ಕರ್ನಾಟಕದಲ್ಲಿ ಮೂರು ದಿನ ಗುಡುಗು ಸಹಿತ ಭಾರಿ ಮಳೆ
ಬೆಂಗಳೂರು, ಮೇ 07 : ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಗುಡುಗು ಸಹಿತ ಮಳೆಯಾಗುತ್ತಿದೆ. ಇನ್ನೂ ಮೂರು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಂಡಮಾನ್ ಬಳಿ ಹಾಗೂ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರಿಂದಾಗಿ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಆದರೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉಷ್ಣಾಂಶವೂ ಏರಿಕೆಯಾಗಿದೆ.
ಮೇ 7, 8 ಮತ್ತು 11ರಂದು ಚಿಕ್ಕಮಗಳೂರು, ಕೊಡಗು, ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ, ಬೆಂಗಳೂರು ನಗರದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಬುಧವಾರ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ. ಪುತ್ತೂರು ಮತ್ತು ಹೊಸದುರ್ಗದಲ್ಲಿ 50 ಮಿ. ಮೀ., ತಿಪಟೂರಿನಲ್ಲಿ 40 ಮಿ. ಮೀ., ಮಾಣಿ, ಆಲ್ದೂರು, ಸಕಲೇಶಪುರ, ಕೊಟ್ಟಿಗೆಹಾರದಲ್ಲಿ 20 ಮಿ. ಮೀ. ಮಳೆಯಾಗಿದೆ.
ಬೆಂಗಳೂರು ನಗರ, ಬೆಳ್ತಗಂಡಿ, ಧರ್ಮಸ್ಥಳ, ಉಪ್ಪಿನಂಗಡಿ, ಮಡಿಕೇರಿ, ಬೇಲೂರು, ಅರಕಲಗೂಡು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆಯಾಗಿದೆ. ಮೂರು ದಿನ ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ಮಳೆಯಾಗಲಿದೆ.
ಮೇ ತಿಂಗಳ ಆರಂಭದಲ್ಲಿ ಬಿಸಿಲ ಧಗೆ ಜೋರಾಗಿದೆ. ಬುಧವಾರ ಕಲಬುರಗಿಯಲ್ಲಿ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ವಿಜಯಪುರದಲ್ಲಿ 41, ರಾಯಚೂರಿನಲ್ಲಿ 40, ಬೀದರ್‌ನಲ್ಲಿಯೂ 40 ಡಿಗ್ರಿ ತಾಪಮಾನ ದಾಖಲಾಗಿದೆ.












Click it and Unblock the Notifications