Karnataka Rains: ಕರಾವಳಿಗೆ ಮಳೆ ಕ್ಷೀಣ, ಉತ್ತರ ಒಳನಾಡಿಗೆ ಇಂದಿನಿಂದ 5 ದಿನ ಭಾರೀ ಮಳೆಯಾರ್ಭಟ
ಬೆಂಗಳೂರು, ಜುಲೈ 21: ಕರ್ನಾಟಕ ರಾಜ್ಯದ ಕರಾವಳಿ ಭಾಗದಲ್ಲಿ ತುಸು ಮಳೆ ಕ್ಷೀಣಿಸಿದ್ದು, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇಂದಿನಿಂದ ಮುಂದಿನ ಐದು ದಿನ (ಜುಲೈ 25ರ ತನಕ) ಬಿರುಗಾಳಿ ಸಹಿತ ಧಾರಾಕಾರವಾಗಿ ಮಳೆ ಸುರಿಯಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಅಬ್ಬರಿಸಿದ್ದ ಮಳೆರಾಯ ಆ ಭಾಗಕ್ಕೆ ತುಸು ಬಿಡುವು ಕೊಡಲಿದ್ದಾರೆ. ಇತ್ತ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ನಾಲ್ಕೈದು ದಿನಗಳಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಮೋಡ ಕವಿದ ವಾತಾವರಣ ಜೊತೆಗೆ ಚಳಿ ಪ್ರಮಾಣವು ಹೆಚ್ಚಾಗುತ್ತಿದೆ. ತುಂತುರು ಮಳೆ ಇನ್ನೂ ಹಲವೆಡೆ ಬಿರುಸಿನ ಮಳೆ ದಾಖಲಾಗಿದೆ.

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜುಲೈ 25ರವರೆಗೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಸಾಧಾರಣದಿಂದ ಭಾರಿ ಮಳೆಯಾಗಲಿದೆ. ಬೆಳಗಾವಿ ಜಿಲ್ಲೆಗೆ ಐದು ದಿನ ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳಿಗೆ ಮೂರು ದಿನ ಭಾರೀ ಮಳೆ ಬರಲಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇನ್ನುಳಿದಂತೆ ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ಬೀದರ್, ರಾಯಚೂರು ಜಿಲ್ಲೆಗಳಲ್ಲಿ ನಾಲ್ಕು ದಿನ ತುಂತುರು ಮಳೆ, ಕೆಲವೆಡೆ ಬಿರುಸಿನ ಮಳೆ ಆಗಲಿದೆ ಎಂದು ಅಂದಾಜಿಸಲಾಗಿದೆ.
ಕರಾವಳಿಗೆ ಮಳೆ ತುಸು ಇಳಿಕೆ
ಕರಾವಳಿ ಕರ್ನಾಟಕದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಆ ಜಿಲ್ಲೆಗಳಲ್ಲಿ ಪ್ರವಾಹ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಆ ಭಾಗದಲ್ಲಿ ಮಳೆ ತುಸು ಬಿಡುವು ನೀಡುವ ಲಕ್ಷಣಗಳು ಕಂಡು ಬರುತ್ತಿವೆ.

ಈ ಮೂರು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಸುರಿಯುವ ಪ್ರಯುಕ್ತ ಇಂದಿನಿಂದ ಐದು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದು ಉತ್ತರ ಕನ್ನಡ ಜಿಲ್ಲೆ ಆರೆಂಜ್ ಅಲರ್ಟ್ ಪಡೆದಿದೆ.
ದಕ್ಷಿಣ ಒಳನಾಡಿನ ಒಂದೆರಡು ಜಿಲ್ಲೆಗಳಲ್ಲಿ ತುಂತುರು ಮಳೆ ಆಗಬಹುದು ಎನ್ನಲಾಗಿದೆ. ಉಳಿದಂತೆ ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಜೋರು ಮಳೆ ಬರಲಿದ್ದು, ನಾಲ್ಕು ದಿನ ಹಳದಿ ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳನ್ನು ಹೊರತುಪಡಿಸಿದರೆ ಕೆಲವು ದಿನಗಳಿಂದ ರಾಜ್ಯ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಉತ್ತಮ ಮಳೆ ಆಗಿದೆ. ಕೃಷಿ ಚಟುವಟಿಕೆಗಳು ಗರಿ ಗೆದರಿವೆ.
ಇಂದು ಕಿತ್ತಳೆ ಎಚ್ಚರಿಕೆ ಪಡೆದಿರುವ ಉತ್ತರ ಒಳನಾಡಿನಲ್ಲಿ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ ದಾಖಲಾಗಿದೆ. ನೆನ್ನೆ 17 ಸೆಂಟಿ ಮೀಟರ್ ಮಳೆ ಈ ಜಿಲ್ಲೆ ವ್ಯಾಪ್ತಿಯಲ್ಲಿ ದಾಖಳಾಗಿದೆ. ಇನ್ನೂ ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಕೊಡಗು, ಉಡುಪಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಹಿತಿ ನೀಡಿದೆ.












Click it and Unblock the Notifications