ದೇಶದಲ್ಲಿ ಹಿಂದೂ- ಮುಸ್ಲಿಂ ಪ್ರತ್ಯೇಕವಾಗಿಸುವ ಪ್ರಯತ್ನ ಎಂದ ಬಿಜೆಪಿ ಪ್ರಭಾವಿ ನಾಯಕ
ಕಾಂಗ್ರೆಸ್‌ನವರಿಗೆ ವೀರ ಸಾವರ್ಕರ್ ಅವರನ್ನು ಬೈಯ್ಯದೇ ಇದ್ದರೆ ಸಮಾಧಾನವೇ ಆಗಲ್ಲ ಅನಿಸುತ್ತೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್ ಹೇಳಿದ್ದಾರೆ. ವೀರ ಸಾವರ್ಕರ್ ಬಗ್ಗೆ ಸಚಿವ ದಿನೇಶ ಗುಂಡೂರಾವ್ ವಿವಾದಾತ್ಮಕ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ವೀರ ಸಾವರ್ಕರ್ ಅವರು ಬ್ರಿಟಿಷರ ವಿರುದ್ಧ ದಿಟ್ಟ ಹೋರಾಟ ಮಾಡಿದವರು. ಅವರು ಪ್ರಬಲ ಹಿಂದುತ್ವವಾದಿಯಾಗಿದ್ದರು. ಅವರಿಗೆ ವಿಧಿಸಿದ್ದ ಶಿಕ್ಷೆ ಸೋ ಕಾಲ್ಡ್ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರಿಗೂ ನೀಡಿಲ್ಲ ಎಂದಿದ್ದಾರೆ.
ಕಾಂಗ್ರೆಸ್ಸಿನವರು ಕೇವಲ ಅಲ್ಪಸಂಖ್ಯಾತರ ಓಲೈಕೆ ಮಾಡುವ ಉದ್ದೇಶದಿಂದ ವೀರ ಸಾವರ್ಕರ್ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ಈ ಕಾಂಗ್ರೆಸ್‌ನವರು ಟೀಕೆ ಮಾಡುವುದರಿಂದ ಅಲ್ಪಸಂಖ್ಯಾತರ ಮತ ಬರುತ್ತವೆ ಎನ್ನುವುದು ಇವರ ನಿರೀಕ್ಷೆ. ಈ ರೀತಿ ಪದೇ ಪದೇ ಸಾವರ್ಕರ್ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡುವುದು ಅಕ್ಷಮ್ಯ ಅಪರಾಧ. ನಾನು ಕಾಂಗ್ರೆಸ್‌ನವರ ವರ್ತನೆಯನ್ನು ಖಂಡಿಸುತ್ತೇನೆ. ಕಾಂಗ್ರೆಸ್ಸಿನವರು ಇದೇ ರೀತಿ ಮಾತನಾಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಜನರೇ ಆಕ್ರೋಶಿತರಾಗಲಿದ್ದಾರೆ. ನಿಮ್ಮನ್ನ ಎಲ್ಲಿ (ಕಾಂಗ್ರೆಸ್) ಮುಗಿಸಬೇಕೋ ಅಲ್ಲಿ ಮುಗಿಸುತ್ತಾರೆ ಎಚ್ಚರಿಸಿದ್ದಾರೆ.

ದೇಶಾದ್ಯಂತ ಹಿಂದೂ- ಮುಸ್ಲಿಮರನ್ನು ದೂರ ಮಾಡಿ, ಮುಸ್ಲಿಮರನ್ನು ಪ್ರತ್ಯೇಕವಾಗಿಡುವ ಪ್ರಯತ್ನಗಳಾಗುತ್ತಿದೆ. ಇದನ್ನು ಮುಸ್ಲಿಮರು ಅರ್ಥ ಮಾಡಿಕೊಳ್ಳಬೇಕು. ಈ ರೀತಿಯಾದರೆ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಆಗುತ್ತದೆ. ಇದರಿಂದ ಏನೂ ಉದ್ಧಾರ ಆಗಲ್ಲ ಹಾನಿ ಆಗುವುದು ಮುಸ್ಲಿಂರಿಗೆ ಎಂಬುದನ್ನು ಅರ್ಥಮಾಡಿಕೊಳ್ಳಲಿ. ನಾನು ಯಾವತ್ತೂ ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ ಇದೆ ಅಂತ ಎಲ್ಲೂ ಹೇಳಿಲ್ಲಾ.
ಬಿಜೆಪಿ ಬಗ್ಗೆ ಕಾಂಗ್ರೆಸ್‌ಗೆ ಏಕೆ ಚಿಂತೆ: ಬಿಜೆಪಿಯ ಒಳಗೆ ಏನು ನಡೆಯುತ್ತಿದೆ ಎನ್ನುವುದನ್ನು ಕಾಂಗ್ರೆಸ್ ಚಿಂತಿಸುವುದು ಬೇಡ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ವಿಚಾರ, ಅದು ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ. ಬಿಜೆಪಿಯ ಒಳಗೆ ಎನಾಗ್ತಿದೆ ಎಂದು ಕಾಂಗ್ರೆಸ್ ವಿಚಾರ ಮಾಡುವುದು ಬೇಡ.

ನಿಮ್ಮಲ್ಲಿ ಸಿಎಂ ಸ್ಥಾನಕ್ಕೆ ಎಷ್ಟು ಪೈಪೋಟಿ ಇದೆ ಅದನ್ನು ನೋಡಿಕೊಳ್ಳಿ, ಹೊರಗೆ ಸಿದ್ದರಾಮಯ್ಯರಿಗೆ ಬೆಂಬಲ ಅಂತಾರೆ. ಆದರೆ, ಒಳಗೊಳಗೆ ಪ್ರತ್ಯೇಕ ಸಭೆ, ಯಾರು ಮುಖ್ಯ ಮಂತ್ರಿಯಾಗಬೇಕು, ಯಾವ ಶಾಸಕರು ಯಾರ ಜೊತೆಗೆ ಇದ್ದಾರೆ ಅನ್ನೊ ಚರ್ಚೆ ನಡೆಯುತ್ತಿದೆ. ತಮ್ಮ ಪಕ್ಷದ ಬಗ್ಗೆ ಕಾಂಗ್ರೆಸ್ ಶಾಸಕರು ಸಾಕಷ್ಟು ಅಸಮಾಧಾನಗೊಂಡಿದ್ದಾರೆ ಎಂದು ಇದರಿಂದಲೇ ತಿಳಿಯುತ್ತೆ. ತಮ್ಮ ಪಕ್ಷದ ಬಗ್ಗೆ ಕಾಂಗ್ರೆಸ್ ಶಾಸಕರಿಗೇ ಜಿಗುಪ್ಸೆ ಆಗಿದೆ. ರಸ್ತೆಗುಂಡಿ ಮುಚ್ಚುವುದಕ್ಕೂ ಸಹ ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ. ನಿಮ್ಮ ಮನೆ ಮೊದಲು ನೀವು ಸರಿ ಮಾಡಿಕೊಳ್ಳಿ ಎಂದರು.
ನಾನು ಆ ರೀತಿ ಮಾತಾಡೇ ಇಲ್ಲ: ಇನ್ನು ಸಂಸದ ಜಗದೀಶ್ ಶೆಟ್ಟರ್ ಅವರು ನಾನು ಆ ರೀತಿ ಮಾತನಾಡಿಯೇ ಇಲ್ಲ ಎಂದು ಉಲ್ಟಾ ಹೊಡೆದಿರುವುದು ಸಹ ನಡೆದಿದೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಸೇರುವ ಸಂದರ್ಭದಲ್ಲಿ ಅವರು ಬಿಜೆಪಿ ನಾಯಕರ ವಿರುದ್ಧ ಮಾತನಾಡಿದ್ದರು.
ಬಿಜೆಪಿ ಪಕ್ಷ ಕೆಲವರ ಹಿಡಿತದಲ್ಲಿದೆ , ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣ ಇದೆ ಎಂದು ಆರೋಪಿಸಿದ್ದರು. ಈಗ ನಾನೇನು ಹೇಳಿಯೇ ಇಲ್ಲ. ಅದನ್ನು ಮಾಧ್ಯಮಗಳೇ ಕ್ರಿಯೆಟ್ ಮಾಡಿದ್ದವು. ನಾನು ಯಾಕೆ ಧ್ವನಿ ಗೂಡಿಸಿಬೇಕು, ನಾನು ಈ ಬಗ್ಗೆ ಏನೂ ಪ್ರತಿಕ್ರಿಯೆ ನೀಡಲ್ಲ. ರಾಜಕೀಯ ಪಕ್ಷದಲ್ಲಿ ಎಲ್ಲವೂ ನೂರಕ್ಕೆ ನೂರರಷ್ಟು ಸರಿ ಇರಲ್ಲ. ಇದು ಯಾವ ಪಾರ್ಟಿಯಲ್ಲೂ ಇರಲ್ಲ, ಎಲ್ಲಾ ಪಾರ್ಟಿಯಲ್ಲಿಯೂ ಒಂದಿಷ್ಟು ಅಸಮಾಧಾನ ಇದ್ದೇ ಇರುತ್ತದೆ ಎಲ್ಲವೂ ಪರಿಪೂರ್ಣವಾಗಿರಲ್ಲ ಎಂದು ಹೇಳಿದ್ದಾರೆ.












Click it and Unblock the Notifications