7th Pay Commission; ಮುಷ್ಕರ ಘೋಷಣೆ ಮಾಡಿದ ಸರ್ಕಾರಿ ನೌಕರರು
ಬೆಂಗಳೂರು, ಜುಲೈ 08: ರಾಜ್ಯ ಕಾಂಗ್ರೆಸ್ ಸರ್ಕಾರ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿ ವಿಳಂಬ ಮಾಡುತ್ತಿದೆ. ಇದರಿಂದಾಗಿ ಅಸಮಾಧಾನಗೊಂಡಿರುವ ಸರ್ಕಾರಿ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ಘೋಷಣೆ ಮಾಡಿದ್ದಾರೆ. ಒಟ್ಟು ಎರಡು ಹಂತದಲ್ಲಿ ನೌಕರರ ಹೋರಾಟ ನಡೆಯಲಿದೆ.
ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿಗಾಗಿ ಕಾದು ಕುಳಿತಿದ್ದ ಸರ್ಕಾರಿ ನೌಕರರ ಅಸಮಾಧಾನ ಹೆಚ್ಚಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವರದಿ ಜಾರಿ ಕುರಿತು ಯಾವುದೇ ತೀರ್ಮಾನ ಕೈಗೊಳ್ಳುತ್ತಿಲ್ಲ. ಇದರಿಂದಾಗಿ ನೌಕರರು ಹೋರಾಟದ ಹಾದಿ ತುಳಿದಿದ್ದಾರೆ.

ಭಾನುವಾರ ಚಿಕ್ಕಮಗಳೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಣಿ ಸಭೆ ನಡೆಯಿತು. ಸಭೆಯಲ್ಲಿ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ, "7ನೇ ವೇತನ ಆಯೋಗ ವರದಿ ನೀಡಿದರೂ ಸರ್ಕಾರ ಜಾರಿಗೊಳಿಸಿಲ್ಲ" ಎಂದು ಆರೋಪಿಸಿದರು.
ಅನಿರ್ಧಿಷ್ಟಾವಧಿ ಮುಷ್ಕರ: ಸಭೆಯಲ್ಲಿ ಮಾತನಾಡಿದ ಸಿ. ಎಸ್. ಷಡಾಕ್ಷರಿ, "7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿ, ಹಳೆ ಪಿಂಚಣಿ ಯೋಜನೆ ಮುಂದುವರಿಕೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ತವ್ಯಕ್ಕೆ ಗೈರಾಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ" ಎಂದರು.
"ಒಟ್ಟು ಎರಡು ಹಂತದಲ್ಲಿ ಹೋರಾಟ ನಡೆಸಲಾಗುತ್ತದೆ. ಮೊದಲ ಹಂತದಲ್ಲಿ ಜುಲೈ 8 ರಿಂದ 14ರ ತನಕ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಮನವಿ ಸಲ್ಲಿಕೆ ಮಾಡಲಾಗುವುದು. ನಂತರ ಬೆಂಗಳೂರಿನಲ್ಲಿ ಮತ್ತೊಮ್ಮೆ ರಾಜ್ಯ ಕಾರ್ಯಕಾರಣಿ ಸಭೆ ನಡೆಸಿ, ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುತ್ತದೆ" ಎಂದು ಸಿ. ಎಸ್. ಷಡಾಕ್ಷರಿ ಹೇಳಿದರು.
"ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ. ಜುಲೈ ತಿಂಗಳ ಕೊನೆ ಅಥವ ಆಗಸ್ಟ್ ಆರಂಭದಿಂದಲೇ ಕರ್ತವ್ಯಕ್ಕೆ ಗೈರಾಗಿ ಮುಷ್ಕರ ನಡೆಸಲು ತೀರ್ಮಾನಿಸಲಾಗುತ್ತದೆ. ಅಮಾನತು, ಎಸ್ಮಾ ಜಾರಿ ಸೇರಿದಂತೆ ಯಾವುದೇ ಒತ್ತಡ, ಬೆದರಿಕೆಗಳಿಗೆ ಬಗ್ಗದೆ ಕರ್ತವ್ಯ ಬಹಿಷ್ಕಾರ ಮಾಡಿ ಚಳವಳಿ ನಡೆಸಬೇಕು" ಎಂದು ಸಿ. ಎಸ್. ಷಡಾಕ್ಷರಿ ಸರ್ಕಾರಿ ನೌಕರರಿಗೆ ಕರೆ ನೀಡಿದರು.
"ರಾಜ್ಯ ಸರ್ಕಾರ 7ನೇ ವೇತನ ಆಯೋಗದ ವರದಿ ಜಾರಿ, ಹಳೆ ಪಿಂಚಣಿ ಯೋಜನೆ ಮುಂದುವರೆಸುವುದು, ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಸೇರಿದಂತೆ ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ. ರಾಜ್ಯದ 6 ಲಕ್ಷ ಸರ್ಕಾರಿ ನೌಕರರು ಮುಷ್ಕರಕ್ಕೆ ಇಳಿಯಬೇಕು. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟ ಅನಿವಾರ್ಯವಾಗಿದೆ" ಎಂದು ಹೇಳಿದರು.
ಹಣಕಾಸು ಸಚಿವ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾರ್ಚ್ 16 ರಂದು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ವರದಿ ನೀಡಿತು. ವರದಿ ನೀಡಿದ ದಿನವೇ ಲೋಕಸಭೆ ಚುನಾವಣೆ 2024ರ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿತು. ಆದ್ದರಿಂದ ಜೂನ್ 6ರ ತನಕ ವರದಿ ಜಾರಿ ಸಾಧ್ಯವಾಗಲಿಲ್ಲ.
ವರದಿಯಲ್ಲಿ ಮೂಲ ವೇತನದ ಶೇಕಡ 27.5ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಲಾಗಿದೆ. ವರದಿಯನ್ನು ಪರಿಶೀಲಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಅಲ್ಲದೇ ವರದಿಯನ್ನು ಹಣಕಾಸು ಇಲಾಖೆಗೆ ನೀಡಿದ್ದು, ಇಲಾಖೆ ನೀಡುವ ಅಭಿಪ್ರಾಯದ ಆಧಾರದ ಮೇಲೆ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ.
ಲೋಕಸಭೆ ಚುನಾವಣೆ ನೀತಿ ಸಂಹಿತೆ ತೆರವಾದ ಬಳಿಕ ಸಚಿವ ಸಂಪುಟ ಸಭೆ ನಡೆದಿದೆ. ಸಭೆಯಲ್ಲಿ ಸಿದ್ದರಾಮಯ್ಯ 7ನೇ ವೇತನ ಆಯೋಗದ ವರದಿ ಜಾರಿ ಬಗ್ಗೆ ಸಚಿವರ ಅಭಿಪ್ರಾಯ ಸಂಗ್ರಹಣೆ ಮಾಡಿದ್ದಾರೆ. ಆದರೆ ವರದಿ ಜಾರಿ ಬಗ್ಗೆ ಯಾವುದೇ ಅಂತಿಮ ತೀರ್ಮಾನವನ್ನು ಮಾಡಿಲ್ಲ.
ಹಣಕಾಸು ಇಲಾಖೆ ಅಧಿಕಾರಿಗಳು ಸಚಿವ ಸಂಪುಟ ಸಭೆಯಲ್ಲಿಯೇ ಸಚಿವರಿಗೆ 7ನೇ ವೇತನ ಆಯೋಗದ ವರದಿ ಜಾರಿಗೊಳಿಸುವುದು ಏಕೆ ಕಷ್ಟ? ಎಂದು ಅಂಕಿ-ಸಂಖ್ಯೆಗಳ ಸಮೇತ ವಿವರಣೆ ನೀಡಿದ್ದಾರೆ. ಜುಲೈ 15ರಂದು ಮತ್ತೊಮ್ಮೆ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಸಭೆಯಲ್ಲಿ ಸರ್ಕಾರ ಯಾವ ತೀರ್ಮಾನ ಕೈಗೊಳ್ಳಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications