ಇದೇ ಮೊದಲ ಬಾರಿಗೆ ಮಾಧ್ಯಮಗಳಿಗೆ ಗೈರಾದ ಸಿದ್ದರಾಮಯ್ಯ: ನಾಯಕತ್ವದ ಬದಲಾವಣೆಯ ಸುಳಿವೇ?
ಬೆಂಗಳೂರು, ನವೆಂಬರ್ 10: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಹಾಗೂ ಡಿಕೆ ಶಿವಕಮಾರ್ ಬಣ ತೆರೆಮರೆಯಲ್ಲಿ ತಂತ್ರಗಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಒಂದೆಡೆ ಸಿಎಂ ಕುರ್ಚಿ ಬದಲಾವಣೆಯ ಗುಸುಗುಸು ಕಾಂಗ್ರೆಸ್ ಆಂತರಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದರೆ ಮತ್ತೊಂದೆಡೆ, ಅತ್ಯಧಿಕ ಅವಧಿ ಸೇವೆ ಸಲ್ಲಿಸಿದ ಮುಖ್ಯಮಂತ್ರಿ' ಎಂಬ ದಾಖಲೆ ಬರೆಯುವತ್ತ ಸಿದ್ದರಾಮಯ್ಯ ದಾಪುಗಾಲಿಡುತ್ತಿದ್ದಾರೆ.
ಜನವರಿ 5ರ ವರೆಗೆ ಮುಖ್ಯಮಂತ್ರಿ ಆಗಿ ಮುಂದುವರಿದಿದ್ದೇ ಆದರೆ, ಮಾಜಿ ಸಿಎಂ ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಸರಿಗಟ್ಟಲಿದ್ದಾರೆ. ಆದರೆ, ಇದು ಸಾಕಾರಗೊಳ್ಳಬೇಕಾದರೆ ಸಿದ್ದರಾಮಯ್ಯ ಅವರು ಜನವರಿ ವರೆಗೂ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಬೇಕು. ಅಧಿಕಾರ ಹಂಚಿಕೆ ಊಹಾಪೋಹಗಳು ನಿಜವಾಗದೇ ಇದ್ದಲ್ಲಿ ಸಿದ್ದರಾಮಯ್ಯ ದಾಖಲೆ ಬರೆಯುವುದು ಖಾತರಿಯಾಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ನೋಡಿದರೇ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ಸೋಮವಾರದಂದು ಮೈಸೂರು ವಿಮಾನ ನಿಲ್ದಾಣದಲ್ಲಿ ತಮ್ಮ ದಿನನಿತ್ಯದ ಮಾಧ್ಯಮ ಪ್ರತಿನಿಧಿಗಳ ಭೇಟಿಗೆ ಗೈರಾಗಿದ್ದಾರೆ. ಇದು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅಥವಾ ಸಚಿವ ಸಂಪುಟ ಪುನರ್ರಚನೆ ಬಗ್ಗೆ ಊಹಾಪೋಹಗಳಿಗೆ ಕಾರಣವಾಯಿತು. ವಾರ್ತಾ ಇಲಾಖೆ ಪತ್ರಕರ್ತರಿಗೆ ಸಾರಿಗೆ ವ್ಯವಸ್ಥೆ ಮಾಡಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿಗಾರರೊಂದಿಗೆ ಮಾತನಾಡದೆ ವಿಮಾನ ನಿಲ್ದಾಣದಿಂದ ನಿರ್ಗಮಿಸಿದರು. 2013 ರಿಂದ 2018 ರ ಅವಧಿಯಿಂದ ಇಲ್ಲಿಯವರೆಗೂ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಮಾಧ್ಯಮಗಳಿಗೆ ಭೇಟಿ ಕೊಟ್ಟು ಹೋಗುತ್ತಿದ್ದು, ಇದೇ ಮೊದಲ ಬಾರಿಗೆ ಗೈರಾಗಿರುವುದು ಹಲವು ಅನುಮಾನಗಳು ಹುಟ್ಟಿಕೊಳ್ಳುವಂತೆ ಮಾಡಿದೆ.
ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೈಸೂರು ಭೇಟಿಯಲ್ಲಿ ಖಾಸಗಿ ಕುಟುಂಬ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವುದು ಮತ್ತು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸುವುದು ಸೇರಿದೆ. ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ದೆಹಲಿಯಲ್ಲಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ, ಇದು ಬಿಹಾರದ ನಂತರದ ಚುನಾವಣೆಗಳ ಬದಲಾವಣೆಯ ಬಗ್ಗೆ ರಾಜಕೀಯ ಚರ್ಚೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.












Click it and Unblock the Notifications