New Railway Projects: ಬೆಂಗಳೂರು-ಉತ್ತರ ಕರ್ನಾಟಕ ರೈಲ್ವೆ ಯೋಜನೆಗಳ ಅಪ್ಡೇಟ್ ಮಾಹಿತಿ
ಬೆಂಗಳೂರು, ಆಗಸ್ಟ್ 27: ರೈಲ್ವೆ ಜತೆ ವೆಚ್ಚ ಹಂಚಿಕೆ ಆಧಾರದಲ್ಲಿ ಕೈಗೊಂಡಿರುವ ರಾಜ್ಯದ ಗದಗ- ವಾಡಿ, ಧಾರವಾಡ-ಬೆಳಗಾವಿ, ತುಮಕೂರು- ದಾವಣಗೆರೆ, ತುಮಕೂರು-ರಾಯದುರ್ಗ ಸೇರಿದಂತೆ ಹಲವಾರು ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿರುವ ರಾಜ್ಯದ ಮೂಲಸೌಕರ್ಯಾಭಿವೃದ್ಧಿ ಸಚಿವರು ಮಹತ್ವದ ಅಪ್ಡೇಟ್ ಕೊಟ್ಟಿದ್ದಾರೆ.
ರಾಜ್ಯದ ವಿವಿಧ ರೈಲ್ವೆ ಯೋಜನೆಗಳ ಭೂಸ್ವಾಧೀನ ಅಡೆತಡೆ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರ ನೀಡಬೇಕು. ಯೋಜನೆಗಳ ತ್ವರಿತ ಕಾಮಗಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಗತಿ ಪರಿಶೀಲನೆ ಸಭೆಯಲ್ಲಿಯಲ್ಲಿ ಸಚಿವರು ಸೂಚನೆ ನೀಡಿದ್ದಾರೆ.

ಸಭೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ದಾವಣಗೆರೆ, ಕಲ್ಬುರ್ಗಿ ಮತ್ತು ಹಾವೇರಿ ಜಿಲ್ಲಾಧಿಕಾರಿಗಳು, ಕೃಷ್ಣಾ ಭಾಗ್ಯ ಜಲನಿಗಮದ ಉನ್ನತಾಧಿಕಾರಿಗಳನ್ನು ದೂರವಾಣಿ ಮೂಲಕ ಸಚಿವರು ಸಂಪರ್ಕಿಇಸಿ ಮಾಹಿತಿ ಪಡೆದಿದ್ದಾರೆ. ಈ ಅಧಿಕಾರಿಗಳು ತಮ್ಮ ಜಿಲ್ಲೆಯಲ್ಲಿ ಹಾದು ಹೋಗುವ ರೈಲ್ವೆ ಯೋಜನೆಗಳಿಗೆ ತೊಡಕಾಗಿರುವ ಸಮಸ್ಯೆಗಳನ್ನು ಕ್ಷಿಪ್ರವಾಗಿ ಬಗೆಹರಿಸಿ, ಸಹಕರಿಸುವಂತೆ ತಿಳಿಸಿದರು.
ಬೆಂಗಳೂರು- ವಿಜಯಪುರ ನಡುವೆ 10 ಗಂಟೆ ಪಯಣ
ಗದಗ- ಹುಟಗಿ ನಡುವೆ 242 ಕಿ.ಮೀ. ನಡುವಿನ ಜೋಡಿ ಹಳಿ ಅಭಿವೃದ್ಧಿ ಕಾರ್ಯ ಬಹುತೇಕ ಮುಗಿದಿದೆ. ಆದರೆ, ಬಾಗಲಕೋಟೆ- ವಂಡಾಲ್ ನಡುವೆ 45 ಕಿ.ಮೀ ಜೋಡಿ ರೈಲು ಕಾಮಗಾರಿ ಬಾಕಿ ಇದೆ. ಈ ಕಾಮಗಾರಿ ಡಿಸೆಂಬರ್ ವೇಳೆಗೆ ಮುಗಿಯಬೇಕು. ವಿಳಂಬ ಅಂದರೂ ಮಾರ್ಚ್ ಹೊತ್ತಿಗೆ ಮುಗಿಯಲಿದೆ ಎಂದರು.
ಇನ್ನೂ ಆಲಮಟ್ಟಿ ಪ್ರದೇಶದಲ್ಲಿ ಕೂಡ ಕೆಲವು ಕಿರು ಸೇತುವೆಗಳ ನಿರ್ಮಾಣ ಬಾಕಿ ಇದೆ. ಇದರಿಂದಾಗಿ ಬೆಂಗಳೂರು- ವಿಜಯಪುರ ರೈಲು ಪಯಣಕ್ಕೆ ಈಗ 14-15 ಗಂಟೆ ಹಿಡಿಯುತ್ತಿದೆ. ಈ ಸಮಸ್ಯೆಯಿಂದಾಗಿ ವಂದೇ ಭಾರತ್ ಎಕ್ಸ್ ಪ್ರೆಸ್ ಸೇವೆ ಆರಂಭಕ್ಕೂ ವಿಘ್ನ ಎದುರಾಗಿದೆ. ಇದನ್ನು ಸರಿಪಡಿಸಿದರೆ ಬೆಂಗಳೂರು- ವಿಜಯಪುರ ಪಯಣ 10-11 ಗಂಟೆಗಳಿಗೆ ಇಳಿಯಲಿದೆ. ಈ ನಿಟ್ಟಿನಲ್ಲಿ ತ್ವರಿತವಾಗಿ ಕಾಮಗಾರಿ ಮುಗಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಹುಬ್ಬಳ್ಳಿ ಬೈಪಾಸ್ ಮೂಲಕ ಸಂಚರಿಸಲಿ
ಸದ್ಯ ಬೆಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ಬರುತ್ತಿರುವ ಗೂಡ್ಸ್ ರೈಲುಗಳು ಹುಬ್ಬಳ್ಳಿ ದಕ್ಷಿಣ ನಿಲ್ದಾಣದ ಸಮೀಪದ ಬೈಪಾಸ್ ಮೂಲಕ ಗದಗದ ಕಡೆಗೆ ತೆರಳುತ್ತಿವೆ. ಅಲ್ಲೂ ಸಹ ಗದಗ ಮುಖ್ಯ ನಿಲ್ದಾಣಕ್ಕೆ ಹೋಗದೆ ಬೈಪಾಸ್ ನಲ್ಲೇ ವಿಜಯಪುರ, ಸೊಲ್ಲಾಪುರದ ಕಡೆಗೆ ಹೋಗುತ್ತಿವೆ. ಹುಬ್ಬಳ್ಳಿ ದಕ್ಷಿಣ ರೈಲು ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆ ಇರುವುದರಿಂದ ಪ್ರಯಾಣಿಕ ರೈಲುಗಳು ಈಗ ಹುಬ್ಬಳ್ಳಿ ಮುಖ್ಯ ನಿಲ್ದಾಣಕ್ಕೆ ಹೋಗಿ, ಎಂಜಿನ್ ಬದಲಿಸಿಕೊಂಡು ಬರುತ್ತಿವೆ. ಇದರಿಂದಾಗಿ ಗಂಟೆಗಟ್ಟಲೆ ಸಮಯ ವ್ಯರ್ಥವಾಗುತ್ತಿವೆ.
ಆದ್ದರಿಂದ ನೈರುತ್ಯ ರೈಲ್ವೆಯು ಹುಬ್ಬಳ್ಳಿ ದಕ್ಷಿಣ ನಿಲ್ದಾಣವನ್ನು ಪ್ರಯಾಣಿಕ ಸ್ನೇಹಿಯಾಗಿ ಆದಷ್ಟು ಬೇಗ ಅಭಿವೃದ್ಧಿಪಡಿಸಿ, ವಿಜಯಪುರ ಕಡೆ ಹೋಗುವ ರೈಲುಗಳನ್ನು ಅಲ್ಲಿಂದಲೇ ಗದಗದ ಕಡೆ ತಿರುಗಿಸುವ ಕೆಲಸ ಆಗಬೇಕು. ಅದೇ ರೀತಿ ಗದಗದಲ್ಲಿಯೂ ಬೈಪಾಸ್ ಮೂಲಕ ವಿಜಯಪುರದ ಕಡೆಗೆ ಹೋಗುವ ಹಾಗೆ ಆಗಬೇಕು. ಇದರಿಂದ ಸಾಕಷ್ಟು ಸಮಯವನ್ನು ಉಳಿಸಬಹುದು ಎಂದು ಸಚಿವರು ರೈಲ್ವೆ ಅಧಿಕಾರಿಗಳ ಗಮನ ಸೆಳೆದರು.
ರೈಲ್ವೆ ಸಚಿವರ ಜೊತೆಗೆ ಶೀಘ್ರವೇ ಚರ್ಚೆ: ಸಚಿವರ ಭರವಸೆ
ಇದಕ್ಕೆ ಸಕಾರಾತ್ಮಕ ಸ್ಪಂದಿಸಿದ ಸಚಿವರು ತಮ್ಮ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ, ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಆದಷ್ಟು ಶೀಘ್ರವೇ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರೊಂದಿಗೆ ಸಭೆ ನಡೆಸಲಾಗುವುದು ಎಂದರು.
ಉತ್ತರ ಕರ್ನಾಟಕದ ಗದಗ-ವಾಡಿ ಯೋಜನೆಯಲ್ಲಿ ಶಹಾಪುರ-ಬಿರಾಲ್ ಬುಜೂರು ಬಳಿ ಇರುವ ಹಳಕಟ್ಟಾ ಬಳಿ 11 ಎಕರೆ ಭೂಸ್ವಾಧೀನದ ಸಮಸ್ಯೆ ಎದುರಾಗಿದೆ. ಇದರಿಂದಾಗಿ 26 ಕಿ.ಮೀ. ಕಾಮಗಾರಿ ನಿಂತಿದೆ. ಹಿಂದೆಯೇ ಕಲಬುರಗಿ ಜಿಲ್ಲಾಧಿಕಾರಿಗೆ ಇದನ್ನು ಗಮನಕ್ಕೆ ತರಲಾಗಿತ್ತು. ಆದರೂ ಸಮಸ್ಯೆ ಹಾಗೆಯೇ ಇದೆ. ಈ ಕಾಮಗಾರಿಯನ್ನು 2025ರ ಜೂನ್ ಒಳಗೆ ಮುಗಿಸಬೇಕು ಎಂದು ಸಚಿವರು ಹೇಳಿದರು.
ಇದರೊಂದಿಗೆ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಭೂಸ್ವಾಧೀನಕ್ಕೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಮನದಟ್ಟು ಮಾಡಿಕೊಟ್ಟರು.
ಗದಗ-ವಾಡಿ ಯೋಜನೆ 2028ರೊಳಗೆ, ಬಾಗಲಕೋಟೆ-ಕುಡಚಿ ಯೋಜನೆ 2026ರ ಡಿಸೆಂಬರ್ ಹೊತ್ತಿಗೆ ಪೂರ್ಣವಾಗಬೇಕು. ತುಮಕೂರು- ದಾವಣಗೆರೆ ಯೋಜನೆಯಲ್ಲಿ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ 300 ಎಕರೆ ಕೊಡಬೇಕಾಗಿದೆ. ಜತೆಗೆ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಗ್ಯಾಸ್ ಪೈಪ್ ಲೈನ್, ವಿದ್ಯುತ್ ಕಂಬಗಳು ಎಲ್ಲವನ್ನೂ ಬದಲಿಸಬೇಕಾಗಿದೆ ಎಂದು ಅವರು ಮಾಹಿತಿ ನೀಡಿದರು.
ವಿವಿಧ ರೈಲು ಯೋಜನೆಗಳ ಪೂರ್ಣಕ್ಕೆ ಸೂಚನೆ
ಗಿಣಿಗೇರಾ-ರಾಯಚೂರು ಯೋಜನೆ 2027ರ ಫೆಬ್ರವರಿ ಹೊತ್ತಿಗೆ ಸಂಪೂರ್ಣವಾಗಬೇಕು. ತುಮಕೂರು- ರಾಯದುರ್ಗ ಯೋಜನೆಗೆ ಈಗ ವೇಗ ಬಂದಿದೆ. ಕೊರಟಗರೆ- ಮಧುಗಿರಿ ನಡುವಿನ ಕಾಮಗಾರಿಗೆ ಈ ತಿಂಗಳಲ್ಲಿ ಟೆಂಡರ್ ಕರೆಯಲಾಗಿದೆ. ಮಧುಗಿರಿ-ಮಡಕಶಿರಾ ನಡುವಿನ ಕಾಮಗಾರಿಗೆ ಸೆಪ್ಟಂಬರಿನಲ್ಲಿ ಟೆಂಡರ್ ಕರೆಯಲಾಗುವುದು. ತುಮಕೂರು- ಕೊರಟಗೆರೆ ನಡುವಿನ 29 ಕಿ.ಮೀ. ಕಾಮಗಾರಿಗೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಇದು ಅಂತಾರಾಜ್ಯ ಯೋಜನೆಯಾಗಿದ್ದು, 2027ರ ಜನವರಿಗೆ ಮುಕ್ತಾಯವಾಗಬೇಕು.
ಇನ್ನೂ ಮಧುಗಿರಿ-ಮಡಕಶಿರಾ ನಡುವೆ 63 ಎಕರೆ, ಕೊರಟಗೆರೆ-ಮಧುಗಿರಿ ಮಧ್ಯೆ 43 ಎಕರೆ ಮಾತ್ರ ಭೂಸ್ವಾಧೀನ ಬಾಕಿ ಇದೆ. ಆದ್ದರಿಂದ ಕಾಮಗಾರಿ ಚುರುಕಾಗಿ ನಡೆಯಬೇಕು ಎಂದು ಸಚಿವರು ನಿರ್ದೇಶಿಸಿದರು.












Click it and Unblock the Notifications