ಶಿಕ್ಷಕರ ಬಡ್ತಿ ಕುರಿತು ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿ
ಬೆಂಗಳೂರು, ಜುಲೈ, 4: ರಾಜ್ಯದಲ್ಲಿ ಈ ಶಿಕ್ಷಕರ ಬಡ್ತಿ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಹಾಗಾದ್ರೆ ಯಾರಿಗೆ ಬಡ್ತಿ ಹಾಗೂ ಈ ಪಟ್ಟಿಯಿಂದ ಹೆಸರು ಬಿಟ್ಟು ಹೋದರೆ ಯಾರು ಹೊಣೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಪ್ರೌಢಶಾಲಾ ಸಹ ಶಿಕ್ಷಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರ ರಾಜ್ಯ ಮಟ್ಟದ ಒಂದೇ ಜೇಷ್ಠತಾ ಪಟ್ಟಿ ಸಿದ್ಧಪಡಿಸುವ ಸಂಬಂಧ ಆನ್‌ಲೈನ್ ಮಾದರಿ ಸಿದ್ಧಪಡಿಸುವ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಪ್ರೌಢಶಾಲಾ ಸಹಶಿಕ್ಷಕರ ರಾಜ್ಯ ಮಟ್ಟದ ಒಂದೇ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಏಪ್ರಿಲ್ 25, 2025ರಂದು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಲಾಲಾಗಿರುತ್ತದೆ. ಈ ಪಟ್ಟಿಗೆ ಸ್ವೀಕರಿಸಿದ ಆಕ್ಷೇಪಣೆಗಳನ್ನು ಸರಿಪಡಿಸಿ, ಇದರೊಂದಿಗೆ ಹೊಸದಾಗಿ ಸೇರ್ಪಡೆಗೊಂಡವರ ನಿಖರವಾದ ವಿವರಗಳನ್ನು ಸೇರಿಸಲು ಸೂಚಿಸಲಾಗಿತ್ತು. ಅಲ್ಲದೆ, ಅಗತ್ಯ ತಿದ್ದುಪಡಿಗಳನ್ನು ಮಾಡಿ ತಂತ್ರಾಂಶದಲ್ಲಿ ಅಳವಡಿಸಲು ಉಲ್ಲೇಖ (2) ರ ಸಭಾ ನಡಾವಳಿಯಲ್ಲಿ ಸೂಚಿಸಲಾಗಿರುತ್ತದೆ.
ವಿಭಾಗೀಯ ಕಛೇರಿಗಳಿಂದ ತಿದ್ದುಪಡಿಗಳನ್ನು ತಂತ್ರಾಂಶದಲ್ಲಿ ಅಳವಡಿಸುವ ಕಾರ್ಯ ಪೂರ್ಣಗೊಂಡಿದ್ದ ಹಿನ್ನೆಲೆ ಮಾಹಿತಿಗಳನ್ನು ಕ್ರೋಢೀಕರಿಸಿ ಒಂದೇ ಪಟ್ಟಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಪುನಃ ಒಟ್ಟು 2,935 ಅಪೂರ್ಣ ಮಾಹಿತಿಗಳು ಕಂಡುಬಂದಿರುತ್ತದೆ. ವಿಭಾಗವಾರು ನೋಡೋದಾದ್ರೆ, ಬೆಂಗಳೂರು ವಿಭಾಗ-751, ಮೈಸೂರು-1301, ಬೆಳಗಾವಿ ವಿಭಾಗ - 368, ಕಲಬುರಗಿ ವಿಭಾಗ -517.
ತಂತ್ರಾಂಶದಲ್ಲಿ ಮಾಹಿತಿಯನ್ನು ಸರಿಯಾಗಿ ಅಳವಡಿಸಲು ಈಗಾಗಲೇ ಹಲವಾರು ಬಾರಿ ನಿರ್ದೇಶನ ನೀಡಲಾಗಿದೆ. ಆದರೂ ಕೂಡ ತಪ್ಪು ಮಾಹಿತಿಯನ್ನು ಅಳವಡಿಸುವುದರಿಂದ ನಿಗಧಿತ ಅವಧಿಯೊಳಗೆ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಲು ಸಾಧ್ಯ ಆಗುತ್ತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಅವರ ಆದೇಶದಂತೆ ತುರ್ತಾಗಿ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರ ರಾಜ್ಯ ಮಟ್ಟದ ಒಂದೇ ಜೇಷ್ಠತಾ ಪಟ್ಟಿಯನ್ನು ತುರ್ತಾಗಿ ಪ್ರಕಟ ಮಾಡಬೇಕಿರುತ್ತದೆ. ಸದರಿ ವಿವರಗಳನ್ನು ಸರಿಪಡಿಸಲು ಇದಿಗ ಕೊನೆ ಅವಕಾಶವನ್ನು ನೀಡಲಾಗಿದೆ.
ಪಾಲಿಸಬೇಕಾಗಿದ್ದ ಸೂಚನೆಗಳು
* KGID ಸಂಖ್ಯೆಯನ್ನು ನಮೂದಿಸುವುದು.
* KGID ಸಂಖ್ಯೆ ಪುನರಾವರ್ತನೆ ಆಗಿರುವ ಪ್ರಕರಣಗಳಲ್ಲಿ ಪ್ರಸ್ತುತ ಸದರಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿರುವ ವಿಭಾಗದಲ್ಲಿ ಮಾತ್ರ ಸದರಿಯವರ KGID ಸಂಖ್ಯೆಯನ್ನು ನಮೂದಿಸಿ ADD ಎಂದು ನಮೂದಿಸಿ. ಇಲ್ಲವಾದರೆ, ಡಿಲಿಟ್ ಎಂದು ನಮೂದಿಸುವುದು.
* ಉಳಿದಂತೆ ಶಿಕ್ಷಕರ ಸೇವಾ ವಿವರಗಳಲ್ಲಿ ತಪ್ಪಾಗಿ ನಮೂದಿಸಿದ್ದರೆ, ಅದನ್ನು ತಂತ್ರಾಂಶದಲ್ಲಿ ಸರಿಪಡಿಸಬೇಕು.
ಈ ತಿದ್ದುಪಡಿಗಳನ್ನು ಸರಿಪಡಿಸಲು ಜುಲೈ 2, 2025ರ ಮಧ್ಯಾಹ್ನ 12.30ರ ವರೆಗೂ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ದತ್ತಾಂಶ ಸರಿಪಡಿಸಲು ಕಡೆಯ ಬಾರಿಗೆ ಅವಕಾಶ ಕಲ್ಪಿಸಿದ್ದು, KGID ತಿದ್ದುಪಡಿಗಳನ್ನು [email protected]ಗೆ ಇ-ಮೇಲ್ ಮಾಡಲು ತಿಳಿಸಿತ್ತು.
ಸಕಾಲದಲ್ಲಿ ಮಾಹಿತಿ ಸಲ್ಲಿಸಿದವರ ದತ್ತಾಂಶವನ್ನು ಮಾತ್ರ ಸ್ವೀಕರಿಸಲಾಗುವುದು. ಇಲ್ಲವಾದರೆ ಸದರಿ ಶಿಕ್ಷಕರ ಹೆಸರು ಕೈಬಿಟ್ಟು ಪಟ್ಟಿ ಪ್ರಕಟಿಸುವ ಅನಿರ್ವಾಯತೆಯಿರುತ್ತದೆ. ಯಾವುದೇ ಶಿಕ್ಷಕರ ಹೆಸರು ಕೈಬಿಟ್ಟು ಹೋದಲ್ಲಿ ಈ ಕುರಿತ ಆಗು ಹೋಗುಗಳಿಗೆ ಸಂಬಂಧಿಸಿದ ವಿಭಾಗೀಯ ಕಛೇರಿಯ ಸಹನಿರ್ದೇಶಕರು ನೇರ ಹೊಣೆಗಾರರಾಗಿರುತ್ತಾರೆ ಎಂದು ತಿಳಿಸಿದೆ.












Click it and Unblock the Notifications