Independence day 2024: ಹರ್ ಘರ್ ತಿರಂಗಾ ಅಭಿಯಾನ, ನಿಯಮ ತಿಳಿಯಿರಿ
ಬೆಂಗಳೂರು, ಆಗಸ್ಟ್ 11: 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಈ ಬಾರಿಯೂ 'ಹರ್ ಘರ್ ತಿರಂಗಾ ಅಭಿಯಾನ'ವನ್ನು ದೇಶಾದ್ಯಂತ ನಡೆಸಲಾಗುತ್ತದೆ. ಈ ಅಭಿಯಾನದ ಸಂದರ್ಭದಲ್ಲಿ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬೇಕು. ಆದರೆ ಧ್ವಜ ಹಾರಿಸುವ ಸಂದರ್ಭದಲ್ಲಿ ಯಾವ ನಿಯಮಗಳನ್ನು ಅನುಸರಿಸಬೇಕು ಎಂದು ಸಹ ಮಾಹಿತಿ ನೀಡಲಾಗಿದೆ.
ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್‌ರಾವ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಯಿತು. ಸಭೆಯಲ್ಲಿ ಸ್ವಾತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಪ್ರತಿ ಮನೆ ಮೇಲೂ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ 'ಹರ್ ಘರ್ ತಿರಂಗಾ ಅಭಿಯಾನ' ಯಶಶ್ವಿಗೊಳಲು ಸೂಚಿಸಲಾಗಿದೆ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ 'ಹರ್ ಘರ್ ತಿರಂಗಾ ಅಭಿಯಾನ'ವನ್ನು ಆಗಸ್ಟ್13 ರಿಂದ ಆಗಸ್ಟ್15ರ ತನಕ ಹಮ್ಮಿಕೊಳ್ಳಲಾಗಿದೆ. ಕಳೆದ ಬಾರಿಯೂ ಈ ಮಾದರಿ ಅಭಿಯಾನವನ್ನು ನಡೆಸಲಾಗಿತ್ತು, ಅದು ಯಶಸ್ವಿಯಾಗಿತ್ತು. ಈ ಬಾರಿಯೂ ಅಭಿಯಾನ ಮುಂದುವರಿದಿದೆ.
ಅಭಿಯಾನದ ಉದ್ದೇಶ, ನಿಯಮ: ಪ್ರತಿಯೊಬ್ಬರಲ್ಲೂ ದೇಶಭಕ್ತಿ, ದೇಶಾಭಿಮಾನವನ್ನು ಮೂಡಿಸಲು ಹರ್ ಘರ್ ತಿರಂಗಾ ಅಭಿಯಾನವನ್ನು ನಡೆಸಲಾಗುತ್ತಿದೆ. ಎಲ್ಲರೂ ಸಮರ್ಥವಾಗಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಲಾಗಿದೆ. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಸಂಜೆ ಸೂರ್ಯಾಸ್ತದವರೆಗೆ ನಿರಂತರವಾಗಿ ಹಾರಿಸಬೇಕು.
ಹರ್ ಘರ್ ತಿರಂಗಾ ಅಭಿಯಾನ ಆಗಸ್ಟ್ 13ರಿಂದ ಆಗಸ್ಟ್ 15ರ ವರೆಗೆ ನಡೆಯಲಿದೆ. ಜನರು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವಂತೆ ಉತ್ತೇಜಿಸಲು ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ, ಹರ್ ಘರ್ ತಿರಂಗ ಅಭಿಯಾನವನ್ನು ಆರಂಭಿಸಲಾಗಿದ್ದು, ಇದರ ಉದ್ದೇಶವು ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ತುಂಬುವುದು ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಅವಿರತವಾಗಿ ಶ್ರಮಿಸಿದವರ ಕೊಡುಗೆಯನ್ನು ಸ್ಮರಿಸುವುದಾಗಿದೆ. ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗವಹಿಸಿದ ಸಾರ್ವಜನಿಕರು ತಮ್ಮ ಸೆಲ್ಫಿಗಳನ್ನು https://hargartiranga.com ನಲ್ಲಿ ಹಂಚಿಕೊಳ್ಳಬಹುದು.
* ಭಾರತದ ಧ್ವಜ ಸಂಹಿತೆಯು ರಾಷ್ಟ್ರೀಯ ಧ್ವಜವು ಆಯತಾಕಾರವಾಗಿರಬೇಕು, ಉದ್ದ ಮತ್ತು ಎತ್ತರದ ನಿಗದಿತ ಅನುಪಾತದಲ್ಲಿರಬೇಕು. ಧ್ವಜವನ್ನು ಯಾವುದೇ ರೀತಿಯ ಅಲಂಕಾರ ಉದ್ದೇಶಗಳಿಗಾಗಿ ಬಳಸಬಾರದು.
* ತ್ರಿವರ್ಣ ಧ್ವಜಕ್ಕೆ ತನ್ನದೇ ಆದ ಗೌರವ, ಘನತೆ ಇರುತ್ತದೆ. ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಾಗ ಮನೆಯ ಮೇಲಿನ ಅತೀ ಎತ್ತರದ ಜಾಗದಲ್ಲಿ ಇಡಬೇಕು. ಧ್ವಜ ಸ್ಥಂಭ ಮತ್ತು ಧ್ವಜ ನೆರವಾಗಿರಬೇಕು. ಅದು ಎಡಕ್ಕೆ, ಬಲಕ್ಕೆ, ಹಿಂದಕ್ಕೆ, ಮುಂದಕ್ಕೆ ವಾಲಿರಬಾರದು.
* ತ್ರಿವರ್ಣ ಧ್ವಜಕ್ಕಿಂತ ಎತ್ತರವಾಗಿ, ಸಮಾನವಾಗಿ ಹಾಗೂ ಧ್ವಜದ ಬಲಗಡೆ ಯಾವುದೇ ಧ್ವಜ ಇರಬಾರದು. ಗಲಿಜಾದ ಮತ್ತು ಹರಿದ ಧ್ವಜವನ್ನು ಬಳಸಬಾರದು. ಕೇಸರಿ ಬಣ್ಣ ಮೇಲೆ ಇರುವಂತೆ ಧ್ವಜಾರೋಹಣ ಮಾಡಬೇಕು.
* ಸಂವಿಧಾನವನ್ನು ಪಾಲಿಸುವುದು ಮತ್ತು ಅದರ ಆದರ್ಶಗಳು ಮತ್ತು ಸಂಸ್ಥೆಗಳು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.
ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿಕ ಕರ್ನಾಟಕದ ವಿವಿಧ ಜಿಲ್ಲಾ ಕೇಂದ್ರದಲ್ಲಿ ಆಗಸ್ಟ್ 12 ಮತ್ತು 13ರಂದು ವೈವಿಧ್ಯಮ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಲ್ಲದೇ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲಾ ಧಾರ್ಮಿಕ ಸಂಸ್ಥೆಗಳು ಹಾಗೂ ದೇವಾಲಯಗಳಲ್ಲಿ ಆಗಸ್ಟ್ 14 ಮತ್ತು ಆಗಸ್ಟ್ 15ರಂದು ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಹಾಗೂ ಆಗಸ್ಟ್ 15ರಂದು ವಿಶೇಷ ಪೂಜೆ, ಪ್ರಾರ್ಥನೆ ವ್ಯವಸ್ಥೆ ಕೈಗೊಳ್ಳಬೇಕು ಎಂದು ಇಲಾಖೆ ಸೂಚನೆ ನೀಡಿದೆ.












Click it and Unblock the Notifications