7th Pay Commission; ಸರ್ಕಾರಿ ನೌಕರರ ಮುಷ್ಕರದ ಕರೆಗೆ ಬೆದರಿದ ಸರ್ಕಾರ?
ಬೆಂಗಳೂರು, ಜುಲೈ 10: ಸರ್ಕಾರಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರದ ಕರೆಗೆ ಕರ್ನಾಟಕ ಸರ್ಕಾರ ಬೆದರಿದಂತೆ ಕಾಣುತ್ತಿದೆ. ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಶಿಫಾರಸುಗಳನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕಿದೆ.
7ನೇ ವೇತನ ಆಯೋಗದ ವರದಿ ಜಾರಿಗೊಳಿಸಲು ಸರ್ಕಾರ ವಿಳಂಬ ಮಾಡುತ್ತಿದೆ. ಇದರಿಂದಾಗಿ ನೌಕರರು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಮಾರ್ಚ್ 16 ರಂದು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ವರದಿ ಸ್ವೀಕಾರ ಮಾಡಿದ್ದರೂ ಇನ್ನು ಅದನ್ನು ಜಾರಿಗೊಳಿಸಿಲ್ಲ.

ಸರ್ಕಾರದ ಮೇಲೆ 7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿಗೊಳಿಸುವಂತೆ ಒತ್ತಡ ಹೇರಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಅನಿರ್ಧಿಷ್ಟಾವಧಿ ಮುಷ್ಕರದ ಕರೆ ನೀಡಿದೆ. ಜುಲೈ ತಿಂಗಳ ಅಂತ್ಯ ಅಥವ ಆಗಸ್ಟ್‌ನಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಯುವ ನಿರೀಕ್ಷೆ ಇದೆ.
7ನೇ ವೇತನ ಆಯೋಗದ ವರದಿಯಲ್ಲಿ ನೌಕರರ ಮೂಲ ವೇತನದ ಶೇಕಡ 27.5ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸು ಇಲಾಖೆಗೆ ವರದಿ ನೀಡಿದ್ದು, ಇಲಾಖೆ ನೀಡುವ ಅಭಿಪ್ರಾಯದ ಆಧಾರದ ಮೇಲೆ ಸರ್ಕಾರ ಶಿಫಾರಸನ್ನು ಹಂತ-ಹಂತವಾಗಿ ಜಾರಿಗೊಳಿಸಲಿದೆ.
ಆಗಸ್ಟ್‌ನಲ್ಲಿ ಜಾರಿ?: ಸದ್ಯದ ಮಾಹಿತಿ ಪ್ರಕಾರ ಹಣಕಾಸು ಇಲಾಖೆ ಸಿದ್ದರಾಮಯ್ಯಗೆ ವರದಿಯನ್ನು ನೀಡಿದೆ. ಹಂತ-ಹಂತವಾಗಿ ಹೇಗೆ ವರದಿಯ ಶಿಫಾರಸು ಜಾರಿಗೊಳಿಸಬೇಕು ಎಂದು ವಿವರಣೆ ನೀಡಲಾಗಿದೆ. ಜುಲೈ 15ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮುಖ್ಯಮಂತ್ರಿಗಳು ಸಚಿವರಿಗೆ ವಿವರಣೆ ನೀಡಲಿದ್ದು, ಅನುಮೋದನೆ ಪಡೆದ ಬಳಿಕ ಆಗಸ್ಟ್‌ನಲ್ಲಿ ವರದಿಯನ್ನು ಜಾರಿಗೊಳಿಸಲಿದ್ದಾರೆ.
ಚಿಕ್ಕಮಗಳೂರಿನಲ್ಲಿ ಭಾನುವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಣಿ ಸಭೆ ನಡೆದಿತ್ತು. ಸಭೆಯಲ್ಲಿ ಮಾತನಾಡಿದ್ದ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ, "7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿ, ಹಳೆ ಪಿಂಚಣಿ ಯೋಜನೆ ಮುಂದುವರೆಸುವುದು, ಆರೋಗ್ಯ ಸಂಜೀವಿನಿ ಯೋಜನೆ ಜಾರಿಗಾಗಿ ಆಗ್ರಹಿಸಿ ಕರ್ತವ್ಯಕ್ಕೆ ಗೈರಾಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ" ಎಂದು ಹೇಳಿದ್ದರು.
ಸರ್ಕಾರಿ ನೌಕರರು ಮುಷ್ಕರ ನಡೆಸುವುದರಿಂದ ಆಗುವ ಮುಜುಗರ ತಪ್ಪಿಸಿಕೊಳ್ಳಲು ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ವರದಿ ಜಾರಿಗೊಳಿಸುವ ಬಗ್ಗೆ ಅನುಮೋದನೆ ಪಡೆದು ಆದೇಶವನ್ನು ಹೊರಡಿಸಲಿದೆ. ಆದರೆ ವರದಿಯನ್ನು ಯಥಾವತ್ ಜಾರಿಗೊಳಿಸಲಾಗುತ್ತದೆಯೇ? ಅಥವ ಹಣಕಾಸು ಇಲಾಖೆಯ ಉಲ್ಲೇಖದಂತೆ ಜಾರಿ ಮಾಡಲಾಗುತ್ತದೆಯೇ? ಎಂದು ಕಾದು ನೋಡಬೇಕಿದೆ.
ಸಿದ್ದರಾಮಯ್ಯ ಮಾರ್ಚ್ 16 ರಂದು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ವರದಿ ಸ್ವೀಕಾರ ಮಾಡಿದರು. ಆದರೆ ಬಳಿಕ ಲೋಕಸಭೆ, ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿತು. ಆದ್ದರಿಂದ ವರದಿ ಜಾರಿಯಾಗಲಿಲ್ಲ. ಆದರೆ ನೀತಿ ಸಂಹಿತೆ ವಾಪಸ್ ಪಡೆದ ಬಳಿಕ ಮೂರು ಸಚಿವ ಸಂಪುಟ ಸಭೆ ನಡೆದರೂ ಸಹ ವೇತನ ಆಯೋಗದ ವರದಿ ಜಾರಿಗೊಳಿಸುವ ಕುರಿತು ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ.
ವರದಿಯಲ್ಲಿ ಮೂಲ ವೇತನದ ಶೇಕಡ 27.5ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಲಾಗಿದೆ. ಆಯೋಗದ ವರದಿ ಜಾರಿಗೆ ಸುಮಾರು 18 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ. ಆದ್ದರಿಂದ ರಾಜ್ಯದ ಆರ್ಥಿಕ ಸ್ಥಿತಿ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಮುಂತಾದವುಗಳನ್ನು ನೋಡಿಕೊಂಡು ವರದಿಯ ಶಿಫಾರಸು ಜಾರಿಗೊಳಿಸುವ ಎಚ್ಚರಿಕೆಯ ಹೆಜ್ಜೆಯನ್ನು ಸರ್ಕಾರ ಇಡುತ್ತಿದೆ.












Click it and Unblock the Notifications