ಪತ್ರಕರ್ತರ ಹೆಸರಿನಲ್ಲಿ ಜೆಡಿಎಸ್ ನಾಯಕರಿಗೆ ಗುಪ್ತದಳ ಅಧಿಕಾರಿಗಳ ಕರೆ!
ಬೆಂಗಳೂರು, ಆಗಸ್ಟ್ 28 : ಕರ್ನಾಟಕದಲ್ಲಿ ಶಾಸಕರ ಫೋನ್ ಟ್ಯಾಪಿಂಗ್ ವಿಚಾರ ಭಾರಿ ಸದ್ದು ಮಾಡಿತ್ತು. ಸರ್ಕಾರ ಈ ಕುರಿತು ಸಿಬಿಐ ತನಿಖೆಗೆ ಆದೇಶ ನೀಡಿತ್ತು. ಈಗ ಪತ್ರಕರ್ತರ ಹೆಸರಿನಲ್ಲಿ ಜೆಡಿಎಸ್ ನಾಯಕರಿಗೆ ಗುಪ್ತಚರ ಇಲಾಖೆ ಅಧಿಕಾರಿಗಳ ಕರೆ ಬಂದಿದೆ.
ಬುಧವಾರ ಜೆಡಿಎಸ್ ವಕ್ತಾರ ರಮೇಶ್ ಬಾಬು ಈ ಕುರಿತು ಗಂಭೀರ ಆರೋಪ ಮಾಡಿದರು. "ಬಿಜೆಪಿ ಸರ್ಕಾರದಲ್ಲಿಯೂ ಟೆಲಿಫೋನ್ ಕದ್ದಾಲಿಕೆ ಆಗುತ್ತಿದೆ" ಎಂದು ದೂರಿದರು.
"ಗುಪ್ತಚರ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಜೆಡಿಎಸ್ ಹಾಗೂ ಪ್ರತಿಪಕ್ಷ ನಾಯಕರ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ. ಪತ್ರಕರ್ತರ ಹೆಸರಿನಲ್ಲಿ ನನಗೂ ಫೋನ್ ಕರೆ ಬಂದಿತ್ತು" ಎಂದು ಆರೋಪಿಸಿದರು.

"ನನಗೂ ಅನಾಮಿಕರೊಬ್ಬರು ಪತ್ರಕರ್ತರ ಹೆಸರಿನಲ್ಲಿ ಕರೆ ಮಾಡಿದ್ದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ಮೇಲೆ ದೇವೇಗೌಡರ ಅಭಿಪ್ರಾಯ ಏನು ಅಂತ ಒತ್ತಾಯ ಮಾಡಿ ಕೇಳಿದರು. ಅದನ್ನು ಅವರ ಬಳಿಯೇ ಕೇಳಿ ಅಂತ ಹೇಳಿದೆ" ಎಂದರು.
"ನನಗೆ ಅನುಮಾನ ಬಂದು ಕರೆ ಬಂದ ಸಂಖ್ಯೆ ಪರಿಶೀಲಿಸಿದಾಗ ಅದು ಗುಪ್ತಚರ ಇಲಾಖೆಯವರದ್ದು ಎಂದು ತಿಳಿಯಿತು. ಪತ್ರಕರ್ತರ ಹೆಸರಿನಲ್ಲಿ ಇವರು ಯಾಕೆ ಕರೆ ಮಾಡಬೇಕು. ಪ್ರತಿಪಕ್ಷದವರನ್ನು ಮಣಿಸಲು ಗುಪ್ತಚರ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿದ್ದಾರೆ" ಎಂದು ಆರೋಪಿಸಿದರು.
"ಪತ್ರಕರ್ತರ ಹೆಸರಿನಲ್ಲಿ ನನಗೆ ಬಂದ ಕರೆ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ತನಿಖೆಗಾಗಿ ಆಗ್ರಹಿಸಿದ್ದೇನೆ" ಎಂದು ರಮೇಶ್ ಬಾಬು ಹೇಳಿದರು.












Click it and Unblock the Notifications