ಕರ್ನಾಟಕ ಕರಾವಳಿ ಸೇರಿ ವಿವಿಧೆಡೆ ಮಳೆ, ಆರೆಂಜ್ ಅಲರ್ಟ್
ಬೆಂಗಳೂರು ಜು.12: ಕರಾವಳಿ ಭಾಗದ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧೆಡೆ ಮುಂದಿನ ಐದು ದಿನ (ಜು.17) ಗುಡುಗು ಸಹಿತ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಭಾಗದಲ್ಲಿ ಮಳೆ ಅಬ್ಬರ ತುಸು ಕಡಿಮೆ ಆಗಿದ್ದರು ಸಹ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಗುರುವಾರದವರೆಗೆ ಜೋರು ಮಳೆ ಆಗುವ ಕಾರಣಕ್ಕೆ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ನಂತರ ಜು.17ರವರೆಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ.
ಈ ಅವಧಿಯಲ್ಲಿ 10 ಸೆಂ. ಮೀ. ಗಿಂತಲೂ ಅಧಿಕ ಮಳೆ ಆಗಬಹುದು ಎಂದು ಅಂದಾಜಿಸಲಾಗಿದೆ. ಸಮುದ್ರ ತೀರ ಪ್ರದೇಶದಲ್ಲಿ ಗಾಳಿಯ ವೇಗ 40-50 ಕಿ. ಮೀ. ವೇಗದಲ್ಲಿ ಬೀಸಲಿದ್ದು, ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ.

ಮುನ್ಸೂಚನೆಯ ಐದು ದಿನಗಳ ಪೈಕಿ ಮೊದಲ ಎರಡು ದಿನ ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದ್ದು, ಈ ಜಿಲ್ಲೆಗಳು 'ಆರೆಂಜ್ ಅಲರ್ಟ್' ಪಡೆದಿವೆ. ಉಳಿದ ದಿನ ಮುಂಗಾರು ಇದೇ ಜಿಲ್ಲೆಗಳಲ್ಲಿ ಮಳೆ ಕ್ಷೀಣಿಸಲಿದ್ದು, ಹಾಸನ ಸೇರಿದಂತೆ ಎಲ್ಲ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ.
ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಕಳೆದೊಂದು ವಾರದಿಂದ ಧಾರಕಾರವಾಗಿ ಆಗಾಗ ಮಳೆ ಬೀಳುತ್ತಲೇ ಇದೆ. ಕೆಲ ದಿನಗಳ ಕಾಲ ಮಳೆ ವಾತಾವರಣ ಹೀಗೆ ಮುಂದುವರಿಯಲಿದೆ.
ಉತ್ತರ ಒಳನಾಡಿನ 7ಜಿಲ್ಲೆಗೆ ಭಾರೀ ಮಳೆ; ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣದಿಂದ ಭಾರೀ ಪ್ರಮಾಣ ಮಳೆ ಬೀಳುವ ಸಂಭವವಿದೆ. ಹೀಗಾಗಿ ಇಷ್ಟು ಜಿಲ್ಲೆಗಳಿಗೆ ಬುಧವಾರ ಒಂದು 'ಯೆಲ್ಲೋ ಅಲರ್ಟ್' ಕೊಡಲಾಗಿದೆ. ಬೆಳಗಾವಿ ಜಿಲ್ಲೆಗೆ ಮಾತ್ರ ಜು.17ರವರೆಗೂ ಗುಡುಗು ಸಹಿತ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ವಿವಿಧೆಡೆ ಭಾರಿ ಮಳೆ ದಾಖಲು; ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24ಗಂಟೆಗಳಲ್ಲಿ ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಇದರಲ್ಲಿ ಕ್ಯಾಸಲ್ ರಾಕ್ ಮತ್ತು ಕೊಪ್ಪ ದಲ್ಲಿ ತಲಾ 17ಸೆಂ.ಮೀ ಮಳೆ ಬಿದ್ದರೆ, ಕುಕ್ಕೆ ಸುಬ್ರಹ್ಮಣ್ಯದಲ್ಲಿ 13ಸೆಂ.ಮೀ, ಸಿದ್ದಾಪುರ, ಸೋಮವಾರ ಪೇಟೆಗಳಲ್ಲಿ ತಲಾ 12ಸೆಂ.ಮೀ., ಗೇರುಸೊಪ್ಪದಲ್ಲಿ 11ಸೆಂ.ಮೀ. ಕೊಲ್ಲೂರು, ಶೃಂಗೇರಿಗಳಲ್ಲಿ ತಲಾ 9ಸೆಂ.ಮೀ. ಮಳೆ ದಾಖಲಾಗಿದೆ. ರಾಜ್ಯ ಗರಿಷ್ಠ ಉಷ್ಣಾಂಶ 29.1ಡಿಗ್ರಿ ಸೆಲ್ಸಿಯಸ್ ಹಂಪಿಯಲ್ಲಿ ಮತ್ತು ಕನಿಷ್ಠ ಉಷ್ಣಾಂಶ 17.3ಡಿಗ್ರಿ ಸೆಲ್ಸಿಯಸ್ ಮಡಿಕೇರಿಯಲ್ಲಿ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ.
ಬೆಂಗಳೂರಿಗೆ ಏನಿದೆ ಮಳೆ ಮುನ್ಸೂಚನೆ; ರಾಜ್ಯ ರಾಜಧಾನಿ ಬೆಂಗಳೂರಿಗೆ ಭಾರಿ ಮಳೆಯ ನಿರೀಕ್ಷೆ ಇಲ್ಲದಾಗಿದೆ. ಆದರೆ ಮುಂದಿನ 48ಗಂಟೆ ಮೋಡ ಮುಸುಕಿನ ಹಾಗೂ ಚಳಿಯ ವಾತಾವರಣವೇ ಮುಂದುವರಿಯಲಿದೆ. ಆಗಾಗ ಕೆಲವು ಬಡಾವಣೆಗಲ್ಲಿ ಸೋನೆ, ಇಲ್ಲವೇ ಸಾಮಾನ್ಯ ಪ್ರಮಾಣದಲ್ಲಿ ಮಳೆ ಬೀಳಲಿದೆ. ಈ ವೇಳೆ ಗರಿಷ್ಠ ತಾಪಮಾನ 27ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ತಿಳಿದು ಬಂದಿದೆ.












Click it and Unblock the Notifications