ಇರಾನ್ ಯುದ್ಧ ಪರಿಣಾಮ: ಮಂಗಳೂರಲ್ಲಿ ₹15,000 ಕೋಟಿ ತೈಲ ಸಂಗ್ರಹ ನಿರ್ಮಿಸಲು ONGCಗೆ ಕೇಂದ್ರ ಸೂಚನೆ
ಅತ್ತ ಒಂದೆಡೆ ಇರಾನ್ ಯುದ್ಧ ನಿಲ್ಲುವ ಸೂಚನೆ ಸಿಕ್ಕಿದರೂ, ಮತ್ತೊಂದೆಡೆ ಟ್ರಂಪ್ ಒಪ್ಪಂದ ಉಲ್ಲಂಘನೆಯಾದ್ರೆ ಮತ್ತೆ ಯುದ್ಧವಾಗುವುದೆಂದು ಬೆದರಿಸಿದ್ದಾರೆ. ಅಲ್ಲದೇ ಯುದ್ಧ ನಿಂತರೂ ಇದು ಭಾರತ ಸೇರಿ ಹಲವು ದೇಶಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಇನ್ನೂ ಹಲವು ತಿಂಗಳುಗಳೇ ಬೇಕು. ಜೊತೆಗೆ ಮತ್ತೆ ಯುದ್ಧದ ಭೀತಿಯೂ ಮುಂದುವರಿದಿದ್ದು, ಎದುರಾಗಬಹುದಾದ ಸಂಕಟಗಳಿಗೆ ಸನ್ನದ್ಧರಾಗೋದು ಅನಿವಾರ್ಯ. ಈ ನಿಟ್ಟಿನಲ್ಲಿ ತನ್ನ ಇಂಧನ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ಭಾರತ, ಮಂಗಳೂರಿನಲ್ಲಿ ಹೊಸ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ (SPR) ಯೋಜನೆಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ತೈಲ ಮತ್ತು ನೈಸರ್ಗಿಕ ಅನಿಲ ನಿಗಮಕ್ಕೆ (ONGC) ಸೂಚಿಸಿದೆ. ಈ ಯೋಜನೆಯ ಅಂದಾಜು ವೆಚ್ಚ ಸುಮಾರು ₹15,000 ಕೋಟಿ (1.6 ಬಿಲಿಯನ್ ಡಾಲರ್) ಎನ್ನಲಾಗಿದೆ.
ಇರಾನ್ ಯುದ್ಧದ ಬಳಿಕ ಜಾಗತಿಕ ತೈಲ ಪೂರೈಕೆಯಲ್ಲಿ ಉಂಟಾದ ಅನಿಶ್ಚಿತತೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಭಾರತದ ಸೀಮಿತ ಕಚ್ಚಾ ತೈಲ ಸಂಗ್ರಹ ಸಾಮರ್ಥ್ಯ ಬಯಲಾಗಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರ ತಗೆದುಕೊಳ್ಳಲಾಗಿದೆ. ಈ ಯೋಜನೆಯಡಿ 1.75 ಮಿಲಿಯನ್ ಮೆಟ್ರಿಕ್ ಟನ್ (MMT) ಸಾಮರ್ಥ್ಯದ ಭೂಗತ ತೈಲ ಸಂಗ್ರಹ ಗುಹೆ ನಿರ್ಮಿಸಲಾಗುತ್ತದೆ. ಇದರಿಂದ ಭಾರತದ ಪ್ರಸ್ತುತ 5.33 MMT ತೈಲ ಸಂಗ್ರಹ ಸಾಮರ್ಥ್ಯವು ಸುಮಾರು ಮೂರನೇ ಒಂದು ಭಾಗದಷ್ಟು ಹೆಚ್ಚಿಸಬಹುದು.

ಮೂಲಗಳ ಪ್ರಕಾರ, ಯೋಜನೆಗೆ ಮೀಸಲಾದ ಭೂಮಿ ಈಗಾಗಲೇ ONGC ಬಳಿ ಇದೆ. ಕಾಮಗಾರಿಗೆ ಸುಮಾರು ₹5,000 ಕೋಟಿ ವ್ಯಯಸಲಿದ್ದು, ಇತ್ತೀಚಿನ ತೈಲ ಬೆಲೆ ಆಧಾರದ ಮೇಲೆ ಸಂಗ್ರಹವನ್ನು ಭರ್ತಿ ಮಾಡಲು ಇನ್ನೂ ₹10,000 ಕೋಟಿ ವೆಚ್ಚವಾಗುವ ಸಾಧ್ಯತೆ ಇದೆ.
ಸರ್ಕಾರಿ ಸ್ವಾಮ್ಯದ ತೈಲ ಉತ್ಪಾದನಾ ಸಂಸ್ಥೆಯೊಂದು ಮೊದಲ ಬಾರಿಗೆ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಯೋಜನೆಯನ್ನು ಅಭಿವೃದ್ಧಿಪಡಿಸಲು, ಸರಕಾರ ಸೂಚಿಸಿರುವುದು ವಿಶೇಷ. ಪ್ರಸ್ತುತ ಭಾರತ ದಿನಕ್ಕೆ ಸುಮಾರು 5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಬಳಸುತ್ತಿದೆ. ಆದರೆ ದೇಶದ ತುರ್ತು ತೈಲ ಸಂಗ್ರಹ ಸಾಮರ್ಥ್ಯ ಇತರ ಪ್ರಮುಖ ರಾಷ್ಟ್ರಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ. 2025ರ ಅಂತ್ಯದ ವೇಳೆಗೆ ಭಾರತದ ಬಳಿ ಕೇವಲ 21 ಮಿಲಿಯನ್ ಬ್ಯಾರೆಲ್ ತುರ್ತು ತೈಲ ಸಂಗ್ರಹವಿತ್ತು. ಇದು ಚೀನಾದ 1.397 ಬಿಲಿಯನ್ ಬ್ಯಾರೆಲ್, ಅಮೆರಿಕದ 413 ಮಿಲಿಯನ್ ಬ್ಯಾರೆಲ್ ಹಾಗೂ ಜಪಾನ್‌ನ 263 ಮಿಲಿಯನ್ ಬ್ಯಾರೆಲ್ ಸಂಗ್ರಹಕ್ಕೆ ಹೋಲಿಸಿದರೆ ಬಹಳ ಕಡಿಮೆ.
ಇರಾನ್ ಸಂಘರ್ಷದ ವೇಳೆ ತುರ್ತು ತೈಲ ಸಂಗ್ರಹವನ್ನು ಹೊಂದುವುದರ ಅಗತ್ಯ ಸಾಬೀತಾಗಿದೆ. ಚೀನಾ ತನ್ನ ದೊಡ್ಡ ಪ್ರಮಾಣದ ತೈಲ ಸಂಗ್ರಹವನ್ನು ಬಳಸಿಕೊಂಡು ಆಮದು ಪ್ರಮಾಣವನ್ನು ಕಡಿಮೆ ಮಾಡಿಕೊಂಡು, ದೇಶದ ಆರ್ಥಿಕತೆ ಸುಭದ್ರವಾಗಿರುವಂತೆ ನೋಡಿಕೊಂಡಿತು. ಆದರೆ ಭಾರತ ತನ್ನ ರಿಫೈನರಿಗಳ ಕಾರ್ಯಾಚರಣೆಯನ್ನು ನಿರಂತರವಾಗಿ ಮುಂದುವರಿಸಲು ಜಾಗತಿಕ ಮಾರುಕಟ್ಟೆ ಮುಂದು ಕೈ ಚಾಚಬೇಕಾಯಿತು.
ಮಂಗಳೂರಿನ ಹೊಸ ತೈಲ ಸಂಗ್ರಹ ಕೇಂದ್ರವು ಭವಿಷ್ಯದಲ್ಲಿ ಜಾಗತಿಕ ರಾಜಕೀಯ ಅಸ್ಥಿರತೆ, ಪೂರೈಕೆ ವ್ಯತ್ಯಯ, ತೈಲ ಬೆಲೆ ಏರಿಳಿತ ಮತ್ತು ಕರೆನ್ಸಿ ಅಸ್ಥಿರತೆಯಂತಹ ಸವಾಲುಗಳನ್ನು ಎದುರಿಸುವಲ್ಲಿ ಭಾರತಕ್ಕೆ ಹೆಚ್ಚಿನ ಬಲ ನೀಡುವ ನಿರೀಕ್ಷೆಯಿದೆ.













Click it and Unblock the Notifications