ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಕಾಂಗ್ರೆಸ್ ಶಾಸಕ
ವಿಜಯಪುರ, ಸೆಪ್ಟೆಂಬರ್ 24: ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿಯ ಟೀಕಾ ಪ್ರಹಾರ ಮಾಡುತ್ತಿರುವ ಹೊತ್ತಲ್ಲೇ ಮೈತ್ರಿಯಲ್ಲಿರುವ ಕಾಂಗ್ರೆಸ್ ಪಕ್ಷದ ಶಾಸಕ ಸಹ ಟೀಕೆ ಮಾಡಿ ಕಾಂಗ್ರೆಸ್ ಅನ್ನು ಮುಜುಗರಕ್ಕೀಡು ಮಾಡಿದ್ದಾರೆ.
ವಿಜಯಪುರ ಜಿಲ್ಲೆ ಇಂಡಿ ಕ್ಷೇತ್ರದ ಕಾಂಗ್ರೆಸ್ ಯಶವಂತರಾಯಗೌಡ ಪಾಟೀಲ್ ಮೈತ್ರಿ ಸರ್ಕಾರದ ಮೇಲೆ ಹರಿಹಾಯ್ದಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ ಎಂದು ದೂರಿದ್ದಾರೆ.
ಈಗಾಗಲೇ ಆಂತರಿಕ ಬಿಕ್ಕಟ್ಟಿನಿಂದಾಗಿ ಒಳಬೇಗುದಿಯಲ್ಲಿರುವ ಕಾಂಗ್ರೆಸ್‌ಗೆ ತಮ್ಮದೇ ಪಕ್ಷದ ಶಾಸಕ ನೀಡಿರುವ ಹೇಳಿಕೆ ಮತ್ತಷ್ಟು ಇಕ್ಕಟ್ಟು ಸೃಷ್ಟಿಸಿದೆ.

ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಯಶವಂತರಾಯಗೌಡ ಅವರು, ಸಮ್ಮಿಶ್ರ ಸರ್ಕಾರ ಕಾರ್ಯಗಳು ಜನರಿಗೆ ಬೇಸರ ಮೂಡಿಸಿವೆ. ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ ಎಂದು ಹೇಳಿದ್ದಾರೆ.
ಇಂಡಿ ಕ್ಷೇತ್ರಕ್ಕೆ ಹಲವು ವರ್ಷಗಳಿಂದಲೂ ಅನ್ಯಾಯವಾಗುತ್ತಲೇ ಬರುತ್ತಿದೆ ಎಂದು ಆರೋಪಿಸಿದ ಅವರು, ಆಗಬೇಕಿದ್ದ ಸೂಪರ್ ಮಾರ್ಕೆಟ್ ಆಗಿಲ್ಲ, ವಿಮಾನ ನಿಲ್ದಾಣ ಆಗಿಲ್ಲ, ನೀರಾವರಿ ಯೋಜನೆಗಳು ಆಗಿಲ್ಲ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಹ ಇನ್ನೂ ಶುರು ಆಗಿಲ್ಲ ಎಂದು ಅವರು ಪಟ್ಟಿ ತೆರೆದಿಟ್ಟರು.
ಸರ್ಕಾರದ ಮೇಲಿನ ಅಸಮಾಧಾನದಿಂದಾಗಿ ಪಕ್ಷ ಬಿಡುವ ಯೋಚನೆ ಏನಾದರೂ ಇದೆಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ಯಶವಂತರಾಯಗೌಡ ಅವರು, ನಾನು ಸಾಯುವವರೆಗೆ ಕಾಂಗ್ರೆಸ್ ನಲ್ಲೇ ಇರುತ್ತೇನೆ ಎಂದು ಹೇಳಿದರು.
ಇಂಡಿಗೆ ಈವರೆಗೆ ಮಂತ್ರಿ ಸ್ಥಾನ ನೀಡಿಲ್ಲ, ಆದರೆ ನಾನು ಮಂತ್ರಿಗಿರಿಗಾಗಿ ಬೇಡಿಕೆ ಸಹ ಇಟ್ಟಿಲ್ಲ, ಅಕಸ್ಮಾತ್ ನಿಗಮ ಮಂಡಳಿ ಸ್ಥಾನ ನೀಡಿದರೂ ನಾನದನ್ನು ನಿರಾಕರಿಸುತ್ತೇನೆ ಎಂದು ಹೇಳಿದರು.












Click it and Unblock the Notifications