Get Updates
Get notified of breaking news, exclusive insights, and must-see stories!

Karnataka Assembly Elections 2023: ಬ್ಯಾಟರಾಯನಪುರ ಬಿಜೆಪಿ ಟಿಕೆಟ್ ಆಕಾಂಕ್ಷಿ ತಮ್ಮೇಶ ಗೌಡ ಸಂದರ್ಶನ

ಬೆಂಗಳೂರು,ಜನವರಿ 9: ಬ್ಯಾಟರಾಯನಪುರ ಕ್ಷೇತ್ರದಲ್ಲಿ ಸಾಕಷ್ಟು ಮೂಲಭೂತ ಸಮಸ್ಯೆಗಳಿವೆ. ನಮ್ಮ ಭಾಗದ ಶಾಸಕರು ನನಗೆ ಕೆಲಸ ಮಾಡುವುದಕ್ಕೆ ಇಷ್ಟ ಇದೆ, ಆದರೆ ನಮ್ಮಮ ಸರ್ಕಾರ ಇಲ್ಲ, ಹಣ ಇಲ್ಲ ಅಂತಾರೆ. 7 ವರ್ಷ ಮಂತ್ರಿಯಾಗಿ ಏನು ಕೆಲಸ ಮಾಡಿದೀರಾ.?

ನಿಮ್ಮ ರಿಪೋಟ್ ಕಾರ್ಡ್ ಕೊಡ್ತಿರಾ ಎಂದು ಶಾಸಕ ಕೃಷ್ಣಬೈರೇಗೌಡರವರ ಕಾರ್ಯವೈಖರಿಯ ಬಗ್ಗೆ ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ತಮ್ಮೇಶ್ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ಭಾಗದ ಶಾಸಕರು 100 ಮೀಟರ್ ರಸ್ತೆ ಹಾಕಿದ್ರೆ 100 ಫ್ಲೆಕ್ಸ್ ಹಾಕುತ್ತಾ೦ರೆ. ಚುನಾವಣೆಗೆ ಆರು ತಿಂಗಳು ಇರುವಾಗ ಕೆಲಸ ಶುರು ಮಾಡುತ್ತಾರೆ ಎಂದು 'ಒನ್ ಇಂಡಿಯಾ ಕನ್ನಡ'ಕ್ಕೆ ನೀಡಿದ ಸಂದರ್ಶನಲ್ಲಿ ತಿಳಿಸಿದರು. ಸಂದರ್ಶನದ ಹಲವು ವಿಚಾರಗಳು ಇಲ್ಲಿದೆ.

ರೇಷ್ಮಾ.ಪಿ

1. ವಿಧಾನಸಭಾ ಚುನಾವಣೆಗೆ ಬ್ಯಾಟರಾಯನಪುರ ಬಿಜೆಪಿ ಅಭ್ಯರ್ಥಿಯಾಗಿ ಯಾವ ರೀತಿಯ ಸಿದ್ದತೆಯನ್ನ ನಡೆಸಿದ್ದೀರಾ.?

ಬ್ಯಾಟರಾಯನಪುರ ಕ್ಷೇತ್ರವನ್ನ ಮಾದರಿ ವಿಧಾನ ಸಭಾ ಕ್ಷೇತ್ರವನ್ನಾಗಿ ಮಾಡ್ಬೇಕು, 224 ವಿಧಾನ ಸಭಾ ಕ್ಷೇತ್ರದಲ್ಲಿ ಒಂದು ಮಾದರಿ ಕ್ಷೇತ್ರವನ್ನ ಗುರಿಯಾಗಿ ಇಟ್ಟಕೊಂಡು, ಅಭಿವೃದ್ದಿಯ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ರೂಪರೇಷೆಯನ್ನ ಸಿದ್ದಪಡಿಸಿದ್ದೇನೆ ಎಂದರು.

Thammesh Gowda Asks Krishna Byre Gowda To Give Report Card of 7 Years Service of Minister

2. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಇರುವಂತಹ ಸಮಸ್ಯೆಗಳೇನು.?

ಬೆಂಗಳೂರು ಉತ್ತರದ ಬ್ಯಾಟರಾಯನಪುರ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ದಿಯಾಗಿಲ್ಲ, ಈ ಭಾಗದ ಜನರಿಗೆ ಮೂಲಕಭೂತ ಸೌಕರ್ಯಗಳಿಲ್ಲ. ಅಂತರಾಷ್ಟ್ರೀಯ ಮನ್ನಣೆ ಪಡೆಯುತ್ತಿರುವ ಈ ವಿಧಾನಸಭಾ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ ಎಂದು ಜನ ಮಾತನಾಡುತ್ತಿದ್ದಾರೆ.

ರಸ್ತೆ, ಚರಂಡಿ, ಬೀದಿದೀಪಗಳಿಲ್ಲ, ಹೆಬ್ಬಾಳ ಫ್ಲೈ ಓವರ್ ನ ಟ್ರಾಪಿಕ್ ಸಮಸ್ಯೆಯನ್ನ ನಮ್ಮ ಜನರು ಅನುಭವಿಸುತ್ತಿದ್ದಾರೆ , ಕಳೆದ 15 ವರ್ಷದಿಂದ ಇರುವ ನಮ್ಮ ಶಾಸಕರು ಏನು ಮಾಡಿದ್ದರೆ ಎಂಬುದಕ್ಕೆ ನಮ್ಮ ಹತ್ತಿರ ಉತ್ತರ ಇಲ್ಲ. ಈ ಕ್ಷೇತ್ರದಲ್ಲಿ ಪಾರ್ಕ್ ಹಾಗೂ ಮೈದಾನಗಳನ್ನ ಹುಡುಕ ಪರಿಸ್ಥಿತಿ ಇದೆ.

ಕೆರೆಗಳು ಸಹ ಬಹಳಷ್ಟು ಕೆಟ್ಟ ಪರಿಸ್ಥಿತಿ ಇದ್ದರೂ ಆ ಕಡೆ ಗಮನ ಹರಿಸವಂತಹ ಕೆಲಸವನ್ನ ಶಾಸಕರು ಮಾಡಿಲ್ಲ. ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಜನರು ಕಷ್ಟವನ್ನ ಅನುಭವಿಸಿದ್ರು, ಬಡವರಿಗೆ ಆಸ್ಪತ್ರೆಗೆ ಹೋಗುವುದು ಸಹ ಕಷ್ಟಇತ್ತು. ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಜನರಲ್ ಆಸ್ಪತ್ರೆಗಳಿಲ್ಲ.

ನಾಲ್ಕುವರೆ ಲಕ್ಷ ಜನರಿರುವ ಈ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸರ್ಕಾರಿ ಆಸ್ಪತ್ರೆಗಳಿಲ್ಲ. ಸರ್ಕಾರಿ ಡಿಗ್ರಿ ಕಾಲೇಜಿಲ್ಲ ಎಂದು ಶಾಸಕ ಕೃಷ್ಣಬೈರೇಗೌಡರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

3. ಬ್ಯಾಟರಾಮನಪುರ ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತು ಯಾವ ರೀತಿಯ ಫಿಲ್ಡ್ ವರ್ಕ್ ನಡೆಸಿದ್ದೀರಾ.?

ನಮ್ಮ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ಆಗ್ಬೇಕು ಎನ್ನುವ ನಿರೀಕ್ಷೆ ಇದೆ. ನಾನು ಎಲ್ಲಾ ವಾರ್ಡ್ ಗಳಿಗೂ ಭೇಟಿ ಕೊಟ್ಟಾಗ ರಸ್ತೆಗಳ ಗುಣಮಟ್ಟ ಕಳಪೆಯಾಗಿದೆ. ನಮ್ಮ ಭಾಗದ ಶಾಸಕ ಅಭಿವೃದ್ದಿ ಹೇಗೆ ಇದೆ ಅಂದ್ರೆ ನಮ್ಮ ಶಾಸಕರು 100 ಮೀಟರ್ ರಸ್ತೆ ಹಾಕಿದ್ರೆ 100 ಫ್ಲೆಕ್ಸ್ ಹಾಕುವಂತದ್ದು, ಚುನಾವಣೆಗೆ ಆರು ತಿಂಗಳು ಇರುವಾಗ ಕೆಲಸ ಶುರು ಮಾಡುತ್ತದೆ.

ವ್ಯವಸ್ಥಿತಗಾಗಿ ಯಾವ ಯಾವ ಜಾಗದಲ್ಲಿ ಏನು ಮಾಡ್ಬೇಕು ಎನ್ನುವ ಕಲ್ಪನೆಯೇ ಈ ಕ್ಷೇತ್ರದಲ್ಲಿ ಬಂದಿಲ್ಲ. ಜನರ ನಿರೀಕ್ಷಗೆ ತಕ್ಕಂತೆ ಈ ಭಾಗದ ಶಾಸಕರು ಕೆಲಸವನ್ನು ಮಾಡಿಲ್ಲ, ಈ ನಿರೀಕ್ಷೆಯ ಹತ್ತಿರವೂ ಹೋಗಿಲ್ಲ. ಒಂದು ಕ್ಷೇತ್ರ ಪ್ರಗತಿ ಆಗ್ಬೆಕು ಅಂದ್ರೆ ನಮ್ಮ ಕ್ಷೇತ್ರದಲ್ಲಿ ಒಂದು ಪ್ರೈಮೇರಿ ಸ್ಕೂಲ್ ಇಲ್ಲ, ಸ್ಕೂಲ್ ಗಳಿ ಬಗ್ಗೆಯೂ ಆಸಕ್ತಿತೊರದ ಒಬ್ಬ ಜನ ಪ್ರತಿನಿಧಿ ಇರ್ಬೇಕಾ.? ಶಿಕ್ಷಣದ ಬಗ್ಗೆ ಯಾವುದೇ ಆಸಕ್ತಿ ಇಲ್ಲ, ನಮ್ಮಲಿ ಒಂದು ಡಿಗ್ರಿ ಕಾಲೇಜಿಲ್ಲ, 15 ವರ್ಷ ಈ ಕ್ಷೇತ್ರದಲ್ಲಿ ಕಾಲೇಜು ಮಾಡ್ಬೇಕು ಅಂತ ಅನ್ಸಿಲ್ವಾ ಎಂದು ಪ್ರಶ್ನಿಸಿದರು.

ಮಂತ್ರಿಗಳಾದವರು, ಮುಖ್ಯಮಂತ್ರಿಗಳಾದವರು ಅವರವರ ಕ್ಷೇತ್ರ ಬಗ್ಗೆ ಗಮನಹರಿಸುತ್ತಾರೆ. ಶಾಸಕರಿಗೆ ತಮ್ಮ ಕ್ಷೇತ್ರವನ್ನ ಅಭಿವೃದ್ದಿ ಮಾಡ್ಬೇಕು ಅಂತ ಅನ್ಸಲಿಲ್ವಾ, 15 ವರ್ಷದಲ್ಲಿ ನಮ್ಮ ಭಾಗದಲ್ಲಿ ಎಷ್ಟು ಜನರಿಗೆ ಮನೆ ಕೊಟ್ಟಿದ್ದಾರೆ ಅಂತ ಉತ್ತರ ಕೊಡೋಕೆ ನಮ್ಮ ಶಾಸಕರು ರೆಡಿ ಇಲ್ಲ.ಎಷ್ಟು ಜನಕ್ಕೆ ಹಕ್ಕು ಪತ್ರ ಕೊಡೋಕೆ ಉತ್ತರ ಕೊಡಲ್ಲ, ನಮ್ಮ ಕ್ಷೇತ್ರದಲ್ಲಿ ಸರ್ಕಾರಿ ಜಾಗ ತುಂಬಾ ಇದೆ.

ನೂರಾರು ಎಕರೆ ಭೂಗಳ್ಳರು ನುಂಗಿದ್ದರು ಸಹ ಅವರ ಮೇಲೆ ಕ್ರಮ ಕೈಗೊಳ್ಳುವ ತಾಕತ್ತು ನಮ್ಮ ಶಾಸಕರಿಗಿಲ್ಲ ಆದರೆ ಬಡವರಿಗೆ ಹಕ್ಕು ಪತ್ರ ಕೊಡಲು ನೂರು ಕಾನೂನನ್ನ ಹೇಳುತ್ತಾರೆ ಎಂದು ಕಿಡಿಕಾರಿದರು.

ಇನ್ನೂ ರಾಜ ಕಾಲುವೆಯನ್ನ ನುಗ್ಗಿರುವ ಬೀಲ್ಡರ್ಸ್ ಗಳ ಬಗ್ಗೆ ಮಾತನಾಡಲ್ಲ, ಆದರೆ ರಾಜ ಕಾಲುವೆ ಪಕ್ಕ ಮನೆ ಕಟ್ಟಿದ ಬಡವರಿಗೆ ಹಕ್ಕು ಪತ್ರ ಕೊಡಲ್ಲ. ಬಡವರ ಪರವಾಗಿ ನಿಲ್ಲವಂತಹ ಕೆಲಸವನ್ನ ಶಾಸಕರು ಮಾಡಲಿಲ್ಲ.

ಇವೆಲ್ಲವನ್ನ ಗಮನಿಸಿ ನಮ್ಮ ಕ್ಷೇತ್ರವನ್ನ ಮಾದರಿ ಬ್ಯಾಟರಾಯನಪುರ ಕ್ಷೇತ್ರವನ್ನಾಗಿ ಮಾಡ್ಬೇಕು, ಹಾಗೂ ಇಲ್ಲಿರುವ ಸಂಪನ್ಮೂಲಗಳನ್ನ ಬಳಸಿ ದಿಕ್ಕನ್ನ ಬದಲಾಯಿಸಬೇಕು. 2023 ರ ಚುನಾವಣೆ ಮೇಲೆ ನನಗೆ ಆಸಕ್ತಿ ಇಲ್ಲ, 25 ವರ್ಷದ ನಂತರ ನನ್ನ ಕ್ಷೇತ್ರ ಹೇಗೆ ಇರಬೇಕು ಅದಕ್ಕೆ ಸಂಬಂಧಿಸಿದ ನೀಲಿನಕ್ಷೆ ರೆಡಿಯಾಗಬೇಕು ಎಂದು ಹೇಳಿದರು.

Thammesh Gowda Asks Krishna Byre Gowda To Give Report Card of 7 Years Service of Minister

4. ನೀವು ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಸುತ್ತಾಡುತ್ತಿದ್ದೀರಾ, ಜೊತೆಗೆ ಜನರೂ ಕೂಡ ತಮ್ಮ ಸಮಸ್ಯೆಗಳನ್ನು ಹೇಳ್ಕೊಳ್ಳುತ್ತಿದ್ದಾರೆ. ಅವರ ಸಮಸ್ಯೆಗೆ ಯಾವ ರೀತಿಯಾಗಿ ಸ್ಪಂದಿಸುವ ಭರವಸೆ ನೀಡಿದ್ದೀರಾ?

ಈಗಾಗಲೇ ಜನರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ. ನಮ್ಮ ಕ್ಷೇತ್ರದ ಶಾಸಕರು ಹಾಗೂ ನನ್ನ ನಡುವಿನ ವ್ಯತ್ಯಾಸವನ್ನು ಈಗಾಗಲೇ ಜನ ಚರ್ಚೆ ಮಾಡುತ್ತಿದ್ದಾರೆ. 15 ವರ್ಷ ಕ್ಷೇತ್ರದ ಶಾಸಕರಾಗಿದ್ದರೂ ಇಲ್ಲಿ ಶಾಸಕರ ಕಚೇರಿ ಮಾಡದವರು ಈ ಕ್ಷೇತ್ರಕ್ಕೆ ಬೇಕಾ?

ಜನರ ನಡುವೆ ಬೆರೆಯದೆ ಇರುವಂತಹ, ಜನರ ಸಮಸ್ಯೆಗಳನ್ನು ಆಲಿಸದಿರುವಂತಹ. ಸಮಸ್ಯೆ ಹೇಳಲು ಹೋದ ಜನರನ್ನು ಕೂರಿಸಿಯೂ ಮಾತನಾಡಿಸದ ಶಾಸಕರನ್ನು ನಾನಂತೂ ಇದುವರೆಗೂ ನೋಡಿರಲಿಲ್ಲ. ಆದರೆ, ನಮ್ಮ ಕ್ಷೇತ್ರದ ಜನಕ್ಕೆ ಆ ಅನುಭವ ಆಗಿದೆ.

ಯಾಕಂದ್ರೆ ನೀವು ಕೂಡ ರಾಜ್ಯ ಬೇರೆ ಬೇರೆ ಶಾಸಕರ ಸ್ವಭಾವವನ್ನು ಗಮನಿಸಿರುತ್ತೀರಿ. ಆದರೆ, ಇಲ್ಲಿ ಬೇರೆಯದ್ದೇ ಇದೆ. ಜನರ ಸಮಸ್ಯೆಗಳನ್ನು ಆಲಿಸುವ ಸ್ವಭಾವವೇ ಅವರತ್ತಿರ ಇಲ್ಲ. ಇನ್ನೂ ಆ ಸಮಸ್ಯೆಗಳನ್ನು ಎಲ್ಲಿಂದ ಪರಿಹರಿಸುತ್ತಾರೆ ಎಂದು ಬಹಳಷ್ಟು ಜನ ಹೇಳ್ತಾರೆ.

ಯಾವುದೇ ಜನಪ್ರತಿನಿಧಿಯಾಗಲಿ ಮೊದಲು ಜನರ ಜೊತೆ ನಿಲ್ಲುವ, ಅವರ ಸಮಸ್ಯೆಗಳಿಗೆ ದನಿಯಾಗುವ ಕೆಲಸ ಮಾಡಬೇಕು ಎಂಬುದು ನನ್ನ ಮತ್ತು ಜನರ ನಿರೀಕ್ಷೆಯಾಗಿದೆ. ಸದಾ ನಿಮ್ಮ ಜೊತೆ ಇರುತ್ತೇನೆ, ಈಗಿನ ಶಾಸಕರ ರೀತಿ ನಾನು ಅಂತರ ಸೃಷ್ಟಿಸಲ್ಲ, ನಾನು ಕೂಡ ನಿಮ್ಮಂಗೆ ಕಾಮನ್‌ ಮ್ಯಾನ್‌. ನಿಮ್ಮೊಳಗೊಬ್ಬನಾಗಿ ಕೆಲಸ ಮಾಡುತ್ತೇನೆ ಎಂಬ ನಿರೀಕ್ಷೆಯನ್ನು ನನ್ನ ಕ್ಷೇತ್ರದ ಜನತೆಗೆ ನೀಡಿದ್ದೇನೆ.

ಆ ಕೆಲಸ ನಾಳಿನ ಮೂಲ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವುದರ ಜೊತೆಗೆ ಮುಂದಿನ 25 ವರ್ಷಗಳ ಬಳಿಕ ಬ್ಯಾಟರಾಯನಪುರ ಕ್ಷೇತ್ರ ಹೇಗಿರಬೇಕು ಎಂಬ ಆಲೋಚನೆಯನ್ನು ಜನರ ಮುಂದಿಡಬೇಕೆಂಬ ಬಯಕೆ ಇದೆ.

ಯಾಕೆ ಈ ಆಲೋಚನೆ ಬೇಕೆಂದರೆ, ನಾವು ನಮ್ಮ ಬಗ್ಗೆ ಮಾತ್ರ ಯೋಚನೆ ಮಾಡುವ ಮನಸ್ಥಿತಿ ರೂಢಿಸಿಕೊಂಡಿದ್ದೇವೆ. ನಮ್ಮ ಮಕ್ಕಳ ಬಗ್ಗೆ ಯೋಚನೆ ಮಾಡ್ತೀವಿ. ಅವರಿಗೆ ಆಸ್ತಿ, ಮದುವೆ, ಹೇಗಿರಬೇಕು ಎಂಬುದನ್ನು ಯೋಚನೆ ಮಾಡ್ತೀವಿ. ಆದರೆ, ನಮ್ಮ ಮಕ್ಕಳು 25 ರಿಂದ 30 ವರ್ಷ ಬದುಕುವ ನಮ್ಮ ಪರಿಸರ, ರಸ್ತೆ, ಕ್ಷೇತ್ರ, ಊರು ಹೇಗಿರಬೇಕೆಂಬ ಯೋಚನೆಯನ್ನು ನಾವು ಮಾಡಬೇಕು.

ಈ ಆಲೋಚನೆ ನಮ್ಮಲ್ಲಿ ಬರಬೇಕು. ಈ ರೀತಿ ಆಲೋಚನೆಗಳು ಬಂದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರುವುದಕ್ಕೆ ಸಾಧ್ಯ. ಆದ್ದರಿಂದ, ಈ ರೀತಿಯ ಆಲೋಚನೆಯನ್ನು ಜನರ ನಡುವೆ ತರಬೇಕು, ಜನರಿಂದಾನೇ ಬದಲಾವಣೆ ಮಾಡಿಸಬೇಕು, ಜನರ ನೇತೃತ್ವದಲ್ಲಿಯೇ ಮಾದರಿ ವಿಧಾನಸಭಾ ಕ್ಷೇತ್ರ ನಿರ್ಮಿಸಬೇಕು ಎಂಬುದು ನನ್ನ ಆಸೆ.

Thammesh Gowda Asks Krishna Byre Gowda To Give Report Card of 7 Years Service of Minister

5. ಬ್ಯಾಟರಾಯನಪುರದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಕೃಷ್ಣ ಬೈರೇಗೌಡರನ್ನು ಸೋಲಿಸುವುದಕ್ಕೆ ಈ ಬಾರಿ ಬಿಜೆಪಿಗೆ ಆಗುತ್ತಾ?

ಖಂಡಿತ, ಸಾವಿರ ಪರ್ಸೆಂಟ್‌ ಕೃಷ್ಣ ಬೈರೇಗೌಡರನ್ನು ಈ ಬಾರಿ ಬಿಜೆಪಿ ಸೋಲಿಸುತ್ತದೆ. ಕ್ಷೇತ್ರದ ಜನರ ನಿರೀಕ್ಷೆ ಅದೇ ಇದೆ. ಮೂರು ಚುನಾವಣೆಗಳ ಫಲಿತಾಂಶಗಳನ್ನು ನೋಡಿದಾಗ ಕಳೆದ ಬಾರಿಯ ಚುನಾವಣೆಯಲ್ಲಿ ನಾವು ಸೋತಿರುವುದು 4800 ಮತಗಳಿಂದ ಮಾತ್ರ.

ಆಗಲೇ ಜನ ಬದಲಾವಣೆ ಮಾಡಬೇಕೆಂದು ತೀರ್ಮಾನ ಮಾಡಿದ್ದರು. ಕಾರಣಾಂತರಗಳಿಂದ ಅದು ಆಗಲಿಲ್ಲ. ಆದರೆ, ಈ ಬಾರಿ ಎಲ್ಲಿಯೇ ಹೋದರೂ ಜನ 15 ವರ್ಷ ಸಾಕಪ್ಪ, ಈ ಸಲ ಬದಲಾವಣೆ ಮಾಡೋಣ ಎಂದು ಮಾತನಾಡುತ್ತಿದ್ದಾರೆ. ಜನರ ನಿರೀಕ್ಷೆಗಳು ಹುಸಿಯಾಗಿವೆ, ಅದರ ಆಕ್ರೋಶವನ್ನು ಜನ ಹೊರಹಾಕುತ್ತಿದ್ದಾರೆ. ಅದು ಶಾಸಕರ ಗಮನಕ್ಕೂ ಬಂದಿದೆ. ಈ ಸಲ ಬಿಜೆಪಿ ಗೆದ್ದೆ ಗೆಲ್ಲುತ್ತೆ.

6. ಈಗಾಗಲೇ ನವಬ್ಯಾಟರಾಯನಪುರ ನಿರ್ಮಾಣಕ್ಕಾಗಿ ಜನಾಭಿಪ್ರಾಯ ಯಾತ್ರೆ ಮಾಡುತ್ತಿದ್ದೀರಿ. ಅದರ ಪ್ರಮುಖ ಉದ್ದೇಶ ಏನು?

ಬ್ಯಾಟರಾಯನಪುರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕೆಂಬ ಯೋಜನೆಯನ್ನು ನಾವು ಮಾಡಿದ್ದೇವೆ. ಮುಂದಿನ 25 ವರ್ಷಗಳಿಗೆ ಈ ಕ್ಷೇತ್ರಕ್ಕೆ ಏನು ಬೇಕು ಎಂಬುವುದನ್ನು ತಿಳಿಯಲು ನಾವು ಜನರ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದೇವೆ.

ಜನರ ನಿರೀಕ್ಷೆಗಳು ಹುಸಿಯಾಗಿವೆ. ಯಾರನ್ನು ಗೆಲ್ಲಿಸಿದರೂ ಇಷ್ಟೇನಾ ಎಂದು ಜನ ಭ್ರಮನಿರಸನಗೊಳಗಾಗಿದ್ದಾರೆ. ಆದ್ದರಿಂದ ಜನರನ್ನು ಆ ಮನಸ್ಥಿತಿಯಿಂದ ಹೊರತರಲು ಅವರಿಗೆ ಒಂದು ಸಕಾರಾತ್ಮಕತೆಯನ್ನು ತೋರಿಸಲು, ಬದಲಾವಣೆಯನ್ನು ಕಾಣಿಸಬೇಕು.

ಜೊತೆಗೆ ನಮ್ಮ ಜೊತೆ ಬಂದು ನಮ್ಮ ಸಮಸ್ಯೆಗಳನ್ನು ಕೇಳುತ್ತಾರೆ, ನಮ್ಮ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂಬ ನಂಬಿಕೆ ಅವರಲ್ಲಿ ಮೂಡಬೇಕು. ಅದಕ್ಕಾಗಿ ನಾವು ಜನಾಭಿಪ್ರಾಯ ಯಾತ್ರೆ ಕೈಗೊಂಡಿದ್ದೇವೆ.

ಕಳೆದ 15 ವರ್ಷಗಳಲ್ಲಿ ಕ್ಷೇತ್ರದಲ್ಲಿ ಆಗಿರುವ ಕೆಲಸಗಳೇನು? ಏನೆಲ್ಲಾ ಆಗಬೇಕಿತ್ತು? ಯಾಕೆ ಅದನ್ನೆಲ್ಲಾ ಮಾಡಲಿಲ್ಲ. ಮಾಡೋಕೆ ಇದ್ದಂತಹ ಅವಕಾಶಗಳನ್ನು ಯಾರು ಉಪಯೋಗಿಸಿಕೊಳ್ಳಲಿಲ್ಲ. ಅದರಿಂದ ಏನ್‌ ತೊಂದರೆಯಾಗಿದೆ? ಇವೆಲ್ಲವುಗಳನ್ನೂ ಜನರೇ ಮಾತನಾಡಬೇಕು ಎಂಬ ಉದ್ದೇಶ ನಮ್ಮದು.

ನಾನು ಜನರ ಮಧ್ಯೆ ಯಾಕೆ ಹೊರಟಿದ್ದೇನೆ ಎಂದರೆ ಜನರ ನಿರೀಕ್ಷೆಗಳನ್ನು ಅರಿಬೇಕು. ಜನರಿಂದಲೇ ಪರಿಹಾರ ಪಡೆದು, ಜನರಿಂದಲೇ ಆ ಕೆಲಸಗಳನ್ನು ಮಾಡಬೇಕು ಎಂದು ಹೊರಟಿದ್ದೇನೆ. ಅದಕ್ಕೆ ತುಂಬಾ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಎಲ್ಲ ವರ್ಗದ ಜನರು ನಮ್ಮ ಜೊತೆ ಬರುತ್ತಿದ್ದಾರೆ.

ವೃತ್ತಿಪರ ವಕೀಲರು, ವೈದ್ಯರು, ಐಟಿ ಉದ್ಯೋಗಿಗಳು, ಆಟೋ ಚಾಲಕರು ಸೇರಿ ಎಲ್ಲ ವರ್ಗದ ಜನ ನಮ್ಮ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಅವರ ನಿರೀಕ್ಷೆಗಳನ್ನು ಹೇಳುವುದರ ಜೊತೆಗೆ ಪರಿಹಾರವನ್ನು ತಿಳಿಸುತ್ತಿದ್ದಾರೆ. ಇದಕ್ಕೆ ಉತ್ತಮ ವಾತಾವರಣ ಸೃಷ್ಟಿಯಾಗುತ್ತಿದೆ. ಈ ಬಾರಿ ನೂರಕ್ಕೆ ನೂರರಷ್ಟು ಬದಲಾವಣೆ ಮಾಡಬೇಕು ಎಂದು ಜನ ಬಯಸಿದ್ದಾರೆ.

7. ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಮಾತ್ರ ಬಾಕಿಯಿದೆ. ಯಾವ ಯಾವ ಸಮಸ್ಯೆಗಳನ್ನು ತೆಗೆದುಕೊಂಡು ಜನರ ಮುಂದೆ ಹೋಗುತ್ತೀರಾ? ನಿಮ್ಮ ಮುಂದಿನ ಯೋಜನೆ ಏನಾಗಿದೆ?

ಉತ್ತರ: ಈಗಾಗಲೇ ನಮ್ಮ ಜನಾಭಿಪ್ರಾಯ ಯಾತ್ರೆ ಶುರುವಾಗಿದೆ. ಹಿಂದುಳಿದ ವರ್ಗ, ಎಸ್‌ಸಿ, ಎಸ್‌ಟಿ ಸೇರಿ ಎಲ್ಲ ವರ್ಗದ ಜನರ ಸಮಸ್ಯೆಯನ್ನು ಆಲಿಸಿ, ಅವರನ್ನು ಜೊತೆಗೆ ತೆಗೆದುಕೊಂಡು ಹೋಗುತ್ತೇನೆ. ನಮ್ಮ ಕ್ಷೇತ್ರದಲ್ಲಿ ತುಂಬಾ ದೊಡ್ಡ ಮಟ್ಟದಲ್ಲಿ ಐಟಿ ಕ್ಷೇತ್ರ ಇದೆ.

ಬ್ಯಾಟರಾಯನಪುರ ಬದಲಾವಣೆಗೆ ನಮ್ಮ ಜೊತೆಗೆ ಸೇರಿಸಿಕೊಳ್ಳುವ ಕೆಲಸ ಪ್ರಾರಂಭಿಸಿದ್ದೇನೆ. ಈಗಾಗಲೇ ವೈದ್ಯರು, ವಕೀಲರು, ಕೈಗಾರಿಕೋದ್ಯಮಿಗಳು, ಉದ್ಯಮಿಗಳು, ಐಟಿ ಉದ್ಯೋಗಿಗಳನ್ನು ಸೇರಿಸಿ ಬ್ಯಾಟರಾಯನಪುರ ಬದಲಾವಣೆಗೆ ನಮ್ಮ ಜೊತೆ ಬನ್ನಿ ಎಂದು ಮನವಿ ಮಾಡಿದ್ದೇವೆ.

ಈಗಿನ ಜಾಗತಿಕ ಸ್ಪರ್ಧಾತ್ಮಕ ಯುಗದಲ್ಲಿ ಗಟ್ಟಿಯಾದ ವಿಧಾನಸಭಾ ಕ್ಷೇತ್ರವನ್ನು ಕಟ್ಟೋಣ. ನಮ್ಮ ದೇಶಕ್ಕೆ ಒಳ್ಳೆಯ ಪ್ರಧಾನಿ ಸಿಕ್ಕಿರಬೇಕಾದರೆ, ನಮಗೆ ಉತ್ತಮ ಶಾಸಕರು ಬೇಕಲ್ವಾ? ನಮ್ಮ ದೇಶಕ್ಕೆ ಮೋದಿ ಘನತೆ ಮತ್ತು ಹೆಗ್ಗುರತನ್ನು ತಂದುಕೊಟ್ಟರು.

ನಮ್ಮ ಬ್ಯಾಟರಾಯನಪುರಕ್ಕೂ ಹೆಗ್ಗುರುತು ಬೇಕಲ್ವಾ? ಒಂದು ಸ್ವಾಭಿಮಾನ ಬೇಕಲ್ವಾ? ಆ ಸ್ವಾಭಿಮಾನವನ್ನಯ ತಂದುಕೊಡುವುದಕ್ಕೆ ನೀವೆಲ್ಲರೂ ನಮ್ಮ ಜೊತೆ ಬನ್ನಿ ಎಂಬ ವಿಚಾರವನ್ನು ನಾನು ತೆಗೆದುಕೊಂಡು ಹೋಗುತ್ತಿದ್ದೇನೆ. ಅದಕ್ಕೆ ತುಂಬಾ ಒಳ್ಳೆಯ ಸ್ಪಂದನೆ ವ್ಯಕ್ತವಾಗಿದೆ. ನಮ್ಮ ಕ್ಷೇತ್ರವನ್ನು ಎಜ್ಯುಕೇಶನ್‌ ಹಬ್‌, ಹೆಲ್ತ್‌ ಹಬ್‌, ಇಂಡಸ್ಟ್ರೀ ಹಬ್‌ ಮಾಡಬೇಕು ಎಂದು ಎಲ್ಲರಿಗೂ ಅನಿಸಿದೆ.

ಈ ಮೂರು ಆದಾಗ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಹೊಸ ಹೊಸ ಯೋಜನೆ ರೂಪಿಸುತ್ತೇವೆ. ತಾತ್ಕಾಲಿಕ ಪರಿಹಾರಕ್ಕಿಂತ ಮುಂದಿನ 25 ವರ್ಷಕ್ಕೆ ಶಾಶ್ವತ ಅಭಿವೃದ್ಧಿ ಕಾರ್ಯಗಳು ಆಗಬೇಕು ಎಂಬ ಚಿಂತನೆ ನನ್ನದು.

ನನ್ನ ಕ್ಷೇತ್ರದ ಎಲ್ಲ ಊರಿನ, ವಾರ್ಡ್‌ಗಳ ಸಮಸ್ಯೆಗಳನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಬೇಕು, ಅವುಗಳನ್ನು ಪರಿಹರಿಸಲು ಗಡುವು ಇಟ್ಟುಕೊಳ್ಳಬೇಕು ಎಂಬುದು ನನ್ನ ಇಚ್ಛೆ. ನನ್ನ ಅವಧಿಯಲ್ಲಿ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ ಕೆಲಸಗಳನ್ನು ಮಾಡುತ್ತೇನೆ. ನಿಮಗೆ ನೀಡಿದ ಭರವಸೆಗಳನ್ನು ಈಡೇರಿಸಿದ್ದರೆ ಮುಂದಿನ ಬಾರಿ ನನ್ನ ಜೊತೆ ನಿಲ್ಲಿ ಎಂದು ಹೇಳಬೇಕೆಂಬ ಕನಸು ಹೊಂದಿದ್ದೇನೆ.

8. ಬಿಜೆಪಿ ಜನರ ಭಾವನೆಗಳ ಮೇಲೆ ರಾಜಕಾರಣ ಮಾಡುತ್ತೆ ಎಂಬುದು ಕಾಂಗ್ರೆಸ್‌ನ ಆರೋಪ. ಈ ಬಾರಿ ಬ್ಯಾಟರಾಯನಪುರದಲ್ಲಿ ಬಿಜೆಪಿಯನ್ನು ಜನ ಏಕೆ ಗೆಲ್ಲಿಸಬೇಕು?

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಈ ವೇಳೆ ಬ್ಯಾಟರಾಯನಪುರಕ್ಕೆ ಬಿಜೆಪಿ ಬೇಕಾ? ಬೇಡ್ವಾ? ಈಗಾಗಲೇ 15 ವರ್ಷ ಒಬ್ಬರಿಗೆ ಕೊಟ್ಟಿದ್ದೀರಾ. ಒಂದು ಸಾರಿ ಬದಲಾವಣೆ ಮಾಡಿ ನೋಡಿ.

ಆ ಬದಲಾವಣೆಯಲ್ಲಿ ಅಭಿವೃದ್ಧಿ ಕಾಣಲಿಲ್ಲ ಎಂದರೆ ಮತ್ತೆ ಬದಲಾವಣೆ ಮಾಡಿ. ಕೆಲಸ ಮಾಡಲಿಲ್ಲ ಅಂದ್ರೆ ಮನೆಗೆ ಕಳುಹಿಸುವ ಅಧಿಕಾರ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಪ್ರಜೆಗೂ ಇದೆ. ಆ ಧೈರ್ಯವನ್ನು, ಗಟ್ಟಿತನವನ್ನು ಬ್ಯಾಟರಾಯನಪುರ ಜನರು ತೋರಿಸಬೇಕು. ಅದನ್ನು ತೋರಿಸ್ತಾರೆ ಕೂಡ. ಬ್ಯಾಟರಾಯನಪುರ ಅಭಿವೃದ್ಧಿಯಾಗಬೇಕಾದರೆ ಬಿಜೆಪಿ ಜೊತೆ ನಿಲ್ಲಬೇಕು ಎಂದು ಜನಕ್ಕೆ ಗೊತ್ತಾಗಿದೆ. ಈ ಬಾರಿ ಬದಲಾವಣೆ ಆಗೇ ಆಗುತ್ತದೆ.

9. 40% ಕಮಿಷನ್‌, ಮತದಾರರ ಮಾಹಿತಿ ಕಳವು ಸೇರಿ ವಿವಿಧ ಆರೋಪಗಳನ್ನು ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್‌ ಮಾಡುತ್ತಲೇ ಬಂದಿದೆ. ಈ ಅಂಶಗಳು ಚುನಾವಣೆಯಲ್ಲಿ ಬಿಜೆಪಿ ಮೇಲೆ ಪರಿಣಾಮ ಬೀರಲ್ವಾ?

ಪ್ರಧಾನಿ ಮೋದಿ ಅವರ ಮೇಲೆ ಕಾಂಗ್ರೆಸ್‌ ದೊಡ್ಡ ದೊಡ್ಡ ಆರೋಪಗಳನ್ನು ಮಾಡಿರುವುದನ್ನು ನೋಡಿದ್ದೇವೆ. ಕರ್ನಾಟಕದಲ್ಲಿಯೂ ನಿರಂತರವಾಗಿ ಆರೋಪ ಮಾಡುತ್ತಾ ಬಂದಿದೆ. ಡಿಕೆ ಶಿವಕುಮಾರ್‌, ಸಿದ್ದರಾಮಯ್ಯ ಸೇರಿ ನಮ್ಮ ಶಾಸಕರು ಕೂಡಾ ಬಹಳಷ್ಟು ಆರೋಪ ಮಾಡುತ್ತಿದ್ದಾರೆ.

ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದೇ ವಿಧಾನಸೌಧದಲ್ಲಿ ದೊಡ್ಡ ದೊಡ್ಡ ಮಾತುಗಳನ್ನು ಆಡುವ ನಮ್ಮ ಶಾಸಕರ ನಡವಳಿಕೆ ಏನಿದೆ. ಅದೇ ನಡವಳಿಕೆಯನ್ನು ಕಾಂಗ್ರೆಸ್‌ ಕೂಡ ತೋರಿಸುತ್ತಿದೆ.

ಕಮಿಷನ್‌ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯ ಅವರು ತಮ್ಮ ಆರೋಪಗಳಿಗೆ ಸಾಕ್ಷಿ ನೀಡಲಾಗದೇ ಜೈಲು ಸೇರಿರುವುದನ್ನು ನಾವು ನೋಡಿದ್ದೇವೆ. ವಿರೋಧ ಪಕ್ಷಗಳ ಆರೋಪಕ್ಕೆ ನಾವು ಉತ್ತರ ಕೊಡಬೇಕಾದ ಅವಶ್ಯಕತೆ ಇಲ್ಲ.

ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಆಡಳಿತದಲ್ಲಿ ಈ ರಾಜ್ಯದಲ್ಲಿ ತುಂಬಾ ಉತ್ತಮವಾದ ಕೆಲಸಗಳು ಆಗಿವೆ. ಕೋವಿಡ್‌ನಂತಹ ದೊಡ್ಡ ಪರಿಸ್ಥಿತಿಯನ್ನು ಉತ್ತಮವಾಗಿ ಎದುರಿಸಿದ್ದಾರೆ. ನಾಯಕತ್ವವೇ ಇಲ್ಲದ ಕಾಂಗ್ರೆಸ್‌ ಆರೋಪಗಳಲ್ಲಿ ಸತ್ವ ಇಲ್ಲ ಎನ್ನುವುದು ಅಭಿಪ್ರಾಯ.

10. ಚರಂಡಿ, ರಸ್ತೆ ಗುಂಡಿಗಳ ವಿಚಾರವನ್ನು ಬಿಟ್ಟು ಲವ್‌ ಜಿಹಾದ್‌ ಬಗ್ಗೆ ಮಾತನಾಡಿ ಎಂದು ನಿಮ್ಮ ರಾಜ್ಯಾಧ್ಯಕ್ಷರಾದ ನಳಿನ್‌ ಕುಮಾರ್‌ ಕಟೀಲ್‌ ಹೇಳಿಕೆ ನೀಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ?

ಎರಡು ಮುಖ್ಯವಾದ ವಿಚಾರಗಳೇ, ನಮ್ಮ ಮೂಲಸೌಕರ್ಯಗಳನ್ನು ಸರಿಮಾಡಿಕೊಳ್ಳಬೇಕು ಎನ್ನುವುದರ ಜೊತೆಗೆ ನಮ್ಮ ಧರ್ಮದ ರಕ್ಷಣೆಯೂ ಬಹಳ ಮುಖ್ಯವಾದ ಅಂಶಗಳು. ನಮ್ಮ ಸಂಸ್ಕೃತಿಯ ಮೇಲೆ ಆಗುತ್ತಿರುವ ದಾಳಿಯನ್ನು ತಡೆಯಬೇಕಾಗಿರುವುದು ಮುಖ್ಯ. ಸಂಸ್ಕಾರ ಇಲ್ಲದಿದ್ದರೆ ಸಮಾಜವನ್ನು ಕಟ್ಟುವುದು ಸಾಧ್ಯವಿಲ್ಲ. ಆದ್ದರಿಂದ ಸಂಸ್ಕೃತಿ ಉಳಿಸುವ, ಬೆಳೆಸುವ ಕೆಲಸ ಮಾಡಬೇಕು.

11. ಬ್ಯಾಟರಾಯನಪುರ ಬಿಜೆಪಿ ಟಿಕೆಟ್‌ ರೇಸ್‌ನಲ್ಲಿ ನಿಮ್ಮ ಜೊತೆ ಎ ರವಿ ಅವರು, ಮುನೇಂದ್ರ ಕುಮಾರ್‌ ಇದ್ದಾರೆ. ನಿಮ್ಮ ನಿರೀಕ್ಷೆಯಂತೆ ನಿಮಗೆ ಟಿಕೆಟ್‌ ಸಿಗುತ್ತಾ?

ನಾನು ಈ ಕ್ಷೇತ್ರದಲ್ಲಿ ನಿರಂತರವಾಗಿ ಕೆಲಸ ಮಾಡ್ಕೊಂಡು ಬರುತ್ತಿರುವುದರಿಂದ ಪಕ್ಷ ನನ್ನನ್ನು ಗುರುತಿಸಿ, ನನಗೆ ಅವಕಾಶವನ್ನು ಮಾಡಿಕೊಡುತ್ತದೆ ಎಂಬ ನಿರೀಕ್ಷೆ ನನಗಿದೆ. ಪ್ರಜಾಪ್ರಭುತ್ವದಲ್ಲಿ ಯಾರೇ ಅಭ್ಯರ್ಥಿ ಆಗುತ್ತೇನೆ ಎಂದು ಹೇಳುವುದು ತಪ್ಪಲ್ಲ, ಅವರ ಪ್ರಯತ್ನವನ್ನು ಮಾಡಿಯೇ ಮಾಡಬೇಕಾಗುತ್ತದೆ.

ನಮ್ಮ ಕ್ಷೇತ್ರದಲ್ಲಿ ಮೂರು ಜನ ಟಿಕೆಟ್‌ ಕೇಳುತ್ತಾ ಇದ್ದೇವೆ. ಬೇರೆ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಜನ ಟಿಕೆಟ್‌ ಕೇಳುತ್ತಿದ್ದಾರೆ. ಎಲ್ಲ ಪಕ್ಷಗಳಲ್ಲೂ ಟಿಕೆಟ್‌ ಆಕಾಂಕ್ಷಿಗಳು ಇದ್ದೇ ಇರುತ್ತಾರೆ. ಆದರೆ, ಪಕ್ಷ ಯಾರಿಗೆ ಟಿಕೆಟ್‌ ನೀಡುತ್ತದೆಯೋ ಅವರ ಪರವಾಗಿ ಕೆಲಸ ಮಾಡುವ ಮನಸ್ಥಿತಿಯಲ್ಲಿ ಎಲ್ಲ ಆಕಾಂಕ್ಷಿಗಳು ಇದ್ದಾರೆ.

ನಾನು ಕ್ಷೇತ್ರದ ಜನರ ಮಧ್ಯೆ ಕೆಲಸ ಮಾಡುತ್ತಿದ್ದೇನೆ. ಜನಾಭಿಪ್ರಾಯದಲ್ಲಿ ನನಗೆ ಅವಕಾಶ ಕೊಟ್ಟೆ ಕೊಡಬೇಕೆಂಬ ವಾತಾವರಣ ಸೃಷ್ಟಿಯಾಗಿದೆ. ಜನನೂ ಕೂಡ ಈಗಾಗಲೇ ಮಾತನಾಡುತ್ತಿದ್ದಾರೆ. ಪಕ್ಷ ಕೂಡ ಯಾರಿಗೆ ಗೆಲ್ಲುವ ಸಾಮರ್ಥ್ಯ ಇದೆ? ಅವರ ಸಂಘಟನಾ ಸಾಮರ್ಥ್ಯ ಏನು?

ಯಾವ ಐಡಿಯಾಲಜಿ ಹೊಂದಿದ್ದಾರೆ ಎಂಬುದನ್ನು ಕೂಡ ಗಮನಿಸುತ್ತದೆ. ಆರ್‌ಎಸ್‌ಎಸ್‌ನ ಸ್ವಯಂ ಸೇವಕನಾಗಿ, ಎಬಿವಿಪಿಯಲ್ಲಿ 10 ವರ್ಷ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದೇನೆ. ಬಿಜೆಪಿ ಯುವ ಮೋರ್ಚಾದಲ್ಲೂ ಕೆಲಸ ಮಾಡಿ ಪಕ್ಷ ಸಂಘಟಿಸಿದ್ದೇನೆ. ಅದನ್ನು ಗುರುತಿಸಿಯೇ ಸರ್ಕಾರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿತ್ತು.

ಈಗ ಕ್ಷೇತ್ರದಲ್ಲಿ ನನ್ನ ಕೆಲಸಗಳನ್ನು ಗಮನಿಸಿ ಪಕ್ಷ ನನಗೆ ಅವಕಾಶ ಮಾಡಿಕೊಡುತ್ತದೆ ಎಂಬ ವಿಶ್ವಾಸ ಇದೆ. ನನ್ನ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಬೇಕೆಂಬ ಗುರಿ ನನಗೆ ಇದೆ. ಇದಕ್ಕೆ ಪಕ್ಷ ಕೂಡ ಜೊತೆಯಲ್ಲಿ ನಿಲ್ಲುತ್ತೆ ಎಂಬ ವಿಶ್ವಾಸ ಇದೆ.

12. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಬಿಎಸ್‌ ಯಡಿಯೂರಪ್ಪನವರು. ಅವರನ್ನು ಪಕ್ಷ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಮಾತಿದೆ. ಇದರ ಬಗ್ಗೆ ನೀವೇನಂತೀರಿ?

ಬಿಎಸ್ ಯಡಿಯೂರಪ್ಪನವರು ರಾಜಾಹುಲಿ. ಕರ್ನಾಟಕದಲ್ಲಿ ಪಕ್ಷ ಇಷ್ಟರ ಮಟ್ಟಿಗೆ ಬೆಳೆಯುವುದರಲ್ಲಿ ಅವರ ಪಾತ್ರ ಬಹಳ ಮುಖ್ಯ, ಅದನ್ನು ಯಾರು ಕೂಡ ಅಲ್ಲಗಳೆಯುತ್ತಿಲ್ಲ. ಅವರನ್ನು ಕೇಂದ್ರ ಚುನಾವಣಾ ಸಂಸದೀಯ ಮಂಡಳಿ ಸದಸ್ಯರನ್ನಾಗಿ ನೇಮಿಸಿದೆ.

ಅವರನ್ನು ಬಿಟ್ಟು ಪಕ್ಷದ ಯಾವುದೇ ಪ್ರಚಾರ ಕಾರ್ಯಕ್ರಮಗಳು, ಚುನಾವಣಾ ಕೆಲಸಗಳನ್ನು ಮಾಡುತ್ತಿಲ್ಲ. ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಯಡಿಯೂರಪ್ಪನವರು, ಬೊಮ್ಮಾಯಿ, ನಳಿನ್‌ ಕುಮಾರ್‌ ಕಟೀಲ್‌, ಬಿವೈ ವಿಜಯೇಂದ್ರ ಅವರು ಒಟ್ಟುಗೂಡಿ ಇಡೀ ರಾಜ್ಯವನ್ನು ಪ್ರವಾಸ ಮಾಡುತ್ತಿದ್ದಾರೆ.

13. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಕೂಡ ಬಿಜೆಪಿ ಬಿಎಸ್‌ವೈ ಕುಟುಂಬವನ್ನು ಸರಿಯಾಗಿ ನಡೆಸಿಕೊಳ್ತಿಲ್ಲ ಎಂಬ ಆರೋಪ ಮಾಡಿದ್ದಾರೆ. ಏನ್‌ ಹೇಳ್ತೀರಿ?

ಜನಾರ್ದನ ರೆಡ್ಡಿ ಅವರು ಬಿಜೆಪಿಯಲ್ಲೇ ಇದ್ದು ಈ ಆರೋಪ ಮಾಡಿದ್ದರೆ ಇರಬಹುದಿತ್ತೇನೋ ಎಂದು ಹೇಳಬಹುದಿತ್ತು. ಹೊಸ ಪಕ್ಷ ಸ್ಥಾಪನೆ ಮಾಡಿದ ಬಳಿಕ ಯಡಿಯೂರಪ್ಪನವರಿಗೆ ಬಿಜೆಪಿಯಲ್ಲಿ ಅವಕಾಶ ಸಿಗ್ತಿಲ್ಲ ಎಂದು ಹೇಳುವುದು ತಪ್ಪು.

ಯಡಿಯೂರಪ್ಪನವರ ಶಕ್ತಿ, ಸಾಮರ್ಥ್ಯ ಏನು ಅಂತಾ ಬಿಜೆಪಿಯ ಎಲ್ಲ ನಾಯಕರಿಗೆ ಗೊತ್ತಿದೆ. ಅವರು ಕರ್ನಾಟಕದ ಮೇರು ನಾಯಕರು, ಈಗ ದೇಶದ ನಾಯಕರು. ಇಂತಹ ಸಂದರ್ಭದಲ್ಲಿ ಅವರನ್ನು ಸರಿಯಾಗಿ ನಡೆಸಿಕೊಳ್ತಿಲ್ಲ ಎಂಬ ಪ್ರಶ್ನೆಯೇ ಬರಲ್ಲ.

14. ಬಿಎಸ್‌ ಯಡಿಯೂರಪ್ಪ ಅವರ ಅಭಿಮಾನಿ ಅನ್ನೋದು ನಿಮಗೆ ಟಿಕೆಟ್‌ ಸಿಗುವುದಕ್ಕೆ ಪ್ಲಸ್‌ ಆಗುತ್ತಾ? ಈಗಿನ ಸನ್ನಿವೇಶದಲ್ಲಿ ಮೈನಸ್‌ ಆಗುತ್ತಾ?

ಬಿಎಸ್‌ ಯಡಿಯೂರಪ್ಪನವರು ನಮ್ಮ ಪರಮೋಚ್ಛ ನಾಯಕರು. ಬಿವೈ ವಿಜಯೇಂದ್ರ ಅವರು ನಮ್ಮ ನಾಯಕರು. ಅದರಲ್ಲಿ ಎರಡು ಮಾತಿಲ್ಲ. ಆದರೆ, ಇದರ ನಡುವೆ ನಾನು ಆರ್‌ಎಸ್‌ಎಸ್‌ನ ಸ್ವಯಂ ಸೇವಕ, ಎಬಿವಿಪಿಯಲ್ಲಿ, ಬಿಜೆಪಿ ಯುವ ಮೋರ್ಚಾದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ.

ಸಂಘ ಪರಿವಾರದ ಹಿನ್ನೆಲೆ, ಪಕ್ಷದಲ್ಲಿನ ಕೆಲಸ, ಕ್ಷೇತ್ರದಲ್ಲಿನ ಕೆಲಸದ ಜೊತೆಗೆ ನಮ್ಮ ನಾಯಕರ ಆಶೀರ್ವಾದನೂ ಇರುವ ಕಾರಣಕ್ಕೆ ನನಗೆ ಯಾವುದೇ ಭಯವಿಲ್ಲ. ನನಗೆ ಅವಕಾಶ ಸಿಗುತ್ತದೆ ಎಂಬ ವಿಶ್ವಾಸ ಇದೆ.

15. ಬಿಜೆಪಿ ಸರ್ಕಾರದ ಮೇಲೆ 40% ಆರೋಪ ಕೇಳಿಬರುತ್ತಿದೆ. ಈ ವೇಳೆ ಉದ್ಯಮಿ ಪ್ರದೀಪ್‌ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಶಾಸಕ ಅರವಿಂದ್‌ ಲಿಂಬಾವಳಿ ಹೆಸರು ಕೇಳಿಬಂದಿದೆ. ಇದು ಬಿಜೆಪಿಯನ್ನು ಹಣಿಯಲು ಕಾಂಗ್ರೆಸ್‌ಗೆ ಅಸ್ತ್ರವಾಯ್ತಾ?

ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಡಿವೈಎಸ್‌ಪಿ ಗಣಪತಿ, ಐಎಎಸ್‌ ಅಧಿಕಾರಿ ಡಿಕೆ ರವಿ ಅವರ ಆತ್ಮಹತ್ಯೆ ಪ್ರಕರಣ ನೋಡಿದ್ದೇವೆ. ಯಾರೋ ಯಾರದ್ದೋ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಮಾತ್ರಕ್ಕೆ ಅವರು ಅಪರಾಧಿ ಆಗಲ್ಲ. ತನಿಖೆಯಾಗಬೇಕು.

ತನಿಖೆಗೂ ಮುಂಚೆನೇ ಆರೋಪಗಳನ್ನು ಪುಷ್ಠೀಕರಿಸಲು ಸಾಧ್ಯವಿಲ್ಲ. ಆರೋಪ ಮಾಡುವುದು ಸುಲಭ, ಅದನ್ನು ರುಜುವಾತು ಮಾಡುವುದು ಬಹಳ ಕಷ್ಟ. ಡಿಕೆ ಶಿವಕುಮಾರ್‌, ಸಿದ್ದರಾಮಯ್ಯಗೆ ಬಿಜೆಪಿ ವಿರುದ್ಧ ಆರೋಪಗಳೇ ಅಸ್ತ್ರವಾಗಿವೆ.

ಏನು ಮಾಡಿದರೂ ಕಾಂಗ್ರೆಸ್‌ ಟೇಕ್‌ಆಫ್‌ ಆಗ್ತಿಲ್ಲ ಎಂದು ಇಬ್ಬರು ನಾಯಕರು ಭ್ರಮನಿರಸನಗೊಳಗಾಗಿದ್ದಾರೆ. ಇಬ್ಬರ ನಡುವೆ ಸಹಮತವಿಲ್ಲ. ಇವರ ಆರೋಪಗಳಿಗೆ ಉತ್ತರ ಕೊಡುವ ಅವಶ್ಯಕತೆಯಿಲ್ಲ.

16. ಬೆಟರ್‌ ಬ್ಯಾಟರಾಯನಪುರ ಮಾಡಲು ನಿಮ್ಮ ರೂಪುರೇಷೆ ಏನು?

ಒಂದು ಟಾಸ್ಕ್‌ಫೋರ್ಸ್‌ ಮಾಡಿ ಪ್ರತಿ ವಾರ್ಡ್‌ನ ಜನರು, ನಿವೃತ್ತ ಅಧಿಕಾರಿಗಳು, ವಕೀಲರು, ವೈದ್ಯರು, ಉದ್ಯೋಗಿಗಳನ್ನು ಅದರಲ್ಲಿ ಸೇರಿಸಿ ಅಲ್ಲಿನ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಪರಿಹಾರ ಹುಡುಕುವುದು. ಇದು ವಾರ್ಡ್‌ ಮಟ್ಟದಲ್ಲಿ ಹಾಗೂ ಕ್ಷೇತ್ರ ಮಟ್ಟದಲ್ಲಿ ಅಭಿವೃದ್ಧಿಯ ನೀಲ ನಕ್ಷೆ ತಯಾರಿಸಿ ಯೋಜನೆಯನ್ನು ಕಾರ್ಯಗತಗೊಳಿಸುವ ಬಗ್ಗೆ ಯೋಚನೆ ಮಾಡುತ್ತೇವೆ.

ಮುಂದಿನ 25 ವರ್ಷಗಳನ್ನು ಗುರಿಯಾಗಿಟ್ಟುಕೊಂಡು ಬ್ಯಾಟರಾಯನಪುರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು. ಶಾಲೆಯಲ್ಲಿ ಕನ್ನಡದ ಜೊತೆ ಆಂಗ್ಲ ಮಾಧ್ಯವವನ್ನು ಕಲಿಸುವುದು, ಗುಣಮಟ್ಟದ ಶಿಕ್ಷಣ ನೀಡುವುದು ಹಾಗೂ ಶಿಕ್ಷಣದ ಜೊತೆ ಪಠ್ಯೇತರ ಕೌಶಲ್ಯ ಕಲಿಸಬೇಕು.

ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರುವುದು ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ಉತ್ತಮ ವೇದಿಕೆ ನೀಡುವ ಬಗ್ಗೆ, ಸ್ಥಳೀಯರಿಗೆ ಸ್ಥಳೀಯ ಮಟ್ಟದಲ್ಲಿ ಕೆಲಸ ಸಿಗಲು ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಕೆಲಸ ಮಾಡುವ ಕುರಿತು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ.

17. ಬಿಜೆಪಿ ಟಿಕೆಟ್‌ ನೀಡದಿದ್ದರೆ ತಮ್ಮೇಶ್‌ಗೌಡರು ಸ್ವತಂತ್ರವಾಗಿ ಸ್ಪರ್ಧಿಸ್ತಾರಾ?

ಟಿಕೆಟ್‌ ನೀಡದಿದ್ದರೆ ಎಂಬ ಪ್ರಶ್ನೆಯೇ ಬರುವುದಿಲ್ಲ. ನನ್ನ ಪಕ್ಷ ಹಾಗೂ ಎಲ್ಲ ನಾಯಕರು ನನ್ನ ಕೈ ಹಿಡಿದೆ ಹಿಡಿಯುತ್ತಾರೆ ಎಂಬ ವಿಶ್ವಾಸ ನನಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+