IPS Transfer; ಚಿಕ್ಕಮಗಳೂರು ಎಸ್‌ಪಿ ವರ್ಗಾವಣೆ
ಬೆಂಗಳೂರು, ಆಗಸ್ಟ್ 22: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅಧಿಕಾರಿಗಳ ವರ್ಗಾವಣೆ ಮುಂದುವರೆಸಿದೆ. ಗೃಹ ಇಲಾಖೆಯಲ್ಲಿ ವರ್ಗಾವಣೆ ನಡೆದಿದೆ. ಐಪಿಎಸ್ ಅಧಿಕಾರಿಗಳ ವರ್ಗಾವಣೆಯಾಗಿದೆ.
ಮಂಗಳವಾರ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಚಿಕ್ಕಮಗಳೂರು ಎಸ್‌ಪಿ ವರ್ಗಾವಣೆಯಾಗಿದ್ದಾರೆ. ನೂತನ ಎಸ್‌ಪಿಯಾಗಿ ಅಮಟೆ ವಿಕ್ರಂ ನೇಮಕ ಮಾಡಲಾಗಿದೆ.

ಚಿಕ್ಕಮಗಳೂರು ಎಸ್‌ಪಿಯಾಗಿದ್ದ ಉಮಾ ಪ್ರಶಾಂತ್ ವರ್ಗಾವಣೆ ಮಾಡಲಾಗಿದೆ. ಅವರನ್ನು ಸರ್ಕಾರ ದಾವಣಗೆರೆ ಎಸ್‌ಪಿಯಾಗಿ ನೇಮಕ ಮಾಡಿದೆ. ಆಗಸ್ಟ್ 8ರಂದು ದಾವಣಗೆರೆ ಎಸ್‌ಪಿಯಾಗಿದ್ದ ಡಾ. ಕೆ. ಅರುಣ್ ಅವರನ್ನು ವರ್ಗಾವಣೆಗೊಳಿಸಲಾಗಿತ್ತು.
ದಾವಣಗೆರೆ ಎಸ್‌ಪಿ ಡಾ. ಕೆ. ಅರುಣ್ ಅವರನ್ನು ಕಲಬುರಗಿಯ ಪೊಲೀಸ್ ತರಬೇತಿ ಕೇಂದ್ರದ ಪ್ರಾಚಾರ್ಯರಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿತ್ತು. ಈಗ ಸರ್ಕಾರ ಡಾ. ಕೆ. ಅರುಣ್ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಉಮಾ ಪ್ರಶಾಂತ್ ನೇಮಕ ಮಾಡಿದೆ.
ಉಮಾ ಪ್ರಶಾಂತ್ ಚಿಕ್ಕಮಗಳೂರು ಜಿಲ್ಲೆಗೆ ಮೊದಲ ಮಹಿಳಾ ಎಸ್‌ಪಿಯಾಗಿ ನೇಮಕವಾಗಿದ್ದರು. ಆಗಸ್ಟ್ 2022ರಲ್ಲಿ ಅವರು ಎಸ್‌ಪಿಯಾಗಿ ಅಕ್ಷಯ್ ಎಂ. ಹಾಕೆ ಅವರಿಂದ ಅಧಿಕಾರ ಸ್ವೀಕಾರ ಮಾಡಿದ್ದರು.
ಅಮಟೆ ವಿಕ್ರಂ ದಕ್ಷಿಣ ಕನ್ನಡ ಜಿಲ್ಲೆಯ ಎಸ್‌ಪಿಯಾಗಿದ್ದರು. ಅದಕ್ಕೂ ಮೊದಲು ಅವರು ಗುಪ್ತವಾರ್ತೆ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು.
ಡಾ. ಕೆ. ಅರುಣ್ 2023ರ ಏಪ್ರಿಲ್ 24ರಂದು ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅದಕ್ಕೂ ಮೊದಲು ಸಿ. ಬಿ. ರಿಷ್ಯಂತ್ ಎಸ್‌ಪಿಯಾಗಿದ್ದರು. ಆದರೆ ಚುನಾವಣೆ ಸಮಯದಲ್ಲಿ ಅವರ ವರ್ಗಾವಣೆಯಾಗಿತ್ತು.
ಡಾ. ಕೆ. ಅರುಣ್ ದಾವಣಗೆರೆಗೆ ಬರುವ ಮೊದಲು ವಿಜಯನಗರ ಎಸ್‌ಪಿಯಾಗಿ ಕೆಲಸ ಮಾಡುತ್ತಿದ್ದರು. ಆಗಸ್ಟ್ 8ರಂದು ಅವರನ್ನು ಕಲಬುರಗಿಯ ಪೊಲೀಸ್ ತರಬೇತಿ ಕೇಂದ್ರದ ಪ್ರಾಚಾರ್ಯರಾಗಿ ನೇಮಕ ಮಾಡಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅಧಿಕಾರಿಗಳ ವರ್ಗಾವಣೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಅದರಲ್ಲೂ ಗೃಹ ಇಲಾಖೆಯ ವರ್ಗಾವಣೆಯ ಬಗ್ಗೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಟೀಕೆ ಮಾಡುತ್ತಿವೆ. ಇದರ ನಡುವೆಯೇ ಐಪಿಎಸ್ ಅಧಿಕಾರಿಗಳ ವರ್ಗಾವಣೆಯಾಗಿದೆ.












Click it and Unblock the Notifications