ಚಳಿ ಜೊತೆಗೆ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ
ಬೆಂಗಳೂರು, ಜನವರಿ 02; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಚಳಿಯ ಅಬ್ಬರ ಜೋರಾಗಿದೆ. ಮುಂಜಾನೆ ಮತ್ತು ರಾತ್ರಿ ಚಳಿ, ಗಾಳಿಯಿಂದಾಗಿ ಜನರು ನಡುಗುತ್ತಿದ್ದಾರೆ. ಇದರ ಜೊತೆಗೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಭಾನುವಾರ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ಮಳೆಯಾಗಿತ್ತು. ಶನಿವಾರ ಮೋಡ ಕವಿದ ವಾತಾವರಣ, ಗಾಳಿ ಇತ್ತು.
ಶ್ರೀಲಂಕಾದ ಕರಾವಳಿ, ಬಂಗಾಳಕೊಲ್ಲಿಯ ನೈಋತ್ಯದಲ್ಲಿ ಉಂಟಾಗಿರುವ ಸುಳಿಗಾಳಿಯ ಪ್ರಭಾವದಿಂದ ರಾಜ್ಯದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ತಮಿಳುನಾಡು, ಆಂಧ್ರ ಪ್ರದೇಶ, ಅಸ್ಸಾಂ, ಮೇಘಾಲಯ ರಾಜ್ಯಗಳಲ್ಲಿ ಈಗಾಗಲೇ ಮಳೆಯಾಗುತ್ತಿದೆ.

ಭಾನುವಾರ ಮುಂಜಾನೆ ಬೆಂಗಳೂರು ನಗರದಲ್ಲಿ ಚಳಿ ಇದೆ. ನಗರದಲ್ಲಿ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಸೂಚನೆ ನೀಡಲಾಗಿದೆ. ಬೆಳಗ್ಗೆ ಮತ್ತು ಸಂಜೆ ಶೀತ ಗಾಳಿ ಬೀಸಲಿದೆ.
ಕರ್ನಾಟಕದ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಸಾಧಾರಣ ಮಳೆಯಾಗುತ್ತಿದೆ. ಭಾನುವಾರವೂ ಸಹ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ತಮಿಳುನಾಡಿನಲ್ಲಿ ಮಳೆ; ಗುರುವಾರ ಮಧ್ಯಾಹ್ನದಿಂದ ತಮಿಳುನಾಡಿನಲ್ಲಿ ಮಳೆಯಾಗುತ್ತಿದೆ. ಕೆಲವೇ ಗಂಟೆಗಳಲ್ಲಿ 15 ಸೆಂ. ಮಿ.ಗೂ ಅಧಿಕ ಮಳೆಯಾಗಿದ್ದು, ಜನರು ಪರದಾಡುವಂತೆ ಆಗಿತ್ತು.
ಭಾನುವಾರ ತಮಿಳುನಾಡು, ಪುದುಚೇರಿ, ಕಾರೈಕಲ್, ಆಂಧ್ರ ಪ್ರದೇಶದ ದಕ್ಷಿಣ ಭಾಗದಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಪುದುಚೇರಿಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್ ಘೋಷಣೆ ಮಾಡಿದೆ.
ಚೆನ್ನೈನಲ್ಲಿ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಹವಾಮಾನ ಮುನ್ಸೂಚನೆ ನೀಡಲು ಅಗತ್ಯವಿರುವ ಅತ್ಯಾಧುನಿಕ ಉಪಕರಣಗಳನ್ನು ಒದಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ.
ಜನವರಿ 3ರ ಬಳಿಕ ಚೆನ್ನೈ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಲಿದೆ ಎಂದು ಸೂಚನೆ ಕೊಡಲಾಗಿದೆ. ಶನಿವಾರ ಮುಂದಿನ 48 ಗಂಟೆಗಳ ಕಾಲ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ಕೊಡಲಾಗಿತ್ತು.
ವಿವಿಧ ರಾಜ್ಯಗಳಲ್ಲಿ ಮಳೆ; ಪಂಜಾಬ್, ಹರ್ಯಾಣ, ಚಂಡೀಗಢ, ನವದೆಹಲಿ, ರಾಜಸ್ಥಾನದಲ್ಲಿ ಭಾನುವಾರ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರದಲ್ಲಿ ಮಳೆಯ ಜೊತೆ ಚಳಿಯ ಅಬ್ಬರ ಹೆಚ್ಚಿರಲಿದೆ.
ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲಿ ಶೀತಗಾಳಿಯ ಕಾರಣದಿಂದಾಗಿ ಚಳಿ ಹೆಚ್ಚಿರಲಿದೆ. ರಾಜ್ಯದ ಉತ್ತರ ಒಳನಾಡಿನಲ್ಲಿ ಮಳೆಯಾಗುವುದಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಶ ಬೆಂಗಳೂರು 16, ಮಂಗಳೂರು 24, ಶಿವಮೊಗ್ಗ 19, ಬೆಳಗಾವಿ 17, ಮೈಸೂರು 17, ಮಡಿಕೇರಿ 16, ಚಾಮರಾಜನರ 17, ತುಮಕೂರು 16, ಚಿಕ್ಕಬಳ್ಳಾಪುರ 14 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ.
ಕರ್ನಾಟಕದಲ್ಲಿ ಜೂನ್‌ನಲ್ಲಿ ಆರಂಭವಾದ ನೈಋತ್ಯ ಮುಂಗಾರು ಮಳೆ ಜೂನ್ 2ನೇ ವಾರದ ಬಳಿಕ ಕೊಂಚ ಬಿಡುವು ಕೊಟ್ಟಿತ್ತು. ಬಳಿಕ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತು.
ಬಳಿಕ ವಿವಿಧ ಚಂಡಮಾರುತಗಳ ಪ್ರಭಾವದಿಂದ ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿಯೂ ಅಕಾಲಿಕ ಮಳೆ ಸುರಿದು ರೈತನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತ್ತು. ತರಕಾರಿ, ತೋಟಗಾರಿಕಾ ಬೆಳೆಗಳು, ಅಡಕೆ, ಭತ್ತ ಹೀಗೆ ವಿವಿಧ ಬೆಳೆಗಳಿಗೆ ಹಾನಿಯಾಗಿತ್ತು. ಡಿಸೆಂಬರ್ ತಿಂಗಳಿನಲ್ಲಿಯೇ ಮಳೆ ಸಂಪೂರ್ಣ ಬಿಡುವು ಕೊಟ್ಟಿತ್ತು.












Click it and Unblock the Notifications