Raichur: ಜಿಲ್ಲೆಯಲ್ಲಿ ಇನ್ನೊಂದು 'ಜವಳಿ ಪಾರ್ಕ್' ನಿರ್ಮಾಣಕ್ಕೆ ಸರ್ಕಾರ ಸಜ್ಜು
ಬೆಂಗಳೂರು, ಆಗಸ್ಟ್ 09: ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯಲ್ಲಿ 120 ಕ್ಕೂ ಹೆಚ್ಚು ಜಿನ್ನಿಂಗ್ ಘಟಕಗಳಿವೆ. ಏಷಿಯಾದ 2 ನೇ ಅತಿದೊಡ್ಡ ಕಾಟನ್ ಮಾರ್ಕೆಟ್ ಆಗಿರುವ ಈ ಜಿಲ್ಲೆಯಲ್ಲಿ ಜವಳಿ (Textile Park) ಪಾರ್ಕ್ ನಿರ್ಮಾಣದ ಅವಶ್ಯಕತೆ ಇದೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಬೆಂಗಳೂರಿನಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಯಚೂರು ಜಿಲ್ಲೆಯಲ್ಲಿ ಈಗಾಗಲೇ ಕೇಂದ್ರ ಸರ್ಕಾರವು ಯಾದಗಿರಿ ಜಿಲ್ಲೆಯಲ್ಲಿ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಿಸಲು ಅನುಮತಿ ನೀಡಿದೆ. ಈ ಹಿನ್ನಲೆಯಲ್ಲಿ ರಾಯಚೂರಿನಲ್ಲೂ ಇನ್ನೊಂದು ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಅನುಮತಿ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ನಿಟ್ಟಿನಲ್ಲಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ ವರದಿ ತಯಾರಿಸುವಂತೆ ಕೈಗಾರಿಕಾ ಆಯುಕ್ತರಿಗೆ ಸಚಿವರು ಸೂಚಿಸಿದರು.

ರಾಜ್ಯದ ಎಲ್ಲಾ ಹಳೇ ಕೈಗಾರಿಕಾ ಪ್ರದೇಶಗಳಲ್ಲಿ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸಲಾಗುವುದು. ನಂತರವೇ ನಂತರ ಆಯಾ ಕೈಗಾರಿಕಾ ಸಂಘಗಳ ಸುಪರ್ಧಿಗೇ ಅವುಗಳ ನಿರ್ವಹಣೆ ಒಪ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಭವರಸೆ ನೀಡಿದರು.
ನಾಡಿನ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವು ಗಮನಕ್ಕೆ ಬಂದಿದೆ. ಇದನ್ನ ಸರಿಪಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಕೈಗಾರಿಕಾ ಪ್ರದೇಶದಿಂದ ಸಂಗ್ರಹವಾಗುವ ಕರದಲ್ಲಿ ಶೇಕಡಾ 70 ರಷ್ಟು ಕೈಗಾರಿಕಾ ಸಂಘಕ್ಕೆ ಮತ್ತು ಶೇಕಡಾ 30 ರಷ್ಟು ಆಯಾ ನಗರಸಭೆಗಳಿಗೆ ನೀಡಲಾಗುವುದು ಎಂದು ತಿಳಿಸಿದರು.
90 ಕ್ಕೂ ಹೆಚ್ಚು ರೈಸ್‌ಮಿಲ್ ಗಳಿಗೆ ಬೇಕಿದೆ ನೀರು
ರಾಯಚೂರು ನಗರದಲ್ಲಿ 90 ಕ್ಕೂ ಹೆಚ್ಚು ರೈಸ್‌ಮಿಲ್ ಗಳಿವೆ. ಈ ರೈಸ್‌ಮಿಲ್‌ಗಳ ನಿರ್ವಹಣೆಗಾಗಿ ನೀರಿನ ಅಗತ್ಯವಿದೆ. ಕೈಗಾರಿಕಾ ಪ್ರದೇಶಗಳಿಗೆ ಮೀಸಲಾದ ನೀರಿನ ಸಂಪರ್ಕ ಇಲ್ಲದೆ ಇರುವ ಕಾರಣ ರೈಸ್ ಮಿಲ್‌ಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ.

ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ರೈಸ್ ಮಿಲ್‌ಗಳನ್ನು ಸ್ಥಾಪಿಸಲು ನೀರಿನ ಅಗತ್ಯತೆ ಹೆಚ್ಚಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ರೈಸ್ ಮಿಲ್ ಗಳಿಗೆ ಮೀಸಲಾದ ಪೈಪ್ ಲೈನ್ ನಿರ್ಮಾಣದ ವರದಿಯನ್ನ ಸಲ್ಲಿಸುವಂತೆ ಸಚಿವರು KIADB ಅಧಿಕಾರಿಗಳಿಗೆ ನಿರ್ದೇಶಿಸಿದರು.
ಔಷಧ ಕಂಪನಿಗಳ ತ್ಯಾಜ್ಯ ವಿಲೇವಾರಿ ಸೌಲಭ್ಯ ನಿರ್ಮಾಣಕ್ಕೆ ಆದ್ಯತೆ
ಔಷಧ ಕಂಪನಿಗಳ ಹಬ್ ಆಗಿ ಹೊರಹೊಮ್ಮಿರುವ ರಾಯಚೂರು ಕೈಗಾರಿಕಾ ಪ್ರದೇಶದಲ್ಲಿ ಸಿಇಟಿಪಿಯ ಕೊರತೆಯಿದೆ. ಇದರಿಂದಾಗಿ ತ್ಯಾಜ್ಯವು ಅಂತರ್ಜಲಕ್ಕೆ ಸೇರಿ ಮಲೀನವಾಗುತ್ತಿದೆ. ಇದರ ತಡೆಗೆ ತ್ಯಾಜ್ಯ ವಿಲೇವಾರಿ ಸೌಲಭ್ಯವನ್ನು ಅಳವಡಿಸುವ ಕಾರ್ಯ ವಿಳಂಬವಾಗಿರುವುದನ್ನ ಕೈಗಾರಿಕೋದ್ಯಮಿಗಳು ಸಭೆಯ ಗಮನಕ್ಕೆ ತಂದರು.
ಇದಕ್ಕೆ ಸ್ಪಂದಿಸಿದ ಸಚಿವರು ಕೂಡಲೇ ತ್ಯಾಜ್ಯ ವಿಲೇವಾರಿ ಕೇಂದ್ರವನ್ನು ನಿರ್ಮಿಸಬೇಕು. ಇದಕ್ಕೆ ಈಗಾಗಲೇ ಅನುಮತಿ ನೀಡಿರುವ ಮದರ್ ಅರ್ಥ್ ಕಂಪನಿಯ ಜೊತೆಯಲ್ಲಿ ಚರ್ಚಿಸಿ ಕೈಗಾರಿಕೋದ್ಯಮಿಗಳೀಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ರಾಯಚೂರು ವಾಣಿಜ್ಯ ಕೇಂದ್ರವಾಗುತ್ತಿದೆ
ಇದೇ ವೇಳೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ಮಾತನಾಡಿ, ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಹಲವಾರು ಅವಕಾಶಗಳಿವೆ. ಹಿಂದುಳಿದ ಪ್ರದೇಶವಾಗಿರುವ ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ರಾಯಚೂರು ಹೊರ ಹೊಮ್ಮುತ್ತಿದೆ. ಕೈಗಾರಿಕೆಗಳ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗುವಂತೆ ಮಾಡುವ ನಿಟ್ಟಿನಲ್ಲಿ ನಾವುಗಳು ಅಗತ್ಯ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದರು.
ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣ ಪ್ರಕಾಶ್ ಪಾಟೀಲ್ ಸೇರಿದಂತೆ ಜಿಲ್ಲೆಯ ಶಾಸಕರು, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ, ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications