ಉತ್ತಮ ಆಸ್ಪತ್ರೆ ಸೌಲಭ್ಯ, ವಿದ್ಯಾಸಂಸ್ಥೆಗಳು ಇರುವುದಿಲ್ಲ. ಮೂಲ ಸೌಕರ್ಯದ ಕೊರತೆ ಉಂಟಾಗುತ್ತದೆ ಎಂದು ಹೇಳಿದ್ದಾರೆ.

ಧಾರವಾಡದ ಅನುಕೂಲತೆಗಳು: ಜಿಲ್ಲಾಧಿಕಾರಿಗಳು ಧಾರಾವಾಡ ಅವರ ಆದೇಶ ದಿನಾಂಕ 08/11/2010ರಲ್ಲಿ ಈಗಾಗಲೇ 52.04 ಎಕರೆ ಜಮೀನು ಐಆರ್‌ಬಿ ಘಟಕ ಸ್ಥಾಪಿಸಲು ಮಂಜೂರಾಗಿದ್ದು, ಜಮೀನಿನಲ್ಲಿ ಗಾರ್ಡ್ ರೂಂ ಸಹ ನಿರ್ಮಿಸಲಾಗಿದೆ. ಜಮೀನಿನ ಸುತ್ತಲು ತಂತಿ ಬೇಲಿ ಮತ್ತು ಬೋರ್‌ವೆಲ್ ಅಳವಡಿಸಿ ವಿದ್ಯುತ್ ಸಂಪರ್ಕವನ್ನು ಸಹ ಕಲ್ಪಸಲಾಗಿರುತ್ತದೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಸದರಿ ಐಆರ್‌ಬಿ ಘಟಕವನ್ನು ಧಾರವಾಡದ ಬೇಲೂರಿನಲ್ಲಿ ಸೃಜಿಸುವುದರಿಂದ ಅನುಕೂಲವಾಗುತ್ತದೆ.

ಬೆಳಗಾವಿಯಲ್ಲಿ 1 ಕೆಎಸ್‌ಆರ್‌ಪಿ ಘಟಕವಿದ್ದು, ಅಲ್ಲದೇ ಸುವರ್ಣ ವಿಧಾನಸೌಧವಿದ್ದು, ಕಾನೂನು ಸುವ್ಯವಸ್ಥೆಗೆ ತುಂಬಾ ಕಷ್ಟಕರವಾಗುತ್ತಿದೆ. ಅಲ್ಲದೇ ಹೊರ ಘಟಕಗಳಿಂದ ಬಂದೋಬಸ್ತ್‌ಗೆ ತುಕಡಿಗಳನ್ನು ನಿಯೋಜಿಸಲಾಗುತ್ತಿದೆ. ಇದರಿಂದ ಆರ್ಥಿಕವಾಗಿ ಸರ್ಕಾರಕ್ಕೆ ನಷ್ಟ ಉಂಟಾಗುವುದನ್ನು ತಪ್ಪಿಸಬಹುದು.

ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ಸಂದರ್ಭ, ರೈತರ ಪ್ರತಿಭಟನೆಗಳು, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಗಡಿ ವಿವಾದ, ಭಾಷಾ ವಿವಾದ, ಜಲ ವಿವಾದ, ನೆರೆ ಹಾವಳಿ, ಕೋಮುಗಲಭೆಗಳು ಹೀಗೆ ಹಲವಾರು ರೀತಿಯಲ್ಲಿ ಕಾನೂನು ಸುವ್ಯವಸ್ಥೆಗೆ ತುಂಬಾ ತೊಂದರೆಯಾಗುತ್ತಿದೆ.

ಧಾರವಾಡ ಜಿಲ್ಲೆಯು ಬೆಂಗಳೂರು ಮಹಾನಗರದಂತೆ ಬೆಳೆಯುತ್ತಿದ್ದು, ಇಲ್ಲಿ ವಿಮಾನ ನಿಲ್ದಾಣ, ಹೈಕೋರ್ಟ್ ಸಂಚಾರಿ ಪೀಠ ಹಾಗೂ 3 ವಿಶ್ವವಿದ್ಯಾಲಯ ಹಾಗೂ ಐಐಟಿ ಸಹ ಹೊಂದಿರುತ್ತದೆ. ಅಲ್ಲದೇ ಬೃಹತ್ ಉದ್ಯಮಗಳು/ ಕೈಗಾರಿಕೆಗಳು ಹೊಂದಿದ್ದು, ಕೋಮು ಸೂಕ್ಷ್ಮ ಪ್ರದೇಶವಾಗಿರುತ್ತದೆ. ಐಆರ್‌ಬಿ ಘಟಕವನ್ನು ಧಾರವಾಡದಲ್ಲಿ ಸ್ಥಾಪಿಸುವುದರಿಂದ ಹೊಸದಾಗಿ ಸೃಜನೆಯಾಗುವ ಘಟಕದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ/ ಸಿಬ್ಬಂದಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸೇವೆಗೆ ಸೇರ್ಪಡೆಗೊಂಡಿದ್ದು, ಅವರುಗಳು ಸಹ ತಮ್ಮ ತಮ್ಮ ಹತ್ತಿರದ ಸ್ವಗ್ರಾಮಗಳಿಗೆ ಸಮೀಪವಾಗುವುದರಿಂದ ಅಲ್ಲೇ ಸೇವೆ ಸಲ್ಲಿಸಲು ಅನುಕೂಲಕರವಾಗಿರುತ್ತದೆ ಎಂದು ಅರವಿಂದ ಬೆಲ್ಲದ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+