Monsoon rain alert: ಕರ್ನಾಟಕದಲ್ಲಿ 2 ವಾರ ಹಿಂಗಾರು ಸಕ್ರಿಯ, ಯಾವ ಜಿಲ್ಲೆಗೆ ಮಳೆ-ಬಿಸಿಲು ತಿಳಿಯಿರಿ
ಬೆಂಗಳೂರು, ಡಿಸೆಂಬರ್ 06: ನಿರಂತರವಾಗಿ ಬದಲಾಗುತ್ತಿರುವ ಹವಾಮಾನ ವೈಪರಿತ್ಯಗಳ ಪ್ರಭಾವದಿಂದಾಗಿ ಕರ್ನಾಟಕದಲ್ಲಿ ಮುಂದಿನ ಎರಡು ವಾರಗಳ ಮಳೆಯ ವಾತಾವರಣ ಕುರಿತು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇತ್ತ ಚಂಡಮಾರುತ ಮೈಚಾಂಗ್ (Cyclone Michaung) ಭೂಮಿಗೆ ಅಪ್ಪಳಿಸಲಿದೆ. ಇದು ಮುಂದಿನ ದಿನಗಳಲ್ಲಿ ದುರ್ಬಲಗೊಳ್ಳುವ ಸಾಧ್ಯತೆಯೂ ಇದೆ.
ಕರ್ನಾಟಕದ ಮಲೆನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಿಗೆ ಮುಂದಿನ ಎರಡು ವಾರ ಹಿಂಗಾರು ಮಳೆ ಚುರುಕುಗೊಳ್ಳಲಿದೆ. ಈಗಾಗಲೇ ರಾಜ್ಯದ ವಿವಿಧೆಡೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ. ಈಗಲೋ ಆಗಲೋ ಮಳೆ ಬರುವಂತೆ ಭಾಸವಾಗುತ್ತಿದೆ.

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಚಂಡಮಾರುತ 'ಮೈಚಾಂಗ್' ತನ್ನ ಕೇಂದ್ರ ಬಿಂದುವಿನಿಂದ ಎರಡೇ ದಿನದಲ್ಲಿ ತಮಿಳುನಾಡು ಕರಾವಳಗೆ ಅಪ್ಪಳಿಸಿದೆ. ಪರಿಣಾಮ ಚೆನ್ನೈನ ಬಹುತೇಕ ಭಾಗಗಳು ಜಲಾವೃತಗೊಂಡಿವೆ. ಇದರ ಪ್ರಭಾವ ತಕ್ಕ ಮಟ್ಟಿಗೆ ಓಡಿಶಾ, ಆಂಧ್ರಪ್ರದೇಶ ಸೇರಿದಂತೆ ಕರ್ನಾಟಕದ ಮೇಲೂ ಆಗಿದೆ.
ಕೆಲವೆಡೆ ಹೆಚ್ಚಾಗಿದೆ ಚಳಿ
ರಾಜಧಾನಿ ಬೆಂಗಳೂರಿನಲ್ಲಿ ಮೂರು ನಾಲ್ಕು ದಿನಗಳಿಂದ ಚಳಿಗಾಳಿ ಬೀಸುತ್ತಿದೆ. ಸಂಜೆ ಮತ್ತು ಬೆಳಗ್ಗೆ ವಿಪರೀತ ತೇವ ಭರಿತ ಗಾಳಿ ಬೀಸುತ್ತಿದೆ. ಇದೇ ರೀತಿಯ ವಾತಾವರಣ ದಕ್ಷಿಣ ಒಳನಾಡಿನ ಒಂದಷ್ಟು ಜಿಲ್ಲೆಗಳಲ್ಲಿ ನಿರ್ಮಾಣವಾಗಿದೆ. ಈ ಜಿಲ್ಲೆಗಳು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ವಾರ ಮಳೆ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನಿಡಿದ್ದಾರೆ.
ಡಿಸೆಂಬರ್ 9ರಿಂದ ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಚಾಮರಾಜನಗರ, ತುಮಕೂರು, ಶಿವಮೊಗ್ಗ, ವಿಜಯನಗರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗಲಿದೆ.

ಸದ್ಯ ಚಂಡಮಾರುತದಿಂದ ಚೆನ್ನೈ ವಿಮಾನ ನಿಲ್ದಾಣ, ಪ್ರಮುಖ ರಸ್ತೆಗಳು, ಬಡಾವಣೆಗಳು, ತಗ್ಗು ಪ್ರದೇಶಗಳ ಮನೆಗಳು ಜಲಾವೃತಗೊಂಡಿವೆ. ಜನ ಜೀವನ ಅಸ್ತವೆಸ್ತವಾಗಿವೆ.
ತಾಪಮಾನದ ಮಾಹಿತಿ
ಕಾರವಾರ ಮತ್ತು ಹೊನ್ನಾವರದಲ್ಲಿ ರಾಜ್ಯದಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಮೂಲಕ ರಾಜ್ಯದಲ್ಲಿ ಗರಿಷ್ಠ ತಾಪಮಾನ ಇಳಿಕೆ ಆಗಿದೆ.
ಬೆಂಗಳೂರಿನಲ್ಲಿ ನಾಳೆಯಿಂದ ನಾಲ್ಕು ದಿನ ಬಿಸಿಲಿನ ವಾತಾವರಣ ಕಂಡು ಬರಲಿದೆ ಎಂದಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಡಿಸೆಂಬರ್ 11ರಿಂದ ನಗರದಲ್ಲಿ ಮತ್ತೆ ಮಳೆಯ ದರ್ಶನವಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಸದ್ಯ ಬೆಂಗಳೂರಿನಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಇಲಾಖೆ ವರದಿ ತಿಳಿಸಿದೆ.












Click it and Unblock the Notifications