Breaking; ಕರ್ನಾಟಕದ 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಬೆಂಗಳೂರು, ಅಕ್ಟೋಬರ್ 02; ಕರ್ನಾಟಕದ 12 ಜಿಲ್ಲೆಗಳಲ್ಲಿ ಭಾನುವಾರ ಮಳೆಯಾಗುವ ನಿರೀಕ್ಷೆ ಇದೆ. ಸೋಮವಾರ ಸಹ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ನಗರದಲ್ಲಿ ಎರಡು ದಿನಗಳಿಂದ ಸಾಧಾರಣ ಮಳೆಯಾಗುತ್ತಿದೆ. ಭಾನುವಾರ ಮತ್ತು ಸೋಮವಾರ ಸಂಜೆ ಸಹ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಶನಿವಾರ ರಾತ್ರಿಯೂ ನಗರದ ವಿವಿಧ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

ಎರಡು ದಿನಗಳ ಕಾಲ ಬೆಂಗಳೂರು, ಶಿವಮೊಗ್ಗ, ಚಾಮರಾಜನಗರ, ದಾವಣಗೆರೆ ಸೇರಿದಂತೆ 12 ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಮಲೆನಾಡು, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದೆ.
ಯಾವ-ಯಾವ ಜಿಲ್ಲೆಗಳು; ಬಾಗಲಕೋಟೆ, ಬೆಳಗಾವಿ, ವಿಜಯಪುರ, ದಕ್ಷಿಣ ಒಳನಾಡಿನ ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೋಲಾರ, ಕಲಬುರಗಿ, ತುಮಕೂರಿನಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಕರ್ನಾಟಕದ ಕೆಲವು ಭಾಗದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಹೇಳಿದೆ. ಕರ್ನಾಟಕದಲ್ಲಿ ಮಳೆಯಾಗಲಿದೆ ಎಂದು ಕೆಎಸ್ಎನ್‌ಎಂಡಿಸಿ ಸಹ ಹೇಳಿದೆ.
ಜೂನ್‌ನಿಂದ ಸೆಪ್ಟೆಂಬರ್ ತನಕ ನೈಋತ್ಯ ಮುಂಗಾರು ಅವಧಿ ಇರುತ್ತದೆ. ಆದರೆ ಈ ಬಾರಿ ಸೆಪ್ಟೆಂಬರ್ ತಿಂಗಳಿನಲ್ಲಿಯೂ ಮಳೆ ಮುಂದುವರೆದಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಡಿಕೆ, ಭತ್ತ, ಜೋಳ ಸೇರಿದಂತೆ ವಿವಿಧ ಬೆಳೆಗಳು ನೀರುಪಾಲಾಗಿವೆ.
ಕೊಡಗು ಜಿಲ್ಲೆಯಲ್ಲಿ ಮಳೆ; ಕೊಡಗು ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಸರಾಸರಿ 7.23 ಮಿ. ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ 3166.69 ಮಿ. ಮೀ. ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2430.55 ಮಿ.ಮೀ ಮಳೆಯಾಗಿತ್ತು.












Click it and Unblock the Notifications