ಕರ್ನಾಟಕ ಹವಾಮಾನ; ಸೋಮವಾರದ ತನಕ ಮಳೆ ಮುನ್ಸೂಚನೆ
ಬೆಂಗಳೂರು, ಏಪ್ರಿಲ್ 17; ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಅಬ್ಬರ ಮುಂದುವರೆದಿದೆ. ಏಪ್ರಿಲ್ 18ರ ತನಕ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮದಿಂದ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಕೇರಳ, ತಮಿಳುನಾಡು ರಾಜ್ಯಗಳಲ್ಲಿಯೂ ಧಾರಾಕಾರ ಮಳೆ ಸುರಿಯುತ್ತಿದೆ.
ಏಪ್ರಿಲ್ 17, 18ರಂದು ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಕೋಲಾರ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ ಮತ್ತು ಬಳ್ಳಾರಿಯಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ.

ಈ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಗದಗ ಜಿಲ್ಲೆಗಳಲ್ಲಿ ಸಹ ಮಳೆಯಾಗಲಿದೆ ಎಂದು ವರದಿ ಹೇಳಿದೆ.
ವಾಡಿಕೆಗಿಂತ ಅಧಿಕ ಮಳೆ; ಕಳೆದ ಒಂದು ವಾರದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಏಪ್ರಿಲ್ 10 ರಿಂದ 16ರ ತನಕ 8 ಮಿ. ಮೀ. ಮಳೆ ರಾಜ್ಯದಲ್ಲಿ ಆಗಬೇಕಿತ್ತು. ಆದರೆ 16 ಮಿ. ಮೀ. ಮಳೆಯಾಗಿದೆ.
ಶನಿವಾರ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಸಿಡಿಲು ಬಡಿದು 5 ಜನರು ಮೃತಪಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಸಮೀಪದ ಅರಸನಘಟ್ಟ ಗ್ರಾಮದಲ್ಲಿ ಗಾಳಿ, ಮಳೆಗೆ 3 ಸಾವಿರಕ್ಕೂ ಅಧಿಕ ಬಾಳೆ ಗಿಡಗಳು ನಾಶವಾಗಿವೆ.
ಸಿಡಿಲು ಬಡಿದು ಶಿರಹಟ್ಟಿ ತಾಲೂಕಿನಲ್ಲಿ ಮಾವಿನ ತೋಟ ಕಾಯುತ್ತಿದ್ದ ದೊಡ್ಡಮನಿ (55) ಮೃತಪಟ್ಟಿದ್ದಾರೆ. ದನ ಮೇಯಿಸಲು ಹೋಗಿದ್ದ ಮುಗುರೇಶ ಹೊಸಮನಿ (40) ಸಹ ಮೃತಪಟ್ಟಿದ್ದಾರೆ.

ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಹನುಮಪ್ಪ ಮನ್ನಾಪುರ (22) ವೆಂಕಟಾಪುರದಲ್ಲಿ ಕುರಿ ಕಾಯುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮನೀಷಾ ದತ್ತು ಗುರವ (40) ಸಾವನ್ನಪ್ಪಿದ್ದಾರೆ.
7 ಮರಗಳು ಧರೆಗೆ; ಶನಿವಾರ ರಾತ್ರಿ ಬೆಂಗಳೂರು ನಗರದಲ್ಲಿ ಸುರಿದ ಮಳೆಗೆ 7 ಮರಗಳು ಧರೆಗೆ ಉರುಳಿದೆ. ಹಲವು ಕಡೆ ವಿದ್ಯುತ್ ತಂತಿಗಳು ತುಂಡಾಗಿ, ಕೆಲವು ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು.
#WATCH | Karnataka: Vehicles submerge due to waterlogging after heavy rain in Bengaluru
— ANI (@ANI) April 16, 2022
Visuals from Mahalakshmi Layout pic.twitter.com/a2gxAbe22z
ಬಸವೇಶ್ವರ ನಗರ 92, ಕೊಟ್ಟಿಗೆಪಾಳ್ಯ 87.5, ಶಿವನಗರ 70, ನಾಗಪುರ 69, ಗುಟ್ಟಹಳ್ಳಿ 69, ರಾಜಾಜಿನಗರ 67, ಕಾಟನ್ ಪೇಟೆ 61, ಮಾರುತಿ ಮಂದಿರ 60, ಚಾಮರಾಜಪೇಟೆ 51, ಅಗ್ರಹಾರ ದಾಸರಹಳ್ಳಿ 52, ಕಗ್ಗಲಿಪುರ 51, ನಾಯಂಡಹಳ್ಳಿ 39 ಮಿ. ಮೀ. ಮಳೆಯಾಗಿದೆ.
ಮಹಾಲಕ್ಷ್ಮೀ ಲೇಔಟ್ ಮತ್ತು ಚಿಕ್ಕಪೇಟೆಯಲ್ಲಿ ಮಳೆ ನೀರು ರಸ್ತೆಯ ಮೇಲೆ ಹರಿದು ಬೈಕ್‌ಗಳು ನೀರಿನಲ್ಲಿ ಮುಳುಗಡೆಗೊಂಡವು. ಚರಂಡಿ ವ್ಯವಸ್ಥೆ ಸರಿಪಡಿಸದ ಬಿಬಿಎಂಪಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಜಿಲ್ಲೆಗಳಲ್ಲಿ ಮಳೆ; ಗದಗ, ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಶನಿವಾರ ಗುಡುಗು ಸಹಿತ ಮಳೆಯಾಗಿದೆ. ಶಿವಮೊಗ್ಗ ನಗರದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದೆ.
ಹೊಳೆಹೊನ್ನೂರು, ಭದ್ರಾವತಿ, ತೀರ್ಥಹಳ್ಳಿ, ರಿಪ್ಪನ್‌ಪೇಟೆ, ಆನವಟ್ಟಿ ಸಹಿತ ಹಲವು ಕಡೆ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಜೋಯಿಡಾದಲ್ಲಿಯೂ ಅರ್ಧ ಗಂಟೆಗಳ ಕಾಲ ಮಳೆ ಸುರಿದಿದೆ.
ಮೈಸೂರು ಜಿಲ್ಲೆಯ ಕೆ. ಆರ್. ನಗರದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ರೈತರಿಗೆ ನಷ್ಟವಾಗಿದೆ. ಬಾಳೆ, ತೆಂಗಿನ ಸಸಿಗಳಿಗೆ ಹಾನಿಯಾಗಿದೆ. ಕೋಲಾರ ಜಿಲ್ಲೆಯಲ್ಲಿ ಸುರಿದ ಮಳೆಗೆ ಮಾವಿನ ಗಿಡಗಳು ಮುರಿದಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ಹಾನಿ ಉಂಟಾಗಿದೆ.












Click it and Unblock the Notifications